ಗಂಭೀರ್‌ಗೆ ಕೊಕ್, ಧವನ್‌ಗೆ ಅವಕಾಶ

7
ಕ್ರಿಕೆಟ್: ತಂಡಕ್ಕೆ ಮರಳಿದ ಹರಭಜನ್; ಭುವನೇಶ್ವರ್, ಅಶೋಕ್ ದಿಂಡಾಗೆ ಸ್ಥಾನ

ಗಂಭೀರ್‌ಗೆ ಕೊಕ್, ಧವನ್‌ಗೆ ಅವಕಾಶ

Published:
Updated:
ಗಂಭೀರ್‌ಗೆ ಕೊಕ್, ಧವನ್‌ಗೆ ಅವಕಾಶ

ಮುಂಬೈ (ಪಿಟಿಐ/ಐಎಎನ್‌ಎಸ್): ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದ ಗೌತಮ್ ಗಂಭೀರ್ ಅವರನ್ನು ಕೈಬಿಡುವ ಮೂಲಕ ಬಿಸಿಸಿಐ ರಾಷ್ಟ್ರೀಯ ಆಯ್ಕೆದಾರರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡ ಆಯ್ಕೆ ಮಾಡಿದ್ದು, ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‌ಗೆ ಅವಕಾಶ ನೀಡಿದ್ದಾರೆ.ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಭಾನುವಾರ ಸಭೆ ಸೇರಿದ್ದ ಸಂದೀಪ್ ಪಾಟೀಲ್ ಸಾರಥ್ಯದ ಆಯ್ಕೆದಾರರು, ವೀರೇಂದ್ರ ಸೆಹ್ವಾಗ್‌ಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದ್ದಾರೆ. ಮಹೇಂದ್ರ ಸಿಂಗ್ ದೋನಿ ಅವರನ್ನು ನಾಯಕರಾಗಿ ಮುಂದುವರಿಸಲೂ ತೀರ್ಮಾನಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಸ್ಥಾನ ಉಳಿಸಿಕೊಂಡಿದ್ದಾರೆ. ಮೊದಲ ಟೆಸ್ಟ್ ಚೆನ್ನೈನಲ್ಲಿ ಫೆಬ್ರುವರಿ 22ರಂದು ಆರಂಭವಾಗಲಿದೆ.ಟೆಸ್ಟ್ ಪಂದ್ಯಗಳ ಶತಕದ ಸನಿಹ ಇರುವ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ (99 ಪಂದ್ಯ) ತಂಡಕ್ಕೆ ಮರಳಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ತೋರಿರುವುದು ಅವರನ್ನು ಮತ್ತೆ ಪರಿಗಣಿಸಲು ಪ್ರಮುಖ ಕಾರಣ. ಭಜ್ಜಿ ಕಾಂಗರೂ ಪಡೆ ವಿರುದ್ಧ 16 ಪಂದ್ಯಗಳಿಂದ 90 ವಿಕೆಟ್ ಕಬಳಿಸಿದ್ದಾರೆ.ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ಸರಣಿಯಲ್ಲಿ ಗಮನ ಸೆಳೆದಿರುವ ಭುವನೇಶ್ವರ್ ಕುಮಾರ್ ಹಾಗೂ ಧವನ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಹೊಸಬರು. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅನುಭವಿ ವೇಗಿಗಳಾದ ಜಹೀರ್ ಖಾನ್ ಹಾಗೂ ಉಮೇಶ್ ಯಾದವ್ ಲಭ್ಯರಾಗದ ಕಾರಣ ಉತ್ತರ ಪ್ರದೇಶದ ಭುವನೇಶ್ವರ್‌ಗೆ ಅವಕಾಶ ಲಭಿಸಿದೆ. ಪಶ್ಚಿಮ ಬಂಗಾಳದ ಅಶೋಕ್ ದಿಂಡಾ ಈ ಮೊದಲು ಬದಲಿ ಆಟಗಾರನಾಗಿ ತಂಡದಲ್ಲಿದ್ದರಾದರೂ ಅವಕಾಶ ಸಿಕ್ಕಿರಲಿಲ್ಲ. 15 ಆಟಗಾರರ ತಂಡದಲ್ಲಿ ಅವರು ಈ ಬಾರಿಯೂ ಸ್ಥಾನ ಗಿಟ್ಟಿಸಿದ್ದಾರೆ.ಆದರೆ ಇರಾನಿ ಕಪ್‌ನಲ್ಲಿಶತಕ ಗಳಿಸಿ ಗಮನ ಸೆಳೆದಿದ್ದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಮಧ್ಯಮ ಕ್ರಮಾಂಕದ ಪೈಪೋಟಿಯಲ್ಲಿ ಅಜಿಂಕ್ಯ ರಹಾನೆ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ರಣಜಿ ಕ್ರಿಕೆಟ್‌ನ `ಬ್ರಾಡ್ಮನ್' ಎನಿಸಿಕೊಂಡಿರುವ ವಾಸೀಮ್ ಜಾಫರ್ ಅವರಿಗೆ ಮತ್ತೆ ನಿರಾಸೆಯಾಗಿದೆ. ವೇಗಿಗಳಾದ ಎಸ್.ಶ್ರೀಶಾಂತ್ ಹಾಗೂ ಅಭಿಮನ್ಯು ಮಿಥುನ್ ಅವರಿಗೂ ಸ್ಥಾನ ಲಭಿಸಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆ ತಂಡದಲ್ಲಿದ್ದ ವೇಗಿ ಪರ್ವಿಂದರ್ ಅವಾನ ಅವರನ್ನು ಕೈಬಿಡಲಾಗಿದೆ. ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಸ್ಥಾನ ಉಳಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಹಾಗೂ ಇಶಾಂತ್ ಶರ್ಮ ಅವರ ಆಯ್ಕೆ ಈ ಮೊದಲೇ ಖಚಿತವಾಗಿತ್ತು.ಗಂಭೀರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸಿ ಮೂರು ವರ್ಷಗಳಾಗಿವೆ. ಈ ನಡುವೆ ಆಡಿದ 26 ಟೆಸ್ಟ್ ಪಂದ್ಯಗಳಲ್ಲಿ ಕೇವಲ 30.2 ಸರಾಸರಿ ಹೊಂದಿದ್ದಾರೆ. ಅವರ ಬದಲು ಸ್ಥಾನ ಪಡೆದಿರುವ ನವದೆಹಲಿಯ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಪ್ರಥಮ ದರ್ಜೆ ಕ್ರಿಕೆಟ್‌ನ ಈ ಋತುವಿನಲ್ಲಿ 55.53 ಸರಾಸರಿಯಲ್ಲಿ 833 ರನ್ ಗಳಿಸಿದ್ದಾರೆ. ಅದರಲ್ಲಿ ನಾಲ್ಕು ಶತಕಗಳು ಸೇರಿವೆ.

ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಇತ್ತೀಚೆಗೆ ಧವನ್ ಶತಕ ಗಳಿಸಿದ್ದರು. ಹಿರಿಯ ಹಾಗೂ ಅನುಭವಿ ಜಾಫರ್ ಅವರನ್ನು ಹಿಂದಿಕ್ಕಿ ಅವರು ಸ್ಥಾನ ಗಿಟ್ಟಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಟೆಸ್ಟ್ ಆಡಿದ್ದ ಮುಂಬೈನ ಜಾಫರ್ ದೇಶಿ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸುತ್ತಿದ್ದರೂ ಆಯ್ಕೆದಾರರು ಅವರನ್ನು ಪರಿಗಣಿಸಿಲ್ಲ.ಸರಣಿ ವೇಳಾಪಟ್ಟಿ: ಮೊದಲ ಟೆಸ್ಟ್: ಫೆಬ್ರುವರಿ 22-26 (ಚೆನ್ನೈ), ಎರಡನೇ ಟೆಸ್ಟ್: ಮಾರ್ಚ್ 02-06 (ಹೈದರಾಬಾದ್), ಮೂರನೇ ಟೆಸ್ಟ್: ಮಾ. 14-18 (ನವದೆಹಲಿ) ಹಾಗೂ ನಾಲ್ಕನೇ ಟೆಸ್ಟ್: ಮಾ.22-26 (ಮೊಹಾಲಿ).

ಬೆಂಗಳೂರಿನಲ್ಲಿ ಶಿಬಿರ

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಆಗಿರುವ 15 ಆಟಗಾರರು ಬೆಂಗಳೂರಿನ ಎನ್‌ಸಿಎನಲ್ಲಿ ಫೆಬ್ರುವರಿ 16ರಿಂದ 18ರವರೆಗೆ ನಡೆಯಲಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry