ಗಗನಕ್ಕೆ `ಕಳ್ಳಿ'ಯ ಲಗ್ಗೆ!

ಶನಿವಾರ, ಜೂಲೈ 20, 2019
28 °C

ಗಗನಕ್ಕೆ `ಕಳ್ಳಿ'ಯ ಲಗ್ಗೆ!

Published:
Updated:

ಪ್ರಕೃತಿಯ ಒಡಲಲ್ಲಿ ಕಂಡರಿಯದಷ್ಟು ವಿಸ್ಮಯಗಳು ಹುದುಗಿಕೊಂಡಿವೆ. ನಿಸರ್ಗದ ಅಸಹಜ ಪ್ರಕ್ರಿಯೆ ಮಾತ್ರ ಮನುಷ್ಯನನ್ನು ಬೆರಗುಗೊಳಿಸುತ್ತಲೇ ಇರುತ್ತವೆ. ಧಾರವಾಡದ ಶ್ರೀ ಮಂಜುನಾಥೇಶ್ವರ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಆವರಣದಲ್ಲಿ ಘಟ ಸರ್ಪವೊಂದು ಹೆಡೆ ಎತ್ತಿದಂತೆ 98 ಅಡಿವರೆಗೆ ಬೆಳೆದ ನಿಂತ ಪಾಪಾಸುಕಳ್ಳಿ ಸಹ ಪ್ರಕೃತಿಯ ವಿಸ್ಮಯವೇ ಸರಿ.ಆಸ್ಪತ್ರೆಯ ಆವರಣದಲ್ಲಿ 2002ರ ಆಗಸ್ಟ್ 15ರಂದು ನೆಡಲಾಗಿದ್ದ ಪಾಪಾಸುಕಳ್ಳಿ 2009ರ ಡಿಸೆಂಬರ್ 23ರಂದು 78.8 ಅಡಿ (24 ಮೀಟರ್) ಎತ್ತರ ಬೆಳೆದು `ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ಹೊಸ ದಾಖಲೆ ಸೃಷ್ಟಿಸಿತು. ಅದು ಬದುಕಿನ ಪಯಣ ಮುಂದುವರಿಸಿದೆ. 2013ರ ಜುಲೈ 14ರಂದು ಅಳತೆ ಮಾಡಿದಾಗ ಈ ಪಾಪಾಸು ಕಳ್ಳಿಯ ಎತ್ತರ 98 ಅಡಿಗೂ ಹೆಚ್ಚಿತ್ತು! 100 ಅಡಿ ತಲುಪುವ ತವಕದಲ್ಲಿರುವ ಪಾಪಾಸುಕಳ್ಳಿ ಹೊಸ ದಾಖಲೆಯನ್ನು ಸೃಷ್ಟಿಸಲು ಮುಗಿಲತ್ತ ಮುನ್ನುಗ್ಗುತ್ತಿದೆ.ಕಳ್ಳಿಗೆ ಆಧಾರ

ಪಾಪಾಸುಕಳ್ಳಿ ಗೋಡೆಗೆ ತಾಗಿಕೊಂಡೆ ಬೆಳೆದಿದ್ದು, ಮಳೆ ಗಾಳಿಗೆ ಬೀಳದಂತೆ ಅಲ್ಲಲ್ಲಿ 35 ಕಡೆ ಸಲಾಕೆಯ ರಿಂಗ್ ಮಾಡಿ ಆಧಾರ ಒದಗಿಸಲಾಗಿದೆ. ಕಟ್ಟಡದ ಮೇಲ್ಭಾಗದಲ್ಲಿ ಮೊಬೈಲ್ ಟವರ್ ಮಾದರಿಯಲ್ಲಿ ಕಬ್ಬಿಣದ ಗೋಪುರ ನಿರ್ಮಿಸಲಾಗಿದೆ. ಭಾರದಿಂದಾಗಿ ಮೇಲ್ಭಾಗದಲ್ಲಿ ಅಲ್ಲಲ್ಲಿ ತಿರುವು ಮುರುವು ಪಡೆದರೂ ತನ್ನ ಬೆಳವಣಿಗೆಯನ್ನು ಮುಂದುವರಿಸಿದೆ. ತೋಟದ ನಿರ್ವಹಣೆ ಮಾಡುತ್ತಿರುವ ಸುರೇಂದ್ರ ಶೇಲಾರ, ವೀರಭದ್ರ ಬಸವಣ್ಣವರ, ಜಿ.ಎಂ.ಮಗಳೂರು, ಜಿ.ಎಸ್. ಅಮ್ಮಿನಭಾವಿ ಅವರು ಪಾಪಾಸುಕಳ್ಳಿಯ (ಕ್ಯಾಕ್ಟಸ್) ಆರೈಕೆಯಲ್ಲಿ ತೊಡಗಿದ್ದಾರೆ. cereus peruvianus(L) Mill  ವರ್ಗಕ್ಕೆ ಸೇರಿದ ಪಾಪಾಸುಕಳ್ಳಿಯ ಮೂಲ ದಕ್ಷಿಣ ಅಮೆರಿಕ. ಅಮೆರಿಕದಲ್ಲಿ 17.67 ಮೀಟರ್ (57 ಅಡಿ) ಎತ್ತರ ಬೆಳೆದಿದ್ದ ಪಾಪಾಸುಕಳ್ಳಿ ಪತ್ತೆಯಾಗ್ದ್ದಿದು 1998ರಲ್ಲಿ. ತಜ್ಞರ ತಂಡ ಅದನ್ನು ಪರಿಶೀಲಿಸಿದ ನಂತರ `ಗಿನ್ನೆಸ್ 1999 ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ದಾಖಲಿಸಿತು. 2004ರಲ್ಲಿ ಇನ್ನೊಂದು ಕ್ಯಾಕ್ಟಸ್ 72 ಅಡಿ ಬೆಳೆದು ದಾಖಲೆ ಬರೆಸಿಕೊಂಡಿತು. ಮಾಹಿತಿ ತಂತ್ರಜ್ಞಾನದ ಪರಿಣಾಮ ಮೂರೂವರೆ ವರ್ಷಗಳ ಹಿಂದೆ ಧಾರವಾಡ ತಾಲ್ಲೂಕಿನ ಸತ್ತೂರಿನ ಪಾಪಾಸುಕಳ್ಳಿ ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಹೆಸರು ದಾಖಲಿಸಿಕೊಂಡಿತು.`ನಮ್ಮ ಕಾಲೇಜಿನ ಆವರಣದಲ್ಲಿರುವ ಕ್ಯಾಕ್ಟಸ್ ಗಿನ್ನೆಸ್ ಪುಸ್ತಕದಲ್ಲಿ ದಾಖಲೆಯಾದ ನಂತರ ಕಾಲೇಜಿನ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಪ್ರಾಚಾರ್ಯ ಡಾ.ಶ್ರೀನಾಥ ಠಾಕೂರ್ ಅವರು ಕ್ಯಾಕ್ಟಸ್ ರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದಾರೆ. ತೋಟದ ಸಿಬ್ಬಂದಿ ಅದರ ಮೇಲೆ ವಿಶೇಷ ನಿಗಾ ಇಟ್ಟಿದ್ದಾರೆ' ಎಂದು ಹೇಳುತ್ತಾರೆ ಎಸ್‌ಡಿಎಂ ಕಾಲೇಜಿನ ಗ್ರಂಥಪಾಲಕ ಬಿ.ಎಸ್. ಹಳೇಮನಿ.`ದಂತ ಮಹಾವಿದ್ಯಾಲಯದ ಕಟ್ಟಡ ಸುಮಾರು 60 ಅಡಿ ಎತ್ತರ ಇದೆ. ಕಟ್ಟಡದ ಮೇಲೆ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಕ್ಯಾಕ್ಟಸ್‌ನ ಸಂರಕ್ಷಣೆಗಾಗಿಯೇ 62 ಎತ್ತರದ ಕಬ್ಬಿಣದ ಗೋಪುರ ನಿರ್ಮಾಣ ಮಾಡಲಾಗಿದೆ. ಕ್ಯಾಕ್ಟಸ್‌ಗೆ ಯಾವುದೇ ರೀತಿಯ ರಾಸಾಯನಿಕ ಗೊಬ್ಬರ ನೀಡಿಲ್ಲ. ಇತರೆ ಸಸಿಗಳಿಗೆ ಕೊಡುವ ಗೊಬ್ಬರವನ್ನು ಮಾತ್ರ ಹಾಕುತ್ತೇವೆ. ನೈಸರ್ಗಿಕವಾಗಿಯೇ ಅದು ಇಷ್ಟು ಎತ್ತರದಲ್ಲಿ ಬೆಳೆದಿದೆ' ಎಂದು ಮಾಹಿತಿ ಒದಗಿಸಿದರು ಹಳೇಮನಿ.ಹೀಗಿದೆ ಜೀವನ

`ಕ್ಯಾಕ್ಟಸ್ ನಿಧಾನಗತಿಯಲ್ಲಿ ಬೆಳೆಯುವ ಸಸ್ಯ. ಚಳಿಗಾಲ ಹಾಗೂ ಬೇಸಿಗೆಯಲ್ಲಿ ಇದರ ಬೆಳವಣಿಗೆ ಜಾಸ್ತಿ. ಇದರ ಬೆಳವಣಿಗೆಯ ಪ್ರಮಾಣ ಶೀತವಲಯ ಪ್ರದೇಶದಲ್ಲಿ ಕಡಿಮೆ ಇದ್ದರೆ, ಉಷ್ಣವಲಯದಲ್ಲಿ ಅಧಿಕವಾಗಿರುತ್ತದೆ. ಮಣ್ಣು ಹಾಗೂ ಹವಾಗುಣ ಸಹ ಇದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ವಾರ್ಷಿಕ 6ರಿಂದ 8 ಇಂಚು ಬೆಳವಣಿಗೆ ಹೊಂದುತ್ತದೆ' ಎಂದು ಹೇಳುತ್ತಾರೆ ಧಾರವಾಡ ಜೆಎಸ್‌ಎಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಆರ್.ಪರಿಮಳಾ.`ಧಾರವಾಡ ಹಾಗೂ ಕುಂದಗೋಳ ಪರಿಸರದಲ್ಲಿ ಇವು ಹೆಚ್ಚಾಗಿ ಕಾಣುತ್ತವೆ. ಎಸ್‌ಡಿಎಂ. ಕಾಲೇಜಿನ ತೋಟದಲ್ಲಿ ಬೆಳೆದಿರುವ ಕ್ಯಾಕ್ಟಸ್ ಅಂತರರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯನ್ನೇ ಸೃಷ್ಟಿಸಿದೆ. ಉತ್ತಮ ಪೋಷಣೆ ಹಾಗೂ ಸಂರಕ್ಷಣೆ ಒದಗಿಸಿರುವ ಕಾರಣ ಅದು ಇಷ್ಟು ಎತ್ತರದಲ್ಲಿ ಬೆಳೆಯಲು ಸಾಧ್ಯವಾಗಿದೆ. ಇದರ ಬೆಳವಣಿಗೆಯ ಹಂತವೂ ಗರಿಷ್ಠವಾಗಿದೆ. ಕಂದು ವರ್ಣದ ಮೊಗ್ಗು ಬಿಟ್ಟರೂ ಶ್ವೇತ ವರ್ಣದ ಹೂವೇ ಅರಳುತ್ತದೆ. ಇದು ಕ್ಯಾಕ್ಟಸ್‌ನ ವೈಶಿಷ್ಟ್ಯ' ಎನ್ನುತ್ತಾರೆ ಪರಿಮಳಾ.ಪಾಪಾಸುಕಳ್ಳಿಯ ಬೆಳವಣಿಗೆ ಬಹಳ ನಿಧಾನ. ಕೆಲವು ಪ್ರಭೇದ 10 ವರ್ಷಗಳಲ್ಲಿ 2 ಸೆಂ.ಮೀ. ಮಾತ್ರ ಬೆಳೆಯುತ್ತವೆ. 50 ವರ್ಷಗಳ ನಂತರವೇ ಹೂವು ಬಿಡುತ್ತವೆ. ಸುಮಾರು 200 ವರ್ಷಗಳ ಕಾಲ ಬಾಳುತ್ತವೆ. ಉಷ್ಣವಲಯ ಹಾಗೂ ಉತ್ತಮ ಹವಾಗುಣವಿರುವ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಮಾರ್ಚ್‌ನಿಂದ ಅಕ್ಟೋಬರ್ ಅವಧಿಯಲ್ಲಿ ನಳಿಕೆ (ಫನಲ್) ಆಕಾರದಲ್ಲಿ ಹೂವು ಬಿಡುತ್ತವೆ. ಕ್ಯಾಕ್ಟಸ್ ಹೂವು ರಾತ್ರಿ ಅರಳಿದರೆ ಬೆಳಿಗ್ಗೆ ಮುಚ್ಚಿಕೊಳ್ಳುತ್ತದೆ. ಜೇನು ಹುಳದಿಂದ ಬೀಜ ಪ್ರಸರಣವಾಗುತ್ತದೆ.

ಎಸ್‌ಡಿಎಂ ದಂತ ಮಹಾವಿದ್ಯಾಲಯದಲ್ಲಿ ಬೆಳೆದ ಪಾಪಾಸುಕಳ್ಳಿಯಂತೆ ಅದರ ಹೂವು ಕೂಡ ದೊಡ್ಡದಾಗಿದೆ.

ಸೆಪ್ಟೆಂಬರ್ ವೇಳೆಯಲ್ಲಿಯೇ ಅದು ಹೆಚ್ಚಾಗಿ ಹೂವು ಬಿಡುತ್ತದೆ. ನಳಿಕೆಯಾಕಾರದಲ್ಲಿ 20 ಸೆ.ಮೀ. ಉದ್ದ ಬೆಳೆದಿದ್ದ ಶ್ವೇತವರ್ಣದ ಹೂವು ಅಚ್ಚರಿ ಮೂಡಿಸಿತ್ತು. 1970ರ ದಶಕದಲ್ಲಿ ಧಾರವಾಡದ ಜೆಎಸ್‌ಎಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಲ್ಲಿಯೂ ದೊಡ್ಡದಾದ ಪಾಪಾಸುಕಳ್ಳಿ ಇತ್ತು. 21 ಅಡಿಯವರೆಗೆ ಬೆಳೆದಿದ್ದ ಅದಕ್ಕೆ ಬದಿಯಲ್ಲಿ ಒಂದು ಕೋಲು ಕಟ್ಟಿ ಆಗಾಗ ಪುಷ್ಪಪ್ರದರ್ಶನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುತ್ತಿತ್ತು.

ಧಾರವಾಡದ ನಾರಾಯಣಪುರದ ಪಂಡಿತ ಮುಂಜಿ ಅವರ ಮನೆಯಂಗಳದಲ್ಲಿದ್ದ ಪಾಪಾಸುಕಳ್ಳಿ ಸಹ 72 ಅಡಿಯವರೆಗೆ ಬೆಳೆದು ಅಚ್ಚರಿ ಮೂಡಿಸಿತ್ತು. ಆದರೆ ಮಾಹಿತಿಯ ಕೊರತೆಯಿಂದ ಅದು ಗಿನ್ನೆಸ್ ದಾಖಲೆಯಿಂದ ದೂರ ಉಳಿಯಿತು.

-ಚಂದ್ರಕಾಂತ ಮಸಾನಿ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry