ಬುಧವಾರ, ನವೆಂಬರ್ 20, 2019
26 °C
ಯುಗಾದಿ ಸಡಗರ ನುಂಗಿದ ನೀರು

ಗಗನಕ್ಕೇರಿದ ಬೆಲೆ; ಜನ ತತ್ತರ

Published:
Updated:

ತುಮಕೂರು/ ಕೊರಟಗೆರೆ/ ಹುಳಿಯಾರು:  ಬೆಲೆ ಏರಿಕೆ, ಕುಡಿಯುವ ನೀರಿನ ತೀವ್ರ ಹಾಹಾಕಾರದಿಂದ ಯುಗಾದಿ ಸಂಭ್ರಮ ಜಿಲ್ಲೆಯಲ್ಲಿ ಮಸುಕಾಗಿದೆ.

ನಗರ ಪ್ರದೇಶಗಳಲ್ಲಿ ಹಬ್ಬದ ಗೌಜು, ಗದ್ದಲ ಕಂಡುಬಂದರೂ; ತೀವ್ರ ಬರದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಿದ್ಧತೆ ಸರಳ ಆಚರಣೆಗಷ್ಟೇ ಸೀಮಿತವಾದಂತೆ ಗೋಚರಿಸಿತು.ಯುಗಾದಿ ಎಂದರೆ ಎಣ್ಣೆ ಸ್ನಾನದ್ದೇ ವಿಶೇಷ. ಆದರೆ ನೀರಿಲ್ಲದ ಗ್ರಾಮಗಳಲ್ಲಿ ಜನತೆ ನೀರು ಸಂಗ್ರಹಿಸಿಕೊಳ್ಳಲು ಬುಧವಾರದಿಂದಲೇ ಹರಸಾಹಸ ಪಡುತ್ತಿದ್ದರು. ಬೆಲ್ಲ, ಬೇಳೆ, ಹೂ ಹಣ್ಣು ಬೆಲೆ ವಿಪರೀತ ಹೆಚ್ಚಿದೆ.ಯುಗಾದಿಗೆ ತಪ್ಪದೆ ಹೊಸಬಟ್ಟೆ ತರುವ ಸಂಪ್ರದಾಯವಿದೆ. ಆದರೆ ಇದಕ್ಕೂ ಈ ವರ್ಷ ತಿಲಾಂಜಲಿ ಬಿದ್ದಿದೆ. ಮೊದಲು ಹಬ್ಬಕ್ಕೆ ಸರಕು, ಬಟ್ಟೆ ತರಲು ಪರದಾಡಬೇಕಿತ್ತು. ಈಗ ಹಬ್ಬ ಮಾಡಲು ನೀರಿಗೆ ಪರದಾಡುವ ಸ್ಥಿತಿ ಬಂದಿದೆ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಸೋಮನಹಳ್ಳಿ ಗ್ರಾಮದ ಭಾರತಮ್ಮ ನೋವಿನಿಂದ ನುಡಿದರು.ತುಮಕೂರು ನಗರದಲ್ಲಿ ಮಾವು, ಬೇವಿನ ಸೊಪ್ಪು ಕಟ್ಟಿಗೆ ರೂ. 10ಕ್ಕೆ ಮಾರಲಾಗುತ್ತಿತ್ತು. ಮಾರು ಹೂವು ರೂ.60ಕ್ಕೂ ಹೆಚ್ಚಿತ್ತು. ಬಿಸಿಲ ತಾಪ, ಇನ್ನೊಂದೆಡೆ ಬೆಲೆ ಏರಿಕೆ ಬಿಸಿ ನಡುವೆ ಬೇವು-ಬೆಲ್ಲದ ಯುಗಾದಿ ಸಂಭ್ರಮಾಚರಣೆ ಸಾಮಾನ್ಯರಿಗೆ ಬೇವಿನಷ್ಟೇ ಕಹಿಯಾಗಿದೆ.ನಗರದ ಬಟ್ಟೆ ಅಂಗಡಿಗಳಲ್ಲಿ ಜನ ಜಂಗುಳಿ ಕಂಡುಬಂತು. ಆದರೆ ಕಳೆದ ವರ್ಷದಷ್ಟೂ ವ್ಯಾಪಾರ ಇಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದರು. ಸಂಜೆಯಾದಂತೆಲ್ಲ ಬೆಂಗಳೂರು, ತುಮಕೂರು ಕಡೆಯಿಂದ ಪಾವಗಡ, ವೈ.ಎನ್.ಹೊಸಕೋಟೆ ಕಡೆಗೆ ಹೋಗುವ ಬಸ್‌ಗಳಲ್ಲಿ ಜನ ಕಿಕ್ಕಿರಿದು ಪ್ರಯಾಣಿಸಿದರು.ಮಾರುಕಟ್ಟೆಯಲ್ಲಿ ಕಡಲೆ ಬೇಳೆ ಕೆ.ಜಿ.ಗೆ 70ರಿಂದ 85 ರೂಪಾಯಿ, ತೊಗರಿ ಬೇಳೆ 70ರಿಂದ 90, ಬಾಳೆಹಣ್ಣು ಕೆ.ಜಿ.ಗೆ 40ರಿಂದ 50, ಕಡ್ಲೆ 60, ಬಟಾಣಿ 60, ತೆಂಗಿನಕಾಯಿ 15, ಸಕ್ಕರೆ 34, ಮೈದಾಹಿಟ್ಟು 30ರಿಂದ 35, ಎಣ್ಣೆ 90, ಹೆಸರು ಬೇಳೆ 90 ರೂಪಾಯಿಗೆ ಹೆಚ್ಚಿತ್ತು.`ಯುಗಾದಿ ನಮ್ ಮನೆ ದೇವ್ರ ಪೂಜ್ಸೋ ಹಬ್ಬ. ಎಷ್ಟೇ ರೇಟಾಗ್ಲಿ ಅಷ್ಟ್ ತಗೋಳೋತಾಕೆ ಇಷ್ಟ್ ತಗಂಡಾದ್ರು ಹಬ್ಬ ಮಾಡ್ಬೇಕು' ಎಂದರು ಹಂಚಿಮಾರನಹಳ್ಳಿ ತಿಮ್ಮಕ್ಕ.`ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲು ಜಾಸ್ತಿ ಸಾರ್. ಹಳ್ಳಿ ಕಡೆ ಸರಿಯಾಗಿ ಕರೆಂಟೇ ಇರೋಲ್ಲ. ಕುಡಿಯೋ ನೀರೆ ಸಿಕ್ತಾ ಇಲ್ಲ. ಈ ಪರಿಸ್ಥಿತೀಲಿ ಹಬ್ಬ ಯಾಕಾದ್ರೂ ಬಂತೋ ಅನ್ನೋ ಹಾಗೆ ಆಗಿದೆ. ಮನೇಲಿ ನೀರಿಲ್ದೆ ಹೆಣ್ ಮಕ್ಳ ಕಷ್ಟ ನೋಡಾಕಾಗಲ್ಲ. ಹಬ್ಬದ ಸಂಭ್ರಮನೇ ಇಲ್ಲದಂಗಾಗಿದೆ' ಎನ್ನುತ್ತಾರೆ ಚಿಕ್ಕಪಾಳ್ಯದ ಚನ್ನಪ್ಪ.

ಪ್ರತಿಕ್ರಿಯಿಸಿ (+)