ಬುಧವಾರ, ಜೂನ್ 23, 2021
24 °C

ಗಗನಚುಕ್ಕಿ, ಭರಚುಕ್ಕಿ ಅಭಿವೃದ್ಧಿ ನಿರ್ಲಕ್ಷ್ಯ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಗಗನಚುಕ್ಕಿ, ಭರಚುಕ್ಕಿ ಜಲಪಾತ ಅಭಿವೃದ್ಧಿ ಯೋಜನೆ ಬಗ್ಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ತಾಳಿದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಫಣೀಶ್ ದೂರಿದರು.ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಎ.ಬಿ. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಗಗನಚುಕ್ಕಿ, ಭರಚುಕ್ಕಿ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನೆ ಸಂಬಂಧ ಸೋಮವಾರ ಕರೆಯಲಾಗಿದ್ದ  ಸಭೆಯಲ್ಲಿ ಅವರು ಮಾತನಾಡಿದರು.ತಾಲ್ಲೂಕಿನ ಶಿವನಸಮುದ್ರ ಗಗನಚುಕ್ಕಿ, ಭರಚುಕ್ಕಿ ಅಭಿವೃದ್ಧಿಗೆ ನಂಜುಂಡಪ್ಪ ವರದಿ ವಿಶೇಷ ಅಭಿವೃದ್ಧಿ ಯೋಜನೆಯಡಿ ರೂ.1ಕೋಟಿ ಹಣ ನಿಗದಿಪಡಿಸಿ ಈಗಾಗಲೇ 50 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ.ಆದರೆ ಒಂದೂವರೆ ವರ್ಷ ಕಳೆದರೂ ಯೋಜನೆ ಅನುಷ್ಠಾನ ಮಾಡಬೇಕಾದ ಅರಣ್ಯ ಇಲಾಖೆ ಈ ಬಗ್ಗೆ ಇದುವರೆವಿಗೂ ಕ್ರಿಯಾಯೋಜನೆ ತಯಾರಿಸಿಲ್ಲ. ಹಣ ವ್ಯರ್ಥವಾಗಿ ಸರ್ಕಾರಕ್ಕೆ ಹಿಂದಿರುಗುವ ಮುನ್ನ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ಸಲಹೆ ನೀಡಿದರು.ದೂರದ ಊರಿನಿಂದ ಬರುವ ಪರಿಸರ ಪ್ರೇಮಿಗಳು ನಿಸರ್ಗ ವೈಭವವನ್ನು ಕಣ್ತುಂಬಿಕೊಳ್ಳುವ ಭರದಲ್ಲಿ ಆಯತಪ್ಪಿ ಜಲಪಾತದಲ್ಲಿ ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ದುರ್ದೈವದ ಸಂಗತಿ. ಪೊಲೀಸರ ಕಣ್ಗಾವಲಿನಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರಕರಣಗಳು ಕಡಿಮೆಯಾಗಿದೆ.ಇಂತಹ ಪ್ರಕರಣಗಳು ನಡೆಯದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕ್ರಿಯಾಯೋಜನೆ ಕೂಡಲೇ ತಯಾರಿಸುವಂತೆ ಉಪವಿಭಾಗಾಧಿಕಾರಿ ಬಸವರಾಜು ತಿಳಿಸಿದರು.ದರಗ ಬಳಿ ಕೂಡಲೇ ಬೇಲಿ ನಿರ್ಮಾಣ ಮಾಡುವ ಅನಿವಾರ್ಯತೆ ಇದೆ ಸುಮಾರು 10 ಲಕ್ಷ ರೂ. ಅಂದಾಜಿನಲ್ಲಿ ಈ ಕೆಲಸ ಪೂರ್ಣಗೊಳಿಸಿದ್ದಲ್ಲಿ ಸಾಕಷ್ಟು ಸಾವುಗಳನ್ನು ತಪ್ಪಿಸಬಹುದಾಗಿದೆ ಎಂದು ಗ್ರಾಮಾಂತರ ಠಾಣೆ ಸಬ್ ಇನ್‌ಸ್ಪಕ್ಟರ್ ಪುಟ್ಟಸ್ವಾಮಿ ಸಲಹೆ ನೀಡಿದರು.ಅರಣ್ಯ  ಇಲಾಖೆಯಿಂದ ಕೂಡಲೇ ಗಗನಚುಕ್ಕಿ ಭರಚುಕ್ಕಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ತಯಾರಿಸುವುದಾಗಿ ಎ.ಸಿ.ಎಫ್ ನಾಗೇಂದ್ರರಾವ್ ಭರವಸೆ ನೀಡಿದರು. ವೃತ್ತ ನಿರೀಕ್ಷಕ ರವಿನಾಯಕ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.