ಭಾನುವಾರ, ಜೂನ್ 13, 2021
22 °C

ಗಗನಮುಖಿಯಾದ ಹಸಿರು ಮೇವು ಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಹಸಿರು ಮೇವಿನ ಲಭ್ಯತೆ ಪ್ರಮಾಣ ಕುಸಿದಿದೆ. ಮಳೆ ತಡವಾಗುತ್ತಿರುವುದರಿಂದ ಬಯಲಿನ ಮೇಲೆ ಹಸಿರು ಮೇವು ಸಿಗುತ್ತಿಲ್ಲ. ಆದ್ದರಿಂದ ಸೀಮೆ ಹಸುಗಳಿಗಾಗಿ ಹಸಿರು ಮೇವನ್ನು ಕೊಂಡು ಹಾಕಬೇಕಾಗಿ ಬಂದಿದೆ. ಇದರಿಂದ ಹಾಲು ಉತ್ಪಾದನಾ ವೆಚ್ಚದ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಕೊಳವೆ ಬಾವಿಗಳ ಆಶ್ರಯದಲ್ಲಿ ಜಾನುವಾರುಗಳಿಗಾಗಿ ಸೀಮೆ ಹುಲ್ಲು ಹಾಗೂ ಜೋಳದ ದಂಟನ್ನು ಬೆಳೆಯಲಾಗುತ್ತಿತ್ತು. ಆದರೆ ಈಗ ಬಹಷ್ಟು ಕೊಳವೆ ಬಾವಿಗಳಲ್ಲಿ ನೀರು ಬತ್ತಿಹೋಗಿದೆ ಅಥವಾ ನೀರಿನ ಲಭ್ಯತೆ ಪ್ರಮಾಣ ತೀರಾ ಕಡಿಮೆಯಾಗಿದೆ. ಆದ್ದರಿಂದ ಹುಲ್ಲನ್ನು ಎಲ್ಲರಿಗೂ ಬೆಳೆಯಲು ಸಾಧ್ಯವಾಗುತ್ತಿಲ್ಲ.ಇನ್ನು ಸೀಮೆ ಹಸುಗಳಿಗೆ ಹಸಿರು ಮೇವು ಕೊಡದಿದ್ದರೆ ಹಾಲು ಕೊಡುವ ಪ್ರಮಾಣ ಇಳಿಮುಖವಾಗುತ್ತದೆ. ಹೀಗಾಗಿ ದರ ಎಷ್ಟೇ ಏರಿಕೆಯಾದರೂ ಹಸಿರು ಮೇವನ್ನು ಖರೀದಿಸಿ ನೀಡಬೇಕಾಗಿ ಬಂದಿದೆ. ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಇರುವವರು ಇತರ ಬೆಳೆಗಳ ಪಕ್ಕದಲ್ಲಿ ಜೋಳದ ದಂಟನ್ನು ಬೆಳೆದಿದ್ದಾರೆ. ಇನ್ನೂ ಕೆಲವರು ತರಕಾರಿ ಬೆಳೆಗೆ ಬದಲಾಗಿ ಮಾರಲೆಂದೇ ಹಸಿರು ಮೇವನ್ನು ಬೆಳೆದಿದ್ದಾರೆ.ಆದರೆ ಹಸಿರು ಮೇವಿನ ಬೆಲೆ ಗಗನಕ್ಕೇರಿದೆ. ತೋಟಗಳಲ್ಲಿ ಪೆಡೆ ಲೆಕ್ಕದಲ್ಲಿ ಮುಸುಕಿನ ಜೋಳದ ದಂಟನ್ನು ಮಾರಾಟ ಮಾಡಲಾಗುತ್ತಿದೆ. ಈಗ ಇದು ಬೇರಾವುದೇ ತರಕಾರಿ ಬೆಲೆಗಿಂತ ಹೆಚ್ಚು ಲಾಭದಾಯಕವೆನಿಸಿದೆ. ಈ ಮಳೆ ಬರುವುದು ಯಾವಾಗ ಬಯಲಿನ ಮೇಲೆ ಹುಲ್ಲು ಬೀಳುವುದು ಯಾವಾಗ. ಹಸಿರು ಮೇವಿನ ಸಮಸ್ಯೆ ತೀರುವುದು ಯಾವಾಗ ಎಂಬ ಮಾತು ರೈತರಿಂದ ಕೇಳಿಬರುವುದು ಸಾಮಾನ್ಯವಾಗಿದೆ.ಕಳೆದ ಬಾರಿ ಸರಿಯಾಗಿ ಮಳೆ ಆಗದ ಪರಿಣಾಮವಾಗಿ ಒಣ ಹುಲ್ಲಿನ ದಾಸ್ತಾನು ಕಡಿಮೆ ಪ್ರಮಾಣದಲ್ಲಿದೆ. ಈಗಾಗಲೆ ಹುಲ್ಲಿನ ಬಣವೆಗಳು ಖಾಲಿಯಾಗಿವೆ. ಆದ್ದರಿಂದಲೇ ಪಕ್ಕದ ಆಂಧ್ರಪ್ರದೇಶದ ಹಳ್ಳಿಗಳಿಂದ ಭತ್ತದ ಹುಲ್ಲನ್ನು ಖರೀದಿಸಿ ಟ್ರಾಕ್ಟರ್‌ಗಳಲ್ಲಿ ತಮ್ಮ ಗ್ರಾಮಗಳಿಗೆ ಸಾಗಿಸುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ. ಮಳೆಯಾದರೆ ಸಮಸ್ಯೆ ಸುಧಾರಿಸುತ್ತದೆ. ಇಲ್ಲವಾದರೆ ಪರಿಸ್ಥಿತಿ ಬಿಗಡಾಯಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.