ಭಾನುವಾರ, ಫೆಬ್ರವರಿ 28, 2021
23 °C
ಧಾರಜವಾಡಿ: ‘ಇಲ್ಲ’ಗಳ ಮಧ್ಯೆ ಗ್ರಾಮವಾಸಿಗಳ ಕಷ್ಟದ ಬದುಕು

ಗಗನ ಕುಸುಮವಾದ ಮೂಲ ಸೌಕರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಗನ ಕುಸುಮವಾದ ಮೂಲ ಸೌಕರ್ಯ

ಭಾಲ್ಕಿ: ಗ್ರಾಮಸ್ಥರಿಗೆ ಓಡಾಡಲು ಉತ್ತಮ ರಸ್ತೆಯಿಲ್ಲ. ಮನೆಗಳ ಹೊಲಸು ನೀರು ಹರಿದು ಹೋಗಲು ಸೂಕ್ತ ನಾಲೆಗಳಿಲ್ಲ. ಹೀಗೆ ಅನೇಕ ಇಲ್ಲಗಳ ನಡುವೆಯೇ ಬದುಕು ಸಾಗಿಸುವ ಅನಿವಾರ್ಯತೆ ಜನರದ್ದು. ಇದು ತಾಲ್ಲೂಕಿನಿಂದ ನಾಲ್ಕು ಕಿಲೋ ಮೀಟರ್‌ ದೂರದಲ್ಲಿರುವ ಧಾರಜವಾಡಿ ಗ್ರಾಮದ ವಾಸ್ತವ ಚಿತ್ರಣ.ತಳವಾಡ (ಕೆ) ಗ್ರಾಮ ಪಂಚಾಯಿತಿಗೆ ಒಳಪಡುವ ಈ ಗ್ರಾಮವೂ ಸುಮಾರು 1,600 ಜನಸಂಖ್ಯೆ ಹೊಂದಿದೆ. ಆದರೆ, ಒಂದು ಒಳ್ಳೆಯ ಗ್ರಾಮದಲ್ಲಿ ಇರಬೇಕಾದ ಮೂಲ ಸೌಕರ್ಯಗಳು ಇಲ್ಲಿಲ್ಲ. ಹಾಗಾಗಿ, ಗ್ರಾಮ ವಾಸಿಗಳು ಪ್ರತಿನಿತ್ಯ ಜನಪ್ರತಿನಿಧಿ, ಅಧಿಕಾರಿಗಳನ್ನು ಮನದಲ್ಲಿ ಶಪಿಸುತ್ತ ಸಮಸ್ಯೆಗಳ ಮಧ್ಯೆ ಜೀವನ ಸಾಗಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾಮದ ಪ್ರಜ್ಞಾವಂತ ಯುವಕರು.ಗ್ರಾಮದಲ್ಲಿ ಒಟ್ಟು ನಾಲ್ಕು ಕೊಳವೆ ಬಾವಿಗಳಿವೆ. ಅವುಗಳಲ್ಲಿ ಒಂದಕ್ಕೆ ನೀರಿಲ್ಲ. ಮೂರಕ್ಕೆ ನೀರಿದ್ದರೂ ಮೋಟರ್‌ ಭಾಗ್ಯ ಲಭಿಸಿಲ್ಲ. ಇಡೀ ಗ್ರಾಮ ನೀರಿಗಾಗಿ ಅವಲಂಬಿಸಿರುವುದು ಒಂದು ತೆರೆದ ಬಾವಿಯನ್ನು ಮಾತ್ರ. ಆದರೆ, ಈ ಬಾವಿಯ ರಕ್ಷಣಾ ಗೋಡೆ ಚಿಕ್ಕದಾಗಿದ್ದು, ಕೆಲವು ಕಡೆ ಹಾಳಾಗಿದೆ. ಅಲ್ಲದೆ, ಪಂಚಾಯಿತಿ ವತಿಯಿಂದ ಮೇಲಿಂದ ಮೇಲೆ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸುತ್ತಿಲ್ಲ ಎಂದು ಆರೋಪಿಸುತ್ತಾರೆ ಗ್ರಾಮದ ಜ್ಞಾನೇಶ್ವರ ತಗಾರೆ, ಜ್ಞಾನೇಶ್ವರ ಕರಾಳೆ.ಊರಿನ ಬಹುತೇಕ ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಿಲ್ಲ. ಕೇವಲ ಪ್ರಭಾವಶಾಲಿ ಜನರಿರುವ ಕಡೆಗಳಲ್ಲಿ ಮಾತ್ರ ರಸ್ತೆ ನಿರ್ಮಿಸಲಾಗಿದೆ. ನಮ್ಮ ಮನೆಗಳಿಗೆ ತೆರಳಲು ಹರಸಾಹಸ ಪಡಬೇಕಾಗುತ್ತದೆ. ಹಗಲು ಹೊತ್ತಿನಲ್ಲಿ ಹೇಗಾದರೂ ನಡೆದುಕೊಂಡು ಹೋಗಬಹುದು.ರಾತ್ರಿ ಸಮಯದಲ್ಲಿ ಹೋಗಲು ತುಂಬಾ ತೊಂದರೆಯಾಗುತ್ತದೆ. ಅನೇಕ ಸಾರಿ ಮಕ್ಕಳು, ವಯೋವೃದ್ಧರು ಬಿದ್ದು ಸಣ್ಣಪುಟ್ಟ ಗಾಯಗಳನ್ನು ಮಾಡಿಕೊಂಡಿದ್ದಾರೆ ಎಂದು ತಮ್ಮ ಗೋಳು ತೋಡಿಕೊಳ್ಳುತ್ತಾರೆ ಬಳಿರಾಮ ಮಾನಕಾರಿ, ಭವರಾವ ತಗಾರೆ, ಭೀಮರಾವ ಕರಾಳೆ.ಮನೆಗಳ ಹೊಲಸು ನೀರು, ಮಳೆ ನೀರು ಹರಿದು ಹೋಗಲು ಎಲ್ಲೆಡೆ ನಾಲೆಗಳಿಲ್ಲ ಇದರಿಂದ ಚರಂಡಿ ನೀರು ಮನೆ, ಕೊಳವೆ ಬಾವಿ, ಬಾವಿ ಸುತ್ತ ಸಂಗ್ರಹವಾಗುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಕಾಲರಾ, ಚಿಕುನ್‌ಗುನ್ಯ, ಮಲೇರಿಯಾ ಸೇರಿದಂತೆ ಇತರ ರೋಗಗಳ ಭೀತಿ ಜನರನ್ನು ಆವರಿಸಿದೆ ಎನ್ನುತ್ತಾರೆ ಜ್ಞಾನೇಶ್ವರ ಕುಟಮಲಗೆ, ಸಂಜು.ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಆಟವಾಡಲು ಮೈದಾನವಿಲ್ಲ. ಅಂಗನವಾಡಿ ಪಕ್ಕದಲ್ಲೇ ತಿಪ್ಪೆಗುಂಡಿಗಳಿವೆ. ಹೊಲಕ್ಕೆ ಹೋಗುವ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದೆ. ಗ್ರಾಮದ ಎಲ್ಲ ಸಮಸ್ಯೆಗಳನ್ನು ಸಂಬಂಧಪಟ್ಟವರು ಆದಷ್ಟು ಶೀಘ್ರ ಪರಿಹರಿಸಿ ಜನರಿಗೆ ನೆಮ್ಮದಿಯ ಜೀವನ ನಡೆಸಲು ಸಹಕರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಸೆ.

–ಬಸವರಾಜ್‌ ಎಸ್‌.ಪ್ರಭಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.