ಬುಧವಾರ, ಮೇ 12, 2021
20 °C
ಆನೇಕಲ್, ವೈಟ್‌ಫೀಲ್ಡ್ ಸಮೀಪ 14 ಕಾಡಾನೆಗಳ ರೋಷಾವೇಶ * ಜನರಲ್ಲಿ ಆತಂಕ

ಗಜಪಡೆ ಕಾಡಿಗಟ್ಟಲು ಹರಸಾಹಸ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜಪಡೆ ಕಾಡಿಗಟ್ಟಲು ಹರಸಾಹಸ...

ಆನೇಕಲ್/ವೈಟ್‌ಫೀಲ್ಡ್: ಕೋಲಾರ ಜಿಲ್ಲೆಯ ಮಾಲೂರು ಹಾಗೂ ಹೊಸಕೋಟೆ ತಾಲ್ಲೂಕಿನಲ್ಲಿ ಒಟ್ಟು ನಾಲ್ವರನ್ನು ಬಲಿ ತೆಗೆದುಕೊಂಡ 14 ಕಾಡಾನೆಗಳು ಸೋಮವಾರ ದಿನವಿಡೀ ಆನೇಕಲ್ ಹಾಗೂ ವೈಟ್‌ಫೀಲ್ಡ್ ಆಸುಪಾಸಿನಲ್ಲಿ ರೋಷಾವೇಶ ತೋರಿದವು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಆನೆಗಳ ಉದ್ರೇಕವನ್ನು ಇನ್ನಷ್ಟು ಹೆಚ್ಚಿಸಿದರು. ಇದರಿಂದಾಗಿ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು.ಕಾಡಾನೆಗಳ ಹಿಂಡು ಬೆಳಿಗ್ಗೆ ಆನೇಕಲ್ ತಾಲ್ಲೂಕಿನ ನೆರಿಗಾ ಬಳಿ ಪ್ರತ್ಯಕ್ಷವಾದವು. ಬೆಳಿಗ್ಗೆ 5 ಗಂಟೆ ವೇಳೆಗೆ ನೆರಿಗಾ ಗ್ರಾಮದಲ್ಲಿ ಕಾಣಿಸಿಕೊಂಡ ಆನೆಗಳನ್ನು ಕಂಡು ಭಯಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು.ಪೊಲೀಸರು ಹಾಗೂ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬರುವ ವೇಳೆಗೆ ಕಾಡಾನೆಗಳ ಹಿಂಡು ಚಂಬೇನಹಳ್ಳಿ, ಟಿ.ಸಿ.ಹಳ್ಳಿ ಮುಖಾಂತರ ಹಾದು ದೊಮ್ಮಸಂದ್ರ ಹೆಗ್ಗೊಂಡಳ್ಳಿ ಸಮೀಪದ ಗ್ರೀನ್‌ಹುಡ್ ಹೈ ಶಾಲೆಗೆ ಹೊಂದಿಕೊಂಡಿರುವ ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟವು.ಕಾಡಾನೆಗಳಿರುವ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ನೂರಾರು ಜನರು ನೀಲಗಿರಿ ತೋಪಿನ ಸುತ್ತ ಜಮಾಯಿಸಿ ಆನೆಗಳನ್ನು ನೋಡಲು ಮುಗಿಬಿದ್ದರು. ಆನೆಗಳನ್ನು ತೀರ ಹತ್ತಿರದಿಂದ ನೋಡಬೇಕೆಂದು ಮುನ್ನುಗಿದ ದೊಮ್ಮಸಂದ್ರದ ಶ್ಯಾಮ್ ಮತ್ತು ಮಂಜುನಾಥ್ ಎಂಬ ಯುವಕರ ಮೇಲೆ ಆನೆಗಳು ಎರಗಿದವು. ಘಟನೆಯಲ್ಲಿ ಶ್ಯಾಮ್ ಅವರ ಕೈ ಮತ್ತು ಕಾಲುಗಳು ಮುರಿದಿದ್ದು, ಅವರನ್ನು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಜನರ ಕೂಗಾಟ, ಕಿರುಚಾಟದಿಂದ ಕಂಗೆಟ್ಟ ಆನೆಗಳು ದೊಮ್ಮಸಂದ್ರ ಮಾರ್ಗವಾಗಿ ಹುಸ್ಕೂರು ಕೆರೆಯನ್ನು ಸೇರಿದವು. 100 ಎಕರೆಗೂ ಹೆಚ್ಚು ವಿಸ್ತಾರವಾಗಿರುವ ಜಾಲಿ ಗಿಡಗಳಿಂದ ಕೂಡಿರುವ ಹುಸ್ಕೂರು ಕೆರೆಯಲ್ಲಿ ಆನೆಗಳು ಬೀಡುಬಿಟ್ಟವು.ಇಲ್ಲಿಯೂ ಜನರ ರಗಳೆ ಹೆಚ್ಚಿತು. ಆನೆಗಳನ್ನು ಯಾವ ಕಡೆ ಓಡಿಸುವುದು ಎಂಬುದೇ ಅಧಿಕಾರಿಗಳಿಗೆ ಸಮಸ್ಯೆಯಾಯಿತು. ಜನರನ್ನು ಚದುರಿಸಲು ಲಘುಲಾಠಿ ಪ್ರಹಾರ ಸಹ ಮಾಡಲಾಯಿತು. 150ಕ್ಕೂ ಹೆಚ್ಚು ಸ್ಥಳೀಯ ಪೊಲೀಸ್ ಸಿಬ್ಬಂದಿ, 5 ಕೆಎಸ್‌ಆರ್‌ಪಿ ತುಕಡಿಗಳು ಮೊಕ್ಕಾಂ ಹೂಡಿ ಪರಿಸ್ಥಿತಿ ನಿಯಂತ್ರಿಸಿದವು.ಅರಣ್ಯ ಇಲಾಖೆಯ ಮುಖ್ಯ ಪ್ರಧಾನ ಅರಣ್ಯಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ದೀಪಕ್ ಶರ್ಮ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಂಗೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಪ್ಪುರಾವ್, ಕೋಲಾರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುನೇಗೌಡ, ಎಸಿಎಫ್ ವೆಂಕಟೇಶ್, ಆರ್‌ಎಫ್‌ಓಗಳಾದ ನಾಗಭೂಷಣ್, ಚಿನ್ನಪ್ಪಯ್ಯ ಮತ್ತಿತರ ಅಧಿಕಾರಿಗಳು ಚರ್ಚೆ ನಡೆಸಿ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ದಿಸೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಯೋಜನೆಯನ್ನು ರೂಪಿಸಿದರು.ಅದರಂತೆ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಸಾಕಾನೆ ವನರಾಜನನ್ನು ಹುಸ್ಕೂರು ಕೆರೆಗೆ ಕರೆಯಿಸಿಕೊಳ್ಳಲಾಯಿತು. ಮೈಸೂರಿನಿಂದ ಸಾಕಾನೆಗಳಾದ ಅಭಿಮನ್ಯು, ಅರ್ಜುನನನ್ನು ಕರೆಯಿಸಿಕೊಳ್ಳಲು ಏರ್ಪಾಟು ಮಾಡಿಕೊಂಡರು.ಕೆರೆಯಲ್ಲಿ ಉಳಿದಿದ್ದ ಕಾಡಾನೆಗಳು ಜನರ ಸದ್ದುಗದ್ದಲ ಪಟಾಕಿಗಳ ಸದ್ದಿಗೆ ಆಗಿಂದಾಗೆ ಕೆರೆಯಿಂದ ಹೊರಬಂದು ಜನರತ್ತ ದಾಳಿ ನಡೆಸುವುದು ನಡೆದೇ ಇತ್ತು. ಮಧ್ಯಾಹ್ನ ಹುಸ್ಕೂರು ಕೆರೆ ಬಳಿ ಮುನಿರಾಜು ಎಂಬುವವರು ದಾಳಿಗೆ ಒಳಗಾಗಿ ಗಾಯಗೊಂಡರು. ಜನರ ಹುಚ್ಚಾಟ ಮಿತಿಮೀರಿತ್ತು. ವನರಾಜನನ್ನು ಸಜ್ಜುಗೊಳಿಸಿ ಕಾರ್ಯಾಚರಣೆಗೆ ಸಿದ್ಧವಾಗುತ್ತಿದ್ದಂತೆ ಸಂಜೆ 5ರ ಸುಮಾರಿಗೆ ಕಾಡಾನೆಗಳು ಹುಸ್ಕೂರು ಕೆರೆ ದಾಟಿ ಚಿಂತಲ ಮಡಿವಾಳದತ್ತ ಪ್ರಯಾಣ ಬೆಳೆಸಿದವು. ಆನೆಗಳು ಸಾಗಿದನ್ನು ಕಂಡು ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟು ಆನೆ ಸಾಗಬೇಕಾದ ದಾರಿಯಲ್ಲಿದ್ದ ಜನರನ್ನು ತೆರವುಗೊಳಿಸಲು ಮುಂದಾದರು. ಪೊಲೀಸರು ಸಹ ಸಾಥ್ ನೀಡಿದರು.ಈ ನಡುವೆ ಮತ್ತೆ ಜನಜಂಗುಳಿ ಚಿಂತಲ ಮಡಿವಾಳ ಬಳಿ ಕಂಡುಬಂತು. ಗಾಬರಿಗೊಂಡ ಆನೆಗಳು ದಿಕ್ಕು ಬದಲಾಯಿಸಿ ಮತ್ತೆ ಹುಸ್ಕೂರು ಕೆರೆಯಲ್ಲಿ ಬಿಡಾರ ಹೂಡಿದವು. ಜನಜಂಗುಳಿಯ ನಡುವೆ ಕಾರ್ಯಾಚರಣೆ ಸಾಧ್ಯವಿಲ್ಲ ಎಂದು ಕೈಚೆಲ್ಲಿದ ಅಧಿಕಾರಿಗಳು ವನರಾಜನನ್ನು ಕೆರೆಯೊಳಗಡೆ ಕಳುಹಿಸಿದರು. ಮಾವುತನೊಂದಿಗೆ ವನರಾಜ ಕೆರೆಯೊಳಗಡೆ ಸಾಗಿದ. ಮೈಸೂರು ಆನೆಗಳ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದರು.ರಾತ್ರಿ 7.30ರ ವೇಳೆಗೆ ಕತ್ತಲಾಗುತ್ತಿದ್ದಂತೆ ಜನಜಂಗುಳಿ ಕಡಿಮೆಯಾಯಿತು. ಕಾಡಾನೆಗಳ ಹಿಂಡು ಕೆರೆಯಿಂದ ಸಾಗಲು ಮುಂದಾದವು.ಇದೇ ಅವಕಾಶಕ್ಕಾಗಿ ಕಾದಿದ್ದ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಆನೆಗಳನ್ನು ಮುತ್ತಾನಲ್ಲೂರು, ರಾಮಸಾಗರ, ಹಳೇಚಂದಾಪುರದ ಮೂಲಕ ರಾಷ್ಟ್ರೀಯ ಹೆದ್ದಾರಿ 7ರ ಚಂದಾಪುರ-ಹೊಸೂರು ರಸ್ತೆಯ ಸಮೀಪ ತರುವಲ್ಲಿ ರಾತ್ರಿ 8ರ ವೇಳೆಗೆ ಯಶಸ್ವಿಯಾದರು. ಆನೆಗಳನ್ನು ಬನ್ನೇರುಘಟ್ಟ ಅರಣ್ಯದತ್ತ ಸಾಗಿಸಲು ಇಲಾಖೆ ಯೋಜನೆ ರೂಪಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.