ಗುರುವಾರ , ಜೂನ್ 24, 2021
29 °C

ಗಜಲ್ ಮೋಹದಿಂದ ಮುಕ್ತಗೊಳಿಸುವ ಗಜಲ್

ಎಸ್. ನಟರಾಜ ಬೂದಾಳು Updated:

ಅಕ್ಷರ ಗಾತ್ರ : | |

ಬರೆಯಬೇಡ ಗಜಲ್ ನನ್ನ ಕಣ್ಣೀರಿನ ಮಾತಿನ ಮುಂದೆ ಅದೇನು ದೊಡ್ಡದಲ್ಲ

ದೃಶ್ಯಕಟ್ಟಲು ಹೋಗಿ ಮೂರ್ಖನಾಗಬೇಡ ನನ್ನ ವೈಯಾರದ ಮುಂದೆ ಅದೇನು ದೊಡ್ಡದಲ್ಲ

ನೀ ಬರೆದ ಗಜಲ್ ಮಡಿಮೈಲಿಗೆ ಎಣಿಸುತ್ತದೆ ನಿನ್ನನ್ನೇ ಹೊರಗಿಟ್ಟು

ಆಗ ‘ಗಿರಿರಾಜ’ನ ಬೈಯಬೇಡ ನನ್ನ ಬಸವಿ ಬದುಕಿನ ಮುಂದೆ ಅದೇನು ದೊಡ್ಡದಲ್ಲ

ಇವು ಅಲ್ಲಾಗಿರಿರಾಜರ ಗಜಲ್ ನ ಎರಡು ಷೇರ್‌ಗಳು. ಗಜಲ್ ಎಂದರೆ ಮತ್ಲಾ, ಕಾಫಿಯಾ, ರವಿ, ರದೀಫ್‌ಗಳು ಇರುವ ರಚನೆ ಮತ್ತು ಅದು ಪ್ರಿಯತಮೆಯೊಂದಿಗೆ ನಡೆಸುವ ಸಂವಾದ  ಎಂಬುದು ಅದರ ಬಗೆಗಿನ ಮೇಲ್ಪದರದ ವಿವರಣೆ. ಹೆಣ್ಣಿನೊಂದಿಗೆ ಮಾತನಾಡುವ ಕಾವ್ಯ ಎಂಬುದಕ್ಕೆ ಮಹತ್ವವಿದೆ. ಇತಿಹಾಸದಲ್ಲಿ ಕಾವ್ಯ ಯಾರು ಯಾರೊಂದಿಗೆ ಮಾತನಾಡಿದೆ ಎಂದು ಗಮನಿಸಿದಾಗ ಮಾತ್ರ ಇದು ಗೊತ್ತಾಗುತ್ತದೆ.ದೇವರೊಂದಿಗೆ, ಧರ್ಮದೊಂದಿಗೆ, ರಾಜರೊಂದಿಗೆ, ವೀರ, ಧೀರ ಇತ್ಯಾದಿ ಪುರುಷಾಧಿಕಾರದ ಸಮಾಜದೊಂದಿಗೆ ಮಾತ್ರ ಮಾತನಾಡಿಕೊಂಡು ಬಂದ ಕಾವ್ಯಕ್ಕೆ ಸಖಿಯೊಂದಿಗೆ ಮಾತಾಡು ಅಂದರೆ ಹಿಂದೆಗೆದುಬಿಡುತ್ತದೆ. ಯಾಕೆಂದರೆ ಅದು ಈವರೆಗೆ ಬಳಸಿದ ಕಾವ್ಯಮೀಮಾಂಸೆಯ ಹತಾರುಗಳನ್ನು ಪಕ್ಕಕ್ಕಿಡಬೇಕಾಗುತ್ತದೆ, ಈವರೆಗೆ ಬಳಸಿದ ಭಾಷೆಗೆ ಹೊಸ ಜಾಡನ್ನು ತೋರಿಸಬೇಕಾಗುತ್ತದೆ, ಮತ್ತು ಸಖಿಯೆದುರಿಗೆ ಸಖನಾಗಿ ನಿಲ್ಲಬೇಕಾಗುತ್ತದೆ.ಭಾರತದ ಮಾರ್ಗ ಪರಂಪರೆಯಲ್ಲಿನ ಮಹಾಕಾವ್ಯಗಳಲ್ಲಿ ಹೆಣ್ಣಿಲ್ಲ. ರಾಮಾಯಣ ಮಹಾಭಾರತಗಳಂತೂ ಗಂಡಸರ ಕಾವ್ಯಗಳೇ. ಶೈಕ್ಷಣಿಕ ಸಂಸ್ಥೆಗಳು ನಮ್ಮಿಂದ ಓದಿಸುತ್ತಿರುವ ಇಡೀ ಕನ್ನಡ ಸಾಹಿತ್ಯ ಚರಿತ್ರೆಯು ಗಂಡಸರ ಕನ್ನಡ ಸಾಹಿತ್ಯ ಚರಿತ್ರೆಯೇ ಹೊರತು ಎಲ್ಲರ ಕನ್ನಡ ಸಾಹಿತ್ಯ ಚರಿತ್ರೆಯಲ್ಲ. ಈ ಸೇರ್ಪಡೆ ಮತ್ತು ಬೇರ್ಪಡೆಯ ಸಾಂಸ್ಕೃತಿಕ ರಾಜಕಾರಣ ವಿಶ್ವವ್ಯಾಪಿಯಾದುದು. ಈ ಕಾರಣಕ್ಕೆ ಹೆಣ್ಣಿನೊಂದಿಗೆ ಸಂವಾದಿಸುವ ಗಜಲ್ ಒಂದು ಸಾಂಸ್ಕೃತಿಕ ರಾಜಕಾರಣವೂ ಹೌದು.ಮಂದವಾದ ಮೋಂಬತ್ತಿಯ ಬೆಳಕು, ಆಪ್ತ ಪ್ರೇಮದ ಅಂತರಂಗದ ನುಡಿಯನ್ನು ಹಂಚಿಕೊಳ್ಳಲು ಸನ್ನದ್ಧವಾಗಿ ಕುಳಿತಿರುವ ಕವಿ ಮತ್ತು ಶ್ರೋತೃಗಳು, ತುಂಬಿರುವ ಮಧುಬಟ್ಟಲು, ಅದನ್ನು ಮತ್ತೆ ತುಂಬುವ ಸಾಕಿ – ಇಷ್ಟಿದ್ದರೆ ದೇವರ ಗೊಡವೆ ಕೂಡ ಬೇಡವೆನ್ನುತ್ತಾನೆ ಗಾಲಿಬ್. ಎಲ್ಲವೂ ಲೌಕಿಕದ ಉತ್ತುಂಗವೆಂದು ಗುರುತಿಸಿಕೊಂಡಿರುವ ಸಂಕೇತಗಳೇ. ಆದರೆ ಇವುಗಳನ್ನು ಬಳಸಿ ಹೊರಡುವ ಗಜಲ್ ಲೌಕಿಕವನ್ನು ದಾಟಿಸಬಲ್ಲದೆಂಬ ವಿಶ್ವಾಸ ಮಾತ್ರ ದೃಢವಾದುದು. ಆ ಮದಿರೆ, ಮದಿರಾಪಾತ್ರೆ, ಸಾಕಿ, ಅಲ್ಲಿಯ ಪ್ರಿಯತಮೆ ಲೌಕಿಕವನ್ನು ದಾಟಿಸುವ ಊರುಗೋಲುಗಳೂ ಆಗುತ್ತವೆ. ಯಾವುದನ್ನು ದಾಟಬೇಕಾಗಿದೆಯೋ ಅದನ್ನು ದಾಟಲು ಅದನ್ನೇ ಬಳಸಿಕೊಳ್ಳುವ ಒಂದು ಸಿದ್ಧ ಮಾರ್ಗ. ಹಾಗೆಂದು ಇದನ್ನು ಸರಳ ವ್ಯಾಮೋಹೀ ಮಾರ್ಗವೆನ್ನುವುದು ಅಪರಾಧವೇ ಸರಿ. ಗಜಲ್ ಎಲ್ಲ ರೀತಿಯ ಪಾಂಥಿಕ ಬಂಧನಗಳನ್ನು ಮೀರಿ ಜೀವಪ್ರೀತಿಯನ್ನು ಮುಂದಿಡುವ ಕಾವ್ಯ. ಅದು ತನ್ನನ್ನೂ ಮೀರಿ ಮಾತನಾಡಬಲ್ಲದು.

ನಿನ್ನ ನಿಟ್ಟುಸಿರು ನನ್ನ ನೂರು ಗಜಲ್‌ಗೆ ಸಮಾನ

ಬದುಕಿನ ದುಃಖದಲ್ಲೂ ಉಕ್ಕುವ ನಿನ್ನ ನಗು ನೂರು ಬೆಳದಿಂಗಳಿಗೆ ಸಮಾನ

ಕರಗಲಿ ನಿನ್ನೊಳಗಿನ ಮೌನ ಹೀಗೆ ಇರದು ಕಾಲಮಾನ

ಅರ್ಧರಾತ್ರಿಯಲಿ ಒಗಟಾಗದಿರು ಜಾರಿದ ನಿನ್ನ ಕಣ್ಣಹನಿ ನೂರು ಕತ್ತಲಿಗೆ ಸಮಾನ

ಗಜಲ್ ಕನ್ನಡಕ್ಕೆ ಒಗ್ಗಲು ಕೆಲವು ಸಮಸ್ಯೆಗಳಿವೆ. ಕನ್ನಡದ ಆವರಣದಲ್ಲಿ ಉರ್ದುವಿನ ಆವರಣದ ಅನೇಕ ಅಂಶಗಳು ಇಲ್ಲ. ಉದಾಹರಣೆಗೆ ಅಲ್ಲಿನ ಮುಶಾಯಿರಾ ಸಂಸ್ಕೃತಿ, ನಾಟ್ಯ ಇತ್ಯಾದಿಗಳು. ಇಷ್ಟಾದರೂ ಗಜಲ್ ಕನ್ನಡಕ್ಕೆ ಬೇಕು. ಇಲ್ಲಿಯ ಪಾಂಥಿಕ ಆವರಣವನ್ನು ಮುಕ್ತವಾಗಿಸಲು, ಪ್ರೀತಿ ಪ್ರೇಮವನ್ನು ಇನ್ನೂ ಗಾಢವಾಗಿಸಲು, ಲೌಕಿಕ ಬದುಕನ್ನು ಗೌರವಿಸುವುದನ್ನು ಕಲಿಸಲು ಮತ್ತು ಕನ್ನಡದ ಕಸವರವೆಂದರೆ ಪರಧರ್ಮ, ಪರವಿಚಾರವನ್ನು ಗೌರವಿಸುವುದು, ಎಂಬುದನ್ನು ಸಾಬೀತುಪಡಿಸಲು! ಗಜಲ್ ಕನ್ನಡಕ್ಕೆ ತೀರಾ ಅಪರಿಚಿತ ಪ್ರಕಾರವೇನೂ ಅಲ್ಲ. ಕನ್ನಡಕ್ಕೆ ಗಜಲ್‌ನ  ಸ್ಥೂಲ ತಾತ್ವಿಕತೆಯ ಪರಿಚಯವನ್ನು ಮಾಡಿಕೊಟ್ಟವರೆಂದರೆ ಜಿ.ಪಿ. ರಾಜರತ್ನಂ.ರತ್ನನ ಪದಗಳ ಲೋಕದಲ್ಲೂ ಸಂಜೆಗತ್ತಲು, ನಂಜಿ, ಪಡಖಾನೆ, ಹಾಡು, ಪ್ರೀತಿ, ನಿರಾಸೆ, ಮತ್ತು ನಿರಂತರವಾಗಿ ಜೀವಿಗಳನ್ನು ಕಾಡುತ್ತಲೇ ಇರುವ ದುಃಖವನ್ನು ದಾಟುವ  ಹಂಬಲ – ಇವೆಲ್ಲ ತುಂಬಿಹೋಗಿವೆ. ಅಲ್ಲಾಗಿರಿರಾಜರಲ್ಲೂ ಅವು ಮರುದನಿ ಕೊಟ್ಟಿವೆ.

ಸಾವಿಗೆ ಆಯುಷ್ಯ ಇರಬೇಕೆಂದಿಲ್ಲ ಗರ್ಭದಲೂ ಸತ್ತ ಉದಾಹರಣೆಗಳಿವೆ

ಸಂತಾನಕ್ಕಾಗಿಯೇ ಸಂಸಾರ ಇರಬೇಕೆಂದಿಲ್ಲ ಸಂಸಾರದಿಂದ ಸಂತರಾದ ಉದಾಹರಣೆಗಳಿವೆ

ಸ್ವರ್ಗಕ್ಕಾಗಿ ಜೀವನ ಮಾಡಬೇಕೆಂದಿಲ್ಲ ಮನುಷ್ಯ ಜೀವನವೇ ಸ್ವರ್ಗವಾದ ಉದಾಹರಣೆಗಳಿವೆ

‘ಗಿರಿರಾಜನ’ ಗಜಲ್‌ಗಳೇ ಖುಷಿ ತರಬೇಕೆಂದಿಲ್ಲ ಹುಟ್ಟಿದ ಕೂಸ ನಗುವಲೂ ಖುಷಿ ಇದ್ದ ಉದಾಹರಣೆಗಳಿವೆ

ಇದು ಮನುಷ್ಯಘನತೆಯನ್ನು ಗೌರವಿಸುವ ಕಾವ್ಯ. ಪ್ರೇಮದ ಸ್ವಾತಂತ್ರ್ಯವನ್ನು, ಸಹಜ ಬದುಕಿನ ಮರ್ಯಾದೆಯ ಸ್ಥಾನವನ್ನು ಧರ್ಮಗಳು, ದರ್ಶನಗಳು, ಕಾವ್ಯಗಳು, ಸಂಗೀತ ಕಲೆಗಳು ಕದಲಿಸದಿರಲಿ ಎಂದು ಅದು ಆಶಿಸುತ್ತದೆ. ಸೈತಾನನನ್ನು ದ್ವೇಷಿಸಲೂ ಜಾಗವಿಲ್ಲದಂತೆ ನನ್ನ ಮನಸ್ಸು ಪ್ರೇಮದಿಂದಲೇ ತುಂಬಿ ಹೋಗಿದೆ ಎನ್ನುತ್ತಾಳೆ ಸಂತ ರಬಿಯಾ.ಸಾಯದಿರುವ, ಕೆಡದಿರುವ ಪ್ರೇಮದ ಹೊರತಾಗಿ ಬೇರೇನೂ ಬೇಡವೆಂದು ಅಕ್ಕ ಹೇಳುತ್ತಾಳೆ. ಮೂರ್ತರೂಪದ ಇಂದ್ರಿಯ ಜಗತ್ತನ್ನು ನಿರಾಕರಿಸಿದ ಯಾವ ತಾತ್ವಿಕತೆಯನ್ನೂ ಶರಣರಾಗಲೀ, ತತ್ವಪದಕಾರರಾಗಲೀ, ಸೂಫಿಗಳಾಗಲೀ ಮಾನ್ಯ ಮಾಡುವುದಿಲ್ಲ. ನಮ್ಮೆಲ್ಲರ ಇರುವಿಕೆ ಸಾಕಾರಗೊಳ್ಳುವುದೇ ದೇಹದ ಮೂಲಕ, ಇಂದ್ರಿಯಗಳ ಮೂಲಕ. ದೇಹಶಕ್ತಿಯು ನಿಜವಾಗಿ ಒಂದು ಸಂಭ್ರಮ. ಆ ಸಂಭ್ರಮವನ್ನು ಕಾವ್ಯವಾಗಿಸುವುದೇ ಗಜಲ್.ಗಜಲ್ ನಿಶ್ಚಿತವಾಗಿ ಒಂದು ರಾಜಕೀಯ ಪ್ರಜ್ಞೆ. ಇಂದು ಅಧಿಕಾರ ಕೇಂದ್ರಗಳನ್ನು ನಿಯಂತ್ರಿಸುತ್ತಿರುವ ಸಂಸ್ಥೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ನಮಗೆ ಇದರ ಅರಿವಾಗುತ್ತದೆ. ದೇವರು, ದೇವಸ್ಥಾನಗಳು, ಜಗದ್ಗುರುಗಳು, ಪುರೋಹಿತರು, ಪುಂಡರು, ಬಂಡವಾಳಶಾಹಿಗಳು... ಇತ್ಯಾದಿಗಳ ಈ ಪಟ್ಟಿ ಉದ್ದವಿದೆ. ಆದರೆ ರಾಜಕೀಯ ಕೇಂದ್ರಗಳ ನಿಜವಾದ ಯಜಮಾನರೆಂದರೆ ಕುಟುಂಬಸ್ತರು. ಎಲ್ಲ ರಾಜಕೀಯ ಕೇಂದ್ರಗಳೂ ಲೆಕ್ಕ ಕೊಡಬೇಕಾಗಿರುವುದು ಸಾಮಾನ್ಯ ಕುಟುಂಬ ಜೀವಿಗಳಿಗೆ. ಅವರನ್ನು ಕೇಂದ್ರದಲ್ಲಿಟ್ಟು ನೋಡುವ ಕಾವ್ಯ ರಾಜಕಾರಣವನ್ನು ಗಜಲ್ ಮಾಡುತ್ತದೆ. ಹಾಗಾಗಿ ಗಜಲ್ ನಮ್ಮ ಸಂದರ್ಭದ ಈಗಿನ ಅಗತ್ಯ ಕೂಡ. ಅದನ್ನು ಅಲ್ಲಾಗಿರಿರಾಜರ ಗಜಲ್‌ಗಳು ದೃಢಪಡಿಸುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.