ಗಜೇಂದ್ರಗಡ: ಅಂಧ ಶರಣಪ್ಪನ ಕರುಣಾಜನಕ ಕಥೆ

7

ಗಜೇಂದ್ರಗಡ: ಅಂಧ ಶರಣಪ್ಪನ ಕರುಣಾಜನಕ ಕಥೆ

Published:
Updated:

ಗಜೇಂದ್ರಗಡ: ಹುಟ್ಟಿನಿಂದಲೂ ಹಬ್ಬಗಳ ಸಂಭ್ರಮದ ಕಾಣದ ನತದೃಷ್ಟ ಯುವಕನಿವನು. ಹೌದು, ತನ್ನದಲ್ಲದ ತಪ್ಪಿಗೆ ಕಣ್ಣುಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಕೈ ತೊಳೆಯುತ್ತಿರುವ ಮೂವತ್ತೈದು ವರ್ಷದ ನತದೃಷ್ಟ ಯುವಕನ ಕರುಣಾಜನಕ ಕಥೆ ಇದು.

 

ಅದು ನಸುಕಿನ ಸಮಯ. ಗಜೇಂದ್ರಗಡ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಲಂಬಾಣಿ ಜನ ಬೆಟ್ಟ. ಗುಡ್ಡಗಳ ಪೊದೆಗಳಲ್ಲಿ ಕಟ್ಟಿಗೆಯನ್ನು ಕಡಿದು ಮಾರಾಟ ಮಾಡಿಯೇ ಬದುಕು ಸಾಗಿಸಬೇಕು.ಹೀಗಿರುವಾಗಲೇ ಸಮೀಪದ ಬೈಲಾಪುರ ತಾಂಡಾದ ದ್ಯಾಮವ್ವ ರಾಠೋಡ ಎಂಬ ಮಹಿಳೆ ಕಟ್ಟಿಗೆ ಪೆಂಡಿಯನ್ನು ಮಾರಾಟ ಮಾಡಲೆಂದು ಗಜೇಂದ್ರಗಡ ಪಟ್ಟಣಕ್ಕೆ ತೆರಳುತ್ತಿದ್ದಳು. ರೋಣ ರಸ್ತೆಯ ಸೇತುವೆ ಕೆಳಗೆ ಆಗ ತಾನೇ ಜನಿಸಿದ  ಹಸು ಕಂದಮ್ಮನ ಆರ್ತನಾದ ಅಳು ಕೇಳಿಸಿತು.ತಲೆಯ ಮೇಲಿನ ಕಟ್ಟಿಗೆ ಪೆಂಡಿಯನ್ನು ಕೆಳಗಿಳಿಸಿ ಹಸುಳೆ ಅಳುವಿನತ್ತ ಹೆಜ್ಜೆ ಹಾಕಿದಾಗ ಆಗ ತಾನೇ ಜನಿಸಿದ ಗಂಡು ಮಗುವೊಂದನ್ನು ನಿರ್ದಯಿಗಳು ಬಿಸಾಕಿದ ಪರಿಣಾಮ ಮಗುವಿನ ಎರಡು ಕಣ್ಣುಗಳನ್ನು ಇರುವೆ ಮತ್ತು ಕೋಳಿಗಳು ಕಿತ್ತು ತಿಂದು ಹಾಕಿದ್ದವು.ಕಣ್ಣು ಕಳೆದುಕೊಂಡ ನೋವಿಗೆ ವಿಲಿವಿಲಿ ಒದ್ದಾಡುತ್ತಿದ್ದ ಹಸುಗೂಸನ್ನು ಗಂಡು ಮಕ್ಕಳಿಲ್ಲದ ದ್ಯಾಮವ್ವ ತನ್ನ ಸೆರಗಿನಲ್ಲಿ ಹಾಕಿಕೊಂಡು ಭೈರಾಪುರ ತಾಂಡಾಕ್ಕೆ ಬಂದು ಪತಿ ರಾಮಚಂದ್ರಪ್ಪನಿಗೆ ವಿಷಯ ತಿಳಿಸಿದಾಗ, ಗಂಡು ಮಗುವಿಗಾಗಿ ಹಲವು ವರ್ಷಗಳಿಂದ ಪರಿತಪಿಸುತ್ತಿದ್ದ ಈ ದಂಪತಿಗಳಿಗೆ ಎಲ್ಲಿಲ್ಲದ ಸಂತೋಷ. ಆದರೆ, ಮಗುವಿನ ಕಣ್ಣುಗಳನ್ನು ತಿಂದು ಹಾಕಿರುವುದು ಬೇಸರ ಮೂಡಿಸಿತ್ತು.ಮುಸ್ಲಿಂ ಮಗು

ಮೊದಲೇ ಗಂಡು ಮಗುವಿಗಾಗಿ ಪರಿತಪಿಸುತ್ತಿದ್ದ ದ್ಯಾಮವ್ವ ಹಾಗೂ ರಾಮಚಂದ್ರಪ್ಪ ದಂಪತಿಗಳಿಗೆ ಗಂಡು ಮಗು ಸಿಕ್ಕ ಸಂಭ್ರಮದಲ್ಲಿ ಆ ಮಗುವಿಗೆ ಕಲಬುರ್ಗಿ ಶರಣಪ್ಪನವರ ವರವೆಂದು ಭಾವಿಸಿ ಶರಣಪ್ಪ ಎಂದು ನಾಮಕರಣ ಮಾಡಿದರು. ಮಗುವಿನ ಕಣ್ಣುಗಳನ್ನು ಸರಿಪಡಿಸಲು ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಸುತ್ತಿದರೂ ಯಾವುದೇ ಪ್ರಯೋಜನವಾಗಲಿಲ್ಲ.ಈ ಎಲ್ಲ ಪ್ರಯತ್ನಗಳು ನಡೆಯುವಷ್ಟರಲ್ಲಿ ಮೂರ‌್ನಾಲ್ಕು ವರ್ಷ ಗತಿಸಿ ಹೋಗಿದ್ದವು. ಆಗ ಮುಸ್ಲಿಂ ಮಹಿಳೆಯೊಬ್ಬರು ಮಗು ನನ್ನದು, ನನಗೆ ಮಗು ಕೊಡಿ ಎಂದು ದ್ಯಾಮವ್ವ ಮತ್ತು ರಾಮಚಂದ್ರಪ್ಪ ದಂಪತಿಯಲ್ಲಿ ಗೋಗರೆದಳು. ಮಗು ಅಂಧತ್ವ ಎದುರಿಸುತ್ತಿದೆ ಎಂಬ ಸಂಗತಿ ತಿಳಿದು ಮಗು ಬೇಡವೆಂದು ಅಲ್ಲಿಂದ ಕಾಲ್ಕಿತ್ತ ಘಟನೆ ನಡೆಯಿತು. ಶರಣಪ್ಪನಿಗೆ ಸದ್ಯ 35 ವರ್ಷ. ಅಂಧ ಶರಣಪ್ಪನನ್ನು ಲಾಲನೆ, ಪಾಲನೆ ಮಾಡಿ ಸ್ವಂತ ಮಗುವಿನಂತೆ ನಿತ್ಯ ಕರ್ಮಾದಿಗಳಿಗೆ ಆಸರೆಯಾಗಿದ್ದ ಲಂಬಾಣಿ ದಂಪತಿ ಶರಣಪ್ಪ 20 ವರ್ಷದವನಿದ್ದಾಗಲೇ ವಿಧಿವಶರಾದರು. ದ್ಯಾಮವ್ವ ಮತ್ತು ರಾಮಚಂದ್ರ ದಂಪತಿ ಸ್ವಂತ ಮಗಳು ಶಾಂತವ್ವ ಪಮ್ಮಾರ ಶರಣಪ್ಪನ ಆರೈಕೆಯ ಹೊಣೆ ಹೊತ್ತಿದ್ದಾರೆ.ಕಿತ್ತು ತಿನ್ನುವ ಬಡತನ ಸಮಸ್ಯೆ ಎದುರಿಸುತ್ತಿದ್ದ ಶಾಂತವ್ವ ಶಿವಪ್ಪ ಪಮ್ಮಾರ ದಂಪತಿಗೆ ಅಂಧ ಶರಣಪ್ಪ ಭಾರವಾದರು. ಹೀಗಿರುವಾಗಲೇ ಪಮ್ಮಾರ ಕುಟುಂಬ ಭೈರಾಪುರ ತಾಂಡಾದಿಂದ ಕಾಲಕಾಲೇಶ್ವರ ಗ್ರಾಮಕ್ಕೆ ಉದ್ಯೋಗ ಅರಸಿ ಹೊರಟಿತು. ಕಾಲಕಾಲೇಶ್ವರ ಗ್ರಾಮದ ತೋಟವೊಂದನ್ನು ಕಾಯುವ ಕಾಯಕದಲ್ಲಿ ತೊಡಗಿತು. ಅಂಧ ಶರಣಪ್ಪ ಪ್ರತಿ ತಿಂಗಳು ಬರುವ ಮಾಸಶಾನ ಹಾಗೂ ಹುಣ್ಣಿಗೆ, ಅಮವಾಸ್ಯೆ ದಿನದಂದು ಕಾಲಕಾಲೇಶ್ವರ ದೇವಸ್ಥಾನ ಮುಂದೆ ಭಿಕ್ಷೆ ಬೇಡಿ 50ರಿಂದ 100 ರೂಪಾಯಿಗಳನ್ನು ಸಹೋದರಿ ಶಾಂತವ್ವನ ಕೈಗೆ ನೀಡುತ್ತಾನೆ.ಆಸರೆಯಿಲ್ಲ: ಅಂಧ ಶರಣಪ್ಪನಿಗೆ ಹೊರ ಜಗತ್ತಿನ ಬೆಳಕು ಕಂಡಿಲ್ಲ. ಅಂತರಂಗದ ಬೆಳಕು ದೊರೆತಿಲ್ಲ. ಪರಿಣಾಮ ಕಿತ್ತು ತಿನ್ನುವ ಬಡತನ. ಸಹೋದರಿ ಶಾಂತವ್ವ ಶಿವಪ್ಪ ಪಮ್ಮಾರ ದಂಪತಿ ನಿತ್ಯ ಕೂಲಿ ಮಾಡದಿದ್ದರೆ ತುತ್ತು ಗಂಜಿಯೂ ದೂರ. ಅಂಧ, ಅನಾಥರ ಬಾಳಲ್ಲಿ ಆಶಾ ಕಿರಣ ಮೂಡಿಸಲು ಸರ್ಕಾರ ಹತ್ತಾರೂ ಯೋಜನೆಗಳನ್ನು ರೂಪಿಸಿದೆ ಎಂದು ಹೇಳುತ್ತಿವೆಯಾದರೂ ಶರಣಪ್ಪನಿಗೆ ನಿವೇಶನ, ಪಡಿತರ ಚೀಟಿಯೂ ಇಲ್ಲದಿರುವುದು ವಿಪರ್ಯಾಸವೇ ಸರಿ.ಅಂಧ ಶರಣಪ್ಪನಿಗೆ ಮಾತ್ರವಲ್ಲದೆ, ಸಹೋದರಿ ಪಮ್ಮಾಳ ಕುಟುಂಬಕ್ಕೂ ದೀಪಾವಳಿ ಮಾತ್ರವಲ್ಲದೆ ಪ್ರತಿಯೊಂದು ಹಬ್ಬಗಳ ಸಂಭ್ರಮದ ಗಾಳಿಯೂ ಸಹ ಸುಳಿದಿಲ್ಲ. ಇವರಿಗೆ ಬರೀ ಕಷ್ಟಗಳ ಸರಮಾಲೆಯೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry