ಗಜೇಂದ್ರಗಡ: ಅನಿಯಮಿತ ವಿದ್ಯುತ್: ಆತಂಕದಲ್ಲಿ ರೈತರು

7

ಗಜೇಂದ್ರಗಡ: ಅನಿಯಮಿತ ವಿದ್ಯುತ್: ಆತಂಕದಲ್ಲಿ ರೈತರು

Published:
Updated:

ಗಜೇಂದ್ರಗಡ: ಅನಿಯಮಿತ ವಿದ್ಯುತ್ ಪೂರೈಕೆ ಹಾಗೂ ಅಳವಡಿಸಿದ ಒಂದೆರಡು ದಿನಗಳಲ್ಲಿ ಸುಡುವ ಕಳಪೆ ವಿದ್ಯುತ್ ಪರಿವರ್ತಕ (ಟಿ.ಸಿ) ಗಳಿಂದಾಗಿ ಗಜೇಂದ್ರಗಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೀರಾವರಿ ಬೇಸಾಯಕ್ಕೆ ಬಾರಿ ಹಿನ್ನಡೆಯಾಗಿದೆ. ಇದರಿಂದಾಗಿ ರೈತರಲ್ಲಿ ತೀವ್ರ ಬೇಸರ ಮೂಡಿದೆ.ಗ್ರಾಮೀಣ ಪ್ರದೇಶದ ರೈತರ ಅನುಕೂಲಕ್ಕಾಗಿ ಕನಿಷ್ಟ 6 ಗಂಟೆ ತ್ರಿಫೇಸ್ ವಿದ್ಯುತ್ ನೀಡುವುದಾಗಿ ಹೇಳುತ್ತಿರುವ ಸರ್ಕಾರ ಹಾಗೂ ಇಲಾಖೆ ತಾಲ್ಲೂಕಿನಲ್ಲಿ ಕನಿಷ್ಟ 3 ಗಂಟೆಯೂ ನೀಡದಿರುವುದು ನೀರಾವರಿ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ. ಇದರೊಟ್ಟಿಗೆ ವಿದ್ಯುತ್ ಪರಿವರ್ತಕಗಳು ನಿತ್ಯ ಸುಡುತ್ತಿರುವುದು ಬೆಳೆಗಳಿಗೆ ಸಕಾಲಕ್ಕೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ ಎಂಬುದು ರೈತರ ಅಳಲು.ಒಟ್ಟು 93,000 ಹೆಕ್ಟೇರ್ ಒಟ್ಟು ಸಾಗುವಳಿ ಪ್ರದೇಶದಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶ ಕೊಳವೆ ಬಾವಿ ನೀರಾವರಿಗೆ ಒಳಪಟ್ಟಿದೆ. ಜಿಲ್ಲೆಯ ಅತ್ಯಂತ ಹಿಂದುಳಿದ ಪಟ್ಟಣ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಗಜೇಂದ್ರಗಡಕ್ಕೆ ಮಳೆರಾಯನ ಕೃಪೆಗಿಂತ ಅವಕೃಪೆಯೇ ಹೆಚ್ಚು. ಹೀಗಾಗಿಯೇ ಗಜೇಂದ್ರಗಡ, ನರೇಗಲ್, ಸೂಡಿ, ಇಟಗಿ, ರಾಜೂರ, ಲಕ್ಕಲಕಟ್ಟಿ, ನಾಗೇಂದ್ರಗಡ, ಬೇವಿನಕಟ್ಟಿ, ನೆಲ್ಲೂರ, ಮುಶಿಗೇರಿ, ಕಾಲಕಾಲೇಶ್ವರ, ಗೋಗೇರಿ, ನಾಗರನಕೊಪ್ಪ, ಕೊಡಗಾನೂರ, ರಾಮಾಪುರ, ಜಿಗೇರಿ ಸೇರಿದಂತೆ ಇತರ ಗ್ರಾಮಗಳ ರೈತರು ನೀರಾವರಿಯನ್ನೇ ಆಶ್ರಯಿಸಿದ್ದಾರೆ.ಗಜೇಂದ್ರಗಡ ಸುತ್ತಮುತ್ತ 5 ಸಾವಿರ ಕೊಳವೆ ಬಾವಿಗಳಿದ್ದು, 7 ಸಾವಿರ ರೈತ ಕುಟುಂಬಗಳು ಬಹುತೇಕ ವರ್ಷಗಳಿಂದ ನೀರಾವರಿ ಬೇಸಾಯದಲ್ಲಿ ನಿರತವಾಗಿವೆ. ಪ್ರಸಕ್ತ ವರ್ಷ 13ಸಾವಿರ ಹೆಕ್ಟೇರ್ ಮೆಕ್ಕೆಜೋಳ, 7,061 ಹೆಕ್ಟೇರ್ ಶೇಂಗಾ, 224 ಹೆಕ್ಟೇರ್‌ನಲ್ಲಿ ವಿವಿಧ ಬಗೆಯ ತರಕಾರಿ ಹಾಗೂ 300 ಹೆಕ್ಟೇರ್ ದ್ರಾಕ್ಷಿ, 100 ಹೆಕ್ಟೇರ್ ತೆಂಗು, 60 ಹೆಕ್ಟೇರ್ ನಿಂಬೆ, 3 ಸಾವಿರ ಹೆಕ್ಟೇರ್ ವಿಳ್ಯದ ಎಲೆ ಬೆಳೆಗಳನ್ನು ಬೆಳೆಯಲಾಗಿದೆ.ಈ ಎಲ್ಲ ನೀರಾವರಿ ಬೆಳೆಗಳಿಗೂ ನೀರುಣಿಸಲೇ ಬೇಕು. ಹಾಗೊಂದು ವೇಳೆ ನಿರ್ಲಕ್ಷಿಸಿದರೆ, ಇಳುವರಿಯಲ್ಲಿ ಇಳಿಕೆ, ವಿವಿಧ ರೋಗಗಳ ಅಂಟಿಕೊಳ್ಳುವಿಕೆ ಬೆಳೆ ನಾಶ ಹೀಗೆ ಒಂದಿಲ್ಲೊಂದು ಸಮಸ್ಯೆ ಬರುತ್ತವೆ. ಇದರಿಂದ ರೈತರು ನಷ್ಟ ಅನುಭವಿಸಿ ಸಾಲದ ಶೂಲಕ್ಕೆ ಸಿಲುಕಬೇಕಾಗುತ್ತದೆ.ಈ ಹಿಂದಿನ ವರ್ಷಕ್ಕಿಂತ ಪ್ರಸಕ್ತ ವರ್ಷ ವಿದ್ಯುತ್ ಪೂರೈಕೆಯಲ್ಲಿ ವಿದ್ಯುತ್ ಪರಿವರ್ತಕಗಳಿಂದ ತೀವ್ರ ತೊಂದರೆಯಾಗುತ್ತಿದೆ.ಬಹುದಿನಗಳಿಂದ ಅಳವಡಿಸಲಾಗಿರುವ 1035 ಪರಿವರ್ತಕಗಳೇ ಸಧ್ಯದ ಜನಸಂಖ್ಯೆಗೂ ಕಾರ್ಯನಿರ್ವಹಿಸುತ್ತಿವೆ. ಸಧ್ಯ 4-5 ಲಕ್ಷ ಜನಸಂಖ್ಯೆ ಹೊಂದಿರುವ ಪಟ್ಟಣ ಸೇರಿದಂತೆ ಸುತ್ತಮುತ್ತಲು 5 ವಿದ್ಯುತ್ ವಿತರಣಾ ಕೇಂದ್ರಗಳಿವೆ. ರೋಣದ 27 ಗ್ರಾಮಗಳಲ್ಲಿ 270, ಗಜೇಂದ್ರಗಡದ 22 ಗ್ರಾಮಗಳಿಗೆ 265, ನರೇಗಲ್ 22 ಗ್ರಾಮಗಳಿಗೆ 151, ಹೊಳೆಆಲೂರ 18 ಗ್ರಾಮಗಳಿಗೆ 174, ಮುಶಿಗೇರಿ 19 ಗ್ರಾಮಗಳಿಗೆ 175 ಪರಿವರ್ತಕಗಳು ಕಾರ್ಯನಿರ್ವಹಿಸುತ್ತಿವೆ.

 

ಆದರೆ, ಗ್ರಾಹಕರ ಸಂಖ್ಯೆ ಗಣನೀಯವಾಗಿ ವೃದ್ಧಿಯಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಕನಿಷ್ಟ 4,140 ಹೊಸ ಪರಿವರ್ತಕಗಳ ಅಗತ್ಯವಿದೆ. 10 ನೀರಾವರಿ ಕೊಳವೆ ಬಾವಿಗಳಿಗೊಂದು 63ಕೆವಿ ಪರಿವರ್ತಕಗಳು ಕಾರ್ಯನಿರ್ವಹಿಸುತ್ತಿವೆ. ಪರಿಣಾಮ ನಿತ್ಯ ಪರಿವರ್ತಕಗಳು ಸುಟ್ಟು ಹೋಗುತ್ತಿವೆ.ಹೀಗೆ ಸುಟ್ಟ ಪರಿವರ್ತಕಗಳ ದುರಸ್ತಿ, ಬದಲಾವಣೆಗೆ ಹೆಸ್ಕಾಂ ಗುತ್ತಿಗೆ ನೀಡಿರುವ ಆದಿಶಕ್ತಿ ಖಾಸಗಿ ಕಂಪೆನಿ ಪರಿವರ್ತಕಗಳನ್ನು ದುರಸ್ತಿಗೊಳಿಸ ಒಂದೆರಡು ದಿನಗಳಲ್ಲಿ ಮತ್ತೇ ಸುಡುತ್ತವೆ. ಇದರಿಂದಾಗಿ ಸಕಾಲಕ್ಕೆ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಜಿಲ್ಲಾ ಹಣ್ಣು ಬೆಳೆಗಾರ ಸಂಘದ ಅಧ್ಯಕ್ಷ ವೀರನಗೌಡ ಗೌಡರ.ಪ್ರಸಕ್ತ ವರ್ಷದ ವಿದ್ಯುತ್‌ತೊಂದರೆಯಿಂದಾಗಿ ನೀರಾವರಿ ರೈತರಿಗೆ 10 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿ ಈಗಾಗಲೇ ಎರಡು ಬಾರಿ ಸಾಂಕೇತಿಕ ಧರಣಿ ನಡೆಸಲಾಗಿದೆ.ಹೀಗಿದ್ದರೂ ಕಳಪೆ ಪರಿವರ್ತಕಗಳನ್ನು ಅಳವಡಿಕೆ ಮಾಡುತ್ತಿದ್ದರಿಂದ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಿದ್ದರೂ ಇಲಾಖೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಜಿಲ್ಲಾ ಹಣ್ಣು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ ಹೂಗಾರ ಆರೋಪಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry