ಮಂಗಳವಾರ, ಮೇ 18, 2021
22 °C

ಗಟ್ಟಿಗಿತ್ತಿ ಅರುಣಿಮಾ...

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

`ಮೌಂಟ್ ಎವರೆಸ್ಟ್ ಏರುವುದು ತಮಾಷೆಯ ಮಾತಲ್ಲ. ದೇಹದ ಎಲ್ಲಾ ಅಂಗಾಂಗಗಳು ಸರಿಯಿದ್ದಾಗಲೂ ಈ ಸಾಧನೆ ಸುಲಭವಲ್ಲ. ಅಂತಹುದರಲ್ಲಿ ಒಂಟಿ ಕಾಲಿರುವ ನಿನಗೆ ಎವರೆಸ್ಟ್ ಏರಲು ಸಾಧ್ಯವೇ? ನಿನ್ನ ಹುಚ್ಚು ಆಸೆಯನ್ನು ಕೈ ಬಿಡು...'-ಹೀಗೆ ಟೀಕೆ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ ಅರುಣಿಮಾ ಸಿನ್ಹಾ. ತಮ್ಮತ್ತವೇ ಚಾಟಿ ಬೀಸಿದ್ದವರಿಗೆ ಮರು ಚಾಟಿ ಏಟು ನೀಡಿದ್ದಾರೆ.

ಒಂಟಿ ಕಾಲಿನ ಅರುಣಿಮಾ ಎವರೆಸ್ಟ್ ಏರುವ ಕನಸನ್ನು ಹಂಚಿಕೊಂಡಾಗ ಕೊಂಕು ನುಡಿದವರೇ ಹೆಚ್ಚು. ನಿನಗೆ ಸ್ವತಂತ್ರವಾಗಿ ನಡೆಯುವುದೇ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಎಂತಹ ಹುಚ್ಚು ಆಸೆ ನಿನ್ನದು ಎಂದು ಹೇಳಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಮಾತನ್ನೆಲ್ಲ ನಿರ್ಲಕ್ಷಿಸಿದ ಅವರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಕಷ್ಟು ತಯಾರಿ ನಡೆಸಿದ್ದರು. ಗುರಿ ಮುಟ್ಟುವ ಹಾದಿಯಲ್ಲಿ ಎಡವಬಾರದು ಎನ್ನುವ ಎಚ್ಚರಿಕೆ ಅದು. ಅದಕ್ಕಾಗಿ ಮೌಂಟ್ ಏವರೆಸ್ಟ್ ಏರಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿರುವ ಬಚೇಂದ್ರಿ ಪಾಲ್ ಅವರಲ್ಲಿ ತರಬೇತಿ ಪಡೆದರು.ಕಾಲು ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಎವರೆಸ್ಟ್ ಏರುವ ಸಾಧನೆಯ ಕನಸು ಅರುಣಿಮಾ ಕಣ್ಣ ಮುಂದೆ ಸುಳಿದಾಡಿತು. ಆದರೆ, ಪೋಷಕರಲ್ಲಿ ಆತಂಕ, ದುಗುಡವಿದ್ದರೂ, ಮಗಳ ಛಲದ ಬಗ್ಗೆ ನಂಬಿಕೆಯಿತ್ತು. ಆ ನಂಬಿಕೆ ಈಗ ನಿಜವಾಗಿದೆ. ಅರುಣಿಮಾ ವಾಲಿಬಾಲ್ ಜೊತೆಗೆ ಫುಟ್‌ಬಾಲ್ ಆಟಗಾರ್ತಿ ಕೂಡಾ ಆಗಿದ್ದಾರೆ. ಬದುಕಿನ ಅನಿರೀಕ್ಷಿತ ತಿರುವಿನಿಂದ ಸಂಕಷ್ಟಕ್ಕೆ ಸಿಲುಕಿದ್ದ ಬದುಕನ್ನು ಸುಂದರಗೊಳಿಸಿಕೊಳ್ಳುವ ಯತ್ನದಲ್ಲಿದ್ದಾರೆ. ರಕ್ತ ಸೋರುವ ಕೃತಕ ಕಾಲು ಕಟ್ಟಿಕೊಂಡೇ ಎವರೆಸ್ಟ್ ಏರಿ ಬಂದಿರುವ ಅರುಣಿಮಾ ಟೀಕಾಕಾರರಿಗೆ, ಸರ ದೋಚಿ ರೈಲಿನಿಂದ ಹೊರದಬ್ಬಿದ ದುಷ್ಕರ್ಮಿಗಳಿಗೆ ಸಾಧನೆಯ ಮೂಲಕವೇ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿ ಕೊಟ್ಟಿದ್ದಾರೆ.ಬದುಕಿನಲ್ಲಿ ಸಣ್ಣ ಸಮಸ್ಯೆ ಎದುರಾದರೂ ಅತ್ಮಹತ್ಯೆಯ ದಾರಿ ಹುಡುಕುವ ದುರ್ಬಲ ಮನಸ್ಸಿನವರಿಗೆ ಅರುಣಿಮಾ ಸ್ಫೂರ್ತಿಯ ಸೆಲೆ. ಬದುಕು ಇರುವುದೇ ಸವಾಲುಗಳನ್ನು ಎದುರಿಸಲು ಎನ್ನುವ ಪಾಠ ಹೇಳಿಕೊಟ್ಟ ಅವರು, ಬದುಕಿನಲ್ಲಿ ಇನ್ನಷ್ಟು ಸವಾಲುಗಳನ್ನು ಒಪ್ಪಿಕೊಳ್ಳುವ ಗುರಿ ಹೊಂದಿದ್ದಾರೆ. ಆದರೆ, ಏವರೆಸ್ಟ್ ಏರಿ ಬಂದ ದಣಿವು ಆರಲೆಂದು ಕೆಲ ದಿನ ವಿಶ್ರಾಂತಿ ಪಡೆಯಲಿದ್ದಾರೆ.ಅದು ದುರಂತ ಕತೆ

ಮಹಿಳೆಯಾಗಿ ಅರುಣಿಮಾ ಎವರೆಸ್ಟ್ ಏರಿದ್ದರೆ ಅದರಲ್ಲಿ ಹೆಚ್ಚು ಸಂಭ್ರಮಿಸುವಂತದ್ದು ಏನೂ ಇರಲಿಲ್ಲ. ಈ ಮುನ್ನ ಹಲವು ಮಹಿಳೆಯರು ಎವರೆಸ್ಟ್ ಏರಿದ ಸಾಧನೆ ಮಾಡಿದ್ದಾರೆ. ಆದರೆ, ಅರುಣಿಮಾ ಒಂಟಿ ಕಾಲಿನ ಸಾಹಸಿ. ಅವರು ತಮ್ಮ ಕಾಲನ್ನು ಕಳೆದುಕೊಳ್ಳಲು ಕಾರಣವಾಗಿದ್ದು ರೈಲಿನಲ್ಲಿ ನಡೆದ ಅವಘಡ.ಅಂದು 2011ರ ಏಪ್ರಿಲ್ 11. ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾಗಿದ್ದ ಅರುಣಿಮಾ ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ತೆರಳುವಾಗ  ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದರು. ಸಿಐಎಸ್‌ಎಫ್ ಪರೀಕ್ಷೆ ಬರೆಯಲು ಅವರು ತೆರಳುತ್ತಿದ್ದರು. ಆಗ ಅವರ ಕೊರಳಲ್ಲಿದ್ದ ಸರವನ್ನು ಕಿತ್ತುಕೊಳ್ಳಲು ದುಷ್ಕರ್ಮಿಗಳು ಮುಂದಾದಾಗ ಅದನ್ನು ಬಲವಾಗಿ ಪ್ರತಿಭಟಿಸಿದ್ದರು. ಈ ವೇಳೆ ದುಷ್ಕರ್ಮಿಗಳು ಅರುಣಿಮಾ ಅವರನ್ನು ಚಲಿಸುವ ರೈಲಿನಿಂದಲೇ ಹೊರದಬ್ಬಿದ್ದರು. ಆಗ ಶಾಶ್ವತವಾಗಿ ಎಡಗಾಲು ಕಳೆದುಕೊಂಡರು.ಕಾಲು ಕಳೆದುಕೊಂಡು ನಿರಾಸೆ ಕಾಡಿದಾಗ ಹಲವು ಗೆಳೆಯರು ಸಾಂತ್ವನ ಹೇಳಿದರು. ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಅರುಣಿಮಾ ನೆರವಿಗೆ ನಿಂತರು. `ಮತ್ತೆ ನೀನು ಮೊದಲಿನಂತಾಗುವೆ. ನಿನ್ನ ಕಷ್ಟಗಳೇ ಸಾಧನೆಗೆ ಪ್ರೇರಣೆಯಾಗಲಿ' ಎಂದು `ಯುವಿ' ಸ್ಫೂರ್ತಿಯ ಮಾತುಗಳನ್ನಾಡಿದ್ದರು. ಅದೇ ರೀತಿ ಎಷ್ಟೇ ಕಷ್ಟ ಎದುರಾದರೂ, ವಾಲಿಬಾಲ್ ಆಟಗಾರ್ತಿ ಮಾತ್ರ ಬದುಕಿನ ಬಗ್ಗೆ ಹುಮ್ಮಸ್ಸು ಕಳೆದುಕೊಳ್ಳಲಿಲ್ಲ.`ನಿನ್ನಿಂದ ಎವರೆಸ್ಟ್ ಏರಲು ಸಾಧ್ಯವೇ ಇಲ್ಲ' ಎಂದು ಟೀಕೆ ಮಾಡಿದವರಿಗೆ ನನ್ನ ಸಾಧನೆಯ ಮೂಲಕವೇ ಉತ್ತರ ನೀಡಿದ್ದೇನೆ. ನನಗಿಂತಲೂ ಸಾಕಷ್ಟು ಎತ್ತರದಲ್ಲಿದ್ದ ಎವರೆಸ್ಟ್ ಮೇಲೆ ನಿಂತು ಸಂಭ್ರಮಿಸಿದ್ದೇನೆ. ಅದನ್ನೇರುವ ಕನಸು ಮೂಡಿದಾಗ ಎವರೆಸ್ಟ್ ನನ್ನ ಮೇಲಿತ್ತು. ನಾನೀಗ ಅದರ ಮೇಲಿದ್ದು ಬಂದಿದ್ದೇನೆ. ಏನೇ ಸಂಕಷ್ಟ ಎದುರಾದರೂ ಪ್ರತಿಯೊಬ್ಬರಿಂದಲೂ ಈ ಸಾಧನೆ ಖಂಡಿತಾ ಸಾಧ್ಯ. ಏನೇ ಆಗಲಿ, ಬದುಕಿನ ಉತ್ಸಾಹ ಮಾತ್ರ ಕಳೆದುಕೊಳ್ಳಬಾರದು. ಅದು ಸಾಧನೆಗೆ ಪ್ರೇರಣೆ' ಎನ್ನುತ್ತಾರೆ ಛಲಗಾತಿ ಅರುಣಿಮಾ.ಸವಾಲು ಒಪ್ಪದವರೇ ಅಂಗವಿಕಲರು

ಅಂಧನಾಗಿದ್ದುಕೊಂಡು ಕೇವಲ 13ನೇ ವಯಸ್ಸಿಗೆ ಅಮೆರಿಕದ ಹೆಸರಾಂತ ಡಾಕ್ಟರ್ ಆದ ಡೇವಿಡ್ ಹಾರ್ಟ್‌ಮನ್ ಎನ್ನುವ ಸಾಧಕನ ಬದುಕೇ ನನಗೆ ಸ್ಫೂರ್ತಿ.ಡೇವಿಡ್‌ಗೆ ಬದುಕು ಕತ್ತಲು ಎಂದು ಗೊತ್ತಿದ್ದರೂ, ತನ್ನ ಛಲದಿಂದ ಬದುಕನ್ನು ನೋಡುವ ದಿಕ್ಕು ಬದಲಿಸಿಕೊಂಡಾತ. ತನ್ನನ್ನೇ ತಾನು ನೋಡಿಕೊಳ್ಳಲು ಸಾಧ್ಯವಾಗದ ಆತ ರೋಗಿಗಳನ್ನು ಅತ್ಯುತ್ತಮವಾಗಿ ಪರೀಕ್ಷೆ ಮಾಡುತ್ತಿದ್ದ. ಆತನ ಬದುಕಿನಿಂದಲೇ ಪ್ರೇರಣೆ ಪಡೆದೆ. ಎವರೆಸ್ಟ್ ಏರುವ ಕನಸನ್ನು ನನಸು ಮಾಡಿಕೊಂಡೆ.ದುಷ್ಕರ್ಮಿಗಳು ನನ್ನನ್ನು ರೈಲಿನಿಂದ ಹೊರಗೆಸೆದಾಗ, ಆ ಕ್ಷಣದಲ್ಲಿ ಬದುಕೇ ಮುಗಿದು ಹೋಯಿತು ಎಂದುಕೊಂಡಿದ್ದೆ. ಆದರೆ, ಈಗೆನಿಸುತ್ತಿದೆ ನಿಜವಾದ ಬದುಕು ಈಗ ಶುರುವಾಗಿದೆ ಎಂದು. ಕಾಲು ಕಳೆದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾಗ ರಾತ್ರಿಯಿಡೀ ಒಂಟಿಯಾಗಿ ಅಳುತ್ತಿದ್ದೆ. ನನ್ನಿಂದ ಯಾವ ಸವಾಲನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿ ಕೂಡುತ್ತಿದ್ದೆ. ಈಗ ಬದುಕಿನಲ್ಲಿ ಸವಾಲುಗಳನ್ನು ಒಪ್ಪಿಕೊಳ್ಳದವರೇ ನಿಜವಾದ ಅಂಗವಿಕಲರು ಎನಿಸುತ್ತಿದೆ. ಇದು ಬದುಕು ಕಲಿಸಿದ ಪಾಠ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.