ಗಡಗಡ ಚಳಿಗೆ ಗರಂ ಕಾಫಿ

ಶುಕ್ರವಾರ, ಜೂಲೈ 19, 2019
23 °C

ಗಡಗಡ ಚಳಿಗೆ ಗರಂ ಕಾಫಿ

Published:
Updated:

ಅರಸೀಕೆರೆಯಿಂದ ರೈಲಿನಲ್ಲಿ ಬಂದವಳು ಪ್ಲಾಟ್‌ಫಾರ್ಮ್‌ ಒಂಬತ್ತರಿಂದ ಸಿಟಿ ರೈಲು ನಿಲ್ದಾಣದಿಂದ ಹೊರಬರುತ್ತಿದ್ದೆ. ಎರಡೂ ಕೈಯಲ್ಲಿ ಲಗೇಜ್. ಭುಜಕ್ಕೆ ನೇತುಹಾಕಿಕೊಂಡಿದ್ದ ವ್ಯಾನಿಟಿ ಬ್ಯಾಗ್‌ನ ತೂಕವೂ ಮಿತಿ ಮೀರಿದ್ದರಿಂದ ಹೆಜ್ಜೆ ಎತ್ತಿ ಇಡುವುದೇ ದುಸ್ತರ ಎನಿಸುತ್ತಿತ್ತು. ಅದೇ ಮೊದಲ ಬಾರಿಗೆ ಒಂಟಿಯಾಗಿ ರೈಲಿನಲ್ಲಿ ಬಂದಿದ್ದರಿಂದ ಕೂಲಿಗಳಿಗೆ ಎಷ್ಟು ದುಡ್ಡು ಕೊಡಬಹುದು ಎಂಬ ಅಂದಾಜು ಇಲ್ಲದ್ದರಿಂದ ಅವರಿಂದ ತಪ್ಪಿಸಿಕೊಂಡು ಹೊರಬಂದು ಮುಖ್ಯದ್ವಾರದ ಬಳಿಯ ಆಟೊ ನಿಲ್ದಾಣದತ್ತ ನಡೆದೆ.

`ಬನ್ನಿ ಮೇಡಂ, ಬನ್ನಿ ಮೇಡಂ~ಗಳನ್ನು ದಾಟುತ್ತಾ ಹೋದೆ. ಬೆಂಗಳೂರಿಗೆ ಬಂದು ಆರು ತಿಂಗಳಾಗಿತ್ತು. ಒಂದೊಂದು ಸಲ ಆಟೊದಲ್ಲಿ ಪ್ರಯಾಣಿಸಿದಾಗಲೂ ಕಹಿ ಅನುಭವವೇ ಆಗಿತ್ತು. ಒರಟು ಮಾತು, ಮೀಟರ್ ಮೇಲೆ ಅಷ್ಟು ಕೊಡಿ ಇಷ್ಟು ಕೊಡಿ ಎಂಬ ಬೇಡಿಕೆಗಳಿಂದ ಪ್ರತಿ ಬಾರಿಯೂ ಬೇಸರಗೊಂಡಿದ್ದೆ. ಅಂದು ಅಷ್ಟು ಲಗೇಜ್ ಬೇರೆ ಇತ್ತು. ಹಾಗಾಗಿ ಸಭ್ಯ ಮುಖದ ಚಾಲಕನ ಆಟೊ ಹತ್ತುವ ಇರಾದೆ ನನ್ನದಾಗಿತ್ತು. ನನ್ನ ಅದೃಷ್ಟಕ್ಕೆ ಕೊನೆಗೂ ನಗುಮುಖದ ಚಾಲಕನೇ ಸರತಿಯಲ್ಲಿ ನನಗೆ ಸಿಕ್ಕಿದಾಗ ನನಗಾದ ಸಂತೋಷ  ಅಷ್ಟಿಷ್ಟಲ್ಲ. ಮೀಟರ್ ಮೇಲೆ ಲಗೇಜ್‌ಗಾಗಿ ಮೂವತ್ತು ರೂಪಾಯಿ ಕೇಳಿದ. ಓಕೆ ಅಂದೆ.

ಕನಕಪುರ ರಸ್ತೆಯಲ್ಲಿರುವ ನನ್ನ ಮನೆ ತಲುಪಬೇಕಾದರೆ ಕನಿಷ್ಠ ಒಂದು ಗಂಟೆಯಾದರೂ ಬೇಕಿತ್ತು. ಚಾಲಕನಂತೂ ಗಪ್‌ಚುಪ್ ಅಂತ ಕುಳಿತಿದ್ದ. ಹಂಪ್‌ಗಳು ನನ್ನನ್ನು ಎತ್ತಿಹಾಕಿದಾಗಲೆಲ್ಲ ತಲೆಮೇಲಿನ ಕನ್ನಡಿಯಲ್ಲೊಮ್ಮೆ ಇಣುಕಿ ನೋಡುತ್ತಿದ್ದ. ಉಳಿದಂತೆ ಎಂಜಿನ್ ಸದ್ದು ಮತ್ತು ಹೊಗೆಯ ಘಮಟು ಮಾತ್ರ ನಮ್ಮ ನಡುವೆ ಓಡಾಡುತ್ತಿತ್ತು.

ಹೇಳಲು ಮರೆತೆ. ಆಗ ರಾತ್ರಿ 10.20 ಆಗಿತ್ತು, ವೇಗವಾಗಿ ಆಟೊ ಓಡುತ್ತಿದ್ದುದರಿಂದ ಹೊರಗಿನ ಗಾಳಿಗೆ ಚಳಿಯಲ್ಲಿ ನಡುಗತೊಡಗಿದೆ. ದುಪಟ್ಟಾವೂ ಇಲ್ಲದ ಕುರ್ತಾ-ಪೈಜಾಮ ಹಾಕಿದ್ದ ನನಗೆ ಚಳಿಯಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕೆಂದೇ ತೋಚಲಿಲ್ಲ. ಅಕ್ಷರಶಃ ಒದ್ದಾಡುತ್ತಿದ್ದುದನ್ನು ಗಮನಿಸಿದ ಚಾಲಕ `ಏನ್ ಮೇಡಂ ಚಳಿ ಜೋರಾ~ ಅಂದ. ಹೌದಪ್ಪ ತಡ್ಕಣಾಕೇ ಆಯ್ತಿಲ್ಲ. ಮನೆ ಸೇರೋದೇ ಕಷ್ಟ~ ಅಂದೆ.

ಯಡಿಯೂರು ಕೆರೆ ದಾಟಿದ್ದೆವಷ್ಟೇ.  ಒಂದು ಗೂಡಂಗಡಿ ಬಳಿ ಆಟೊ ನಿಲ್ಲಿಸಿದವನೇ ತಾನು ಕಾಫಿನೋ ಟೀನೋ ಹೀರತೊಡಗಿದ. ಅಬ್ಬಾ ದೇವರೇ ನಾನಿಲ್ಲಿ ನಡುಗುತ್ತಿದ್ದರೆ ಇವನು ಬಿಸಿ ಬಿಸಿಯಾಗಿ ಕುಡೀತಿದ್ದಾನಲ್ಲಾಂತ ಅಂದುಕೊಂಡು ಮುಖ ತಿರುಗಿಸಿ ಕುಳಿತೆ.

ಅಷ್ಟರಲ್ಲಿ `ಮೇಡಂ, ತಗೊಳ್ಳಿ~ ಅಂದ. ನೋಡಿದ್ರೆ ನನಗೂ ಕಾಫಿ ಬಂದಿತ್ತು!

ಥ್ಯಾಂಕ್ಸ್ ಹೇಳಲೂ ಆಗದಂತೆ ಮೂಕಳಾದೆ. ಅಷ್ಟು ಹೊತ್ತು ಬಾಯಿಮುಚ್ಚಿಕೊಂಡು ಡ್ರೈವ್ ಮಾಡುತ್ತಿದ್ದವನು ಇವನೇನಾ ಅಂತ ವಿಸ್ಮಿತಳಾದೆ.

ಇಂಥವರೂ ಇರ‌್ತಾರಲ್ವಾ?

ಆಟೊ ಚಾಲಕರ ಕುರಿತು ದೂರುಗಳೇ ತುಂಬಿರುವ ನಗರವಿದು. ಅದಕ್ಕೆ ಅಪವಾದವೆಂಬಂತೆ ಬದುಕುವ ಅನೇಕ ಚಾಲಕರು ಇದ್ದಾರೆ. ಅಂಥವರು ನಿಮ್ಮ ಅನುಭವಕ್ಕೂ ಬಂದಿರಬಹುದು. ಆ ಕಥನವನ್ನು 350 ಪದಗಳ ಮಿತಿಯಲ್ಲಿ ಬರೆದು ಕಳುಹಿಸಿ. ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಬರವಣಿಗೆ ಇರಲಿ. ಇ-ಮೇಲ್: metropv@prajavani.co.in

ವಿಳಾಸ: ಆಟೊ ಕತೆಗಳು, ಮೆಟ್ರೊ, ನಂ.75, ಎಂ.ಜಿ.ರಸ್ತೆ, ಬೆಂಗಳೂರು- 560 001

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry