ಗಡಾಫಿ ಆಡಳಿತದ ವಿರುದ್ಧ ದಿಗ್ಬಂಧನ?

7

ಗಡಾಫಿ ಆಡಳಿತದ ವಿರುದ್ಧ ದಿಗ್ಬಂಧನ?

Published:
Updated:

ವಾಷಿಂಗ್ಟನ್/ಬರ್ಲಿನ್ (ಪಿಟಿಐ): ನಾಗರಿಕರ ಮೇಲೆ ಬರ್ಬರ ದಾಳಿ ನಡೆಸಿದ ಲಿಬಿಯಾ ಸರ್ವಾಧಿಕಾರಿ ಗಡಾಫಿ ಪದಚ್ಯುತಿಗೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಅತ್ಯುನ್ನತ ಮಾನವ ಹಕ್ಕು ಮಂಡಲಿಯಿಂದ ಲಿಬಿಯಾವನ್ನು ಉಚ್ಚಾಟಿಸಬೇಕೆಂಬ ಯೂರೋಪ್ ಒಕ್ಕೂಟದ ಪ್ರಸ್ತಾವವನ್ನು ಅಮೆರಿಕ ಬೆಂಬಲಿಸಿದೆ. ಇದೇ ವೇಳೆ ಗಡಾಫಿ  ಆಡಳಿತದ ವಿರುದ್ಧ ದಿಗ್ಬಂಧನ ಹೇರಲು ಅಮೆರಿಕ ತೀವ್ರ ಪರಿಶೀಲನೆ ನಡೆಸಿದೆ.

ಲಿಬಿಯಾದ ವಿರುದ್ಧ ದಿಗ್ಬಂಧನಗಳನ್ನು ಹೇರುವ ಕುರಿತು ಶ್ವೇತಭವನದಲ್ಲಿ ಸಭೆ ನಡೆಸಲಾಯಿತು. ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಲಿಯ ಟಾಮ್ ಮ್ಯಾಲಿನೋಸ್ಕಿ ಮತ್ತಿತರ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮತ್ತೊಂದೆಡೆ ಅಮೆರಿಕದ ಹಣಕಾಸು ಇಲಾಖೆ ಕೂಡ ಲಿಬಿಯಾ ಮೇಲೆ ಏಕಪಕ್ಷೀಯವಾಗಿ ದಿಗ್ಬಂಧನಗಳನ್ನು ಹೇರುವ ಸಾಧ್ಯತೆಗಳ ಕುರಿತು ಅವಲೋಕಿಸುತ್ತಿದೆ.

ಒಬಾಮ ಅವರು ಮಿತ್ರ ರಾಷ್ಟ್ರಗಳ ಪ್ರಮುಖರಾದ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್, ಇಟಲಿ ಪ್ರಧಾನಿ ಸಿಲ್ವಿಯೋ ಬರ್ಲುಸ್ಕೋನಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ನಂತರ ದಿಗ್ಬಂಧನ ಹೇರುವ ಪ್ರಕ್ರಿಯೆ ಚುರುಕು ಪಡೆದಿದೆ. ಲಿಬಿಯಾದಲ್ಲಿ ನಾಗರಿಕರ ಮೇಲಿ ನಡೆದ ಕ್ರೂರ ದಾಳಿಗಳಿಗಾಗಿ ಗಢಾಫಿ ಆಡಳಿತವನ್ನು ಹೊಣೆ ಮಾಡುವ ಜತೆಗೆ ಆ ರಾಷ್ಟ್ರಕ್ಕೆ ಮಾನವೀಯ ನೆಲೆಯಲ್ಲಿ ಸಹಾಯ ಒದಗಿಸುವ ಬಗ್ಗೆ ಈ ನಾಯಕರು ಚರ್ಚಿಸಿದರೆಂದು ಶ್ವೇತಭವನದ ಹೇಳಿಕೆ ಸ್ಪಷ್ಟಪಡಿಸಿದೆ.

ಅಧ್ಯಕ್ಷ ಬರಾಕ್ ಒಬಾಮ ನಿರ್ದೇಶನದ ಮೇರೆಗೆ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಜಿನೀವಾಕ್ಕೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಅಲ್ಲಿ ಫೆ.27-28ರಂದು ನಡೆಯುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಲಿಯ ಸಮಾವೇಶದಲ್ಲಿ ಲಿಬಿಯಾ ಕುರಿತು ಚರ್ಚೆ ನಡೆಯಲಿದೆ. ಹಿಲರಿ ಅವರು ಈ  ಸಂದರ್ಭದಲ್ಲಿ ಮುಅಮ್ಮರ್ ಗಡಾಫಿ  ಅವರ ವಿರುದ್ಧ ಜಾಗತಿಕ ಸಮುದಾಯದ ಅಭಿಪ್ರಾಯ ಕ್ರೋಡೀಕರಿಸಲು ಯತ್ನಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಮಧ್ಯ ಪ್ರಾಚ್ಯದ ಇನ್ನಿತರ ರಾಷ್ಟ್ರಗಳ ಇತ್ತೀಚಿನ ಬಿಕ್ಕಟ್ಟುಗಳ ಕುರಿತ ಚರ್ಚೆಯೂ ನಡೆಯಲಿದೆ.ಬ್ಯಾಂಕ್ ವ್ಯವಹಾರಕ್ಕೆ ನಿಷೇಧ

 ಮುಅಮ್ಮರ್ ಗಢಾಫಿ ಪದಚ್ಯುತಿಗೆ ಜಾಗತಿಕ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲೇ ಗಡಾಫಿ ಮತ್ತು ಅವರ ಕುಟುಂಬದವರ ಯಾವುದೇ ರೀತಿಯ ಬ್ಯಾಂಕ್ ವ್ಯವಹಾರದ ಮೇಲೆ ಸ್ವಿಸ್ ಸರ್ಕಾರ 3 ವರ್ಷ ನಿಷೇಧ ಹೇರಿದೆ.

ಕೆಲವು ದಿನಗಳ ಹಿಂದೆ ಟ್ಯುನೀಷಿಯಾದ ಪದಚ್ಯುತ ಅಧ್ಯಕ್ಷ ಬೆನ್ ಅಲಿ ಮತ್ತು ಈಜಿಪ್ಟಿನ ಪದಚ್ಯುತ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ ಬ್ಯಾಂಕ್ ವಹಿವಾಟುಗಳ ಮೇಲೆ ಸ್ವಿಸ್ ಸರ್ಕಾರ ನಿಷೇಧ ಹೇರಿತ್ತು. ಅಚ್ಚರಿಯ ವಿಷಯವೆಂದರೆ, ಈ ಇಬ್ಬರೂ ನಾಯಕರು ಅಧಿಕಾರದಿಂದ ಕೆಳಗಿಳಿದ ನಂತರ ಬ್ಯಾಂಕ್ ವ್ಯವಹಾರಕ್ಕೆ ನಿಷೇಧ ಹೇರಿದ್ದ ಸರ್ಕಾರ ಗಡಾಫಿ  ವಿರುದ್ಧ ಇನ್ನೂ ಅಧಿಕಾರದಲ್ಲಿರುವಾಗಲೇ ಕಠಿಣ ಕ್ರಮ ಕೈಗೊಂಡಿದೆ.

ಆದರೆ, ಮಾಧ್ಯಮ ವರದಿಗಳ ಪ್ರಕಾರ ಗಢಾಫಿ ಕುಟುಂಬದವರು ಸ್ವಿಸ್ ಬ್ಯಾಂಕಿನಲ್ಲಿ ತಮ್ಮ ಹಣವನ್ನು ಇರಿಸಿರುವ ಸಾಧ್ಯತೆ ಕಡಿಮೆ. 2008ರ ಜುಲೈನಲ್ಲಿ ಗಡಾಫಿ ಪುತ್ರ ಹನ್ನಿಬಲ್ ಅವರನ್ನು ಜಿನೀವಾದಲ್ಲಿ ಬಂಧಿಸಿದ ನಂತರ ಗಢಾಫಿ ಕುಟುಂಬದವರು ಸ್ವಿಸ್ ಬ್ಯಾಂಕುಗಳಲ್ಲಿರಿಸಿದ್ದ ಬಹುಪಾಲು ಸಂಪತ್ತನ್ನು ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.

17 ನಾಗರಿಕರ ಹತ್ಯೆ: : ಗಢಾಫಿ  ವಿರುದ್ಧದ ಚಳವಳಿಯನ್ನು ಹತ್ತಿಕ್ಕಲು ಸರ್ಕಾರಿ ಪಡೆಗಳು ನಡೆಸಿದ ದಾಳಿಯಲ್ಲಿ  ಕನಿಷ್ಠ 17 ಜನ ಹತ್ಯೆಯಾಗಿದ್ದಾರೆಂದು ಶಂಕಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry