ಗಡಾಫಿ ನಿರ್ಗಮನವೇ ಗುರಿ

7

ಗಡಾಫಿ ನಿರ್ಗಮನವೇ ಗುರಿ

Published:
Updated:
ಗಡಾಫಿ ನಿರ್ಗಮನವೇ ಗುರಿ

ನ್ಯೂಯಾರ್ಕ್ (ಪಿಟಿಐ): ಲಿಬಿಯಾ  ದಲ್ಲಿ ಮುಅಮ್ಮರ್ ಗಡಾಫಿ ಅಧಿಕಾರದಲ್ಲಿ ಇರುವಷ್ಟು ಸಮಯವೂ ನ್ಯಾಟೊ ಪಡೆಗಳು ತಮ್ಮ ಕಾರ್ಯಾಚರಣೆ ಮುಂದುವರಿಸಲಿವೆ ಮತ್ತು ಗಡಾಫಿ ಒಳಗೊಂಡ ಲಿಬಿಯಾದ ಭವಿಷ್ಯ ‘ಊಹಿಸಲೂ ಆಗದಂತಹ ಮಾತು’ ಎಂದು ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್‌ಗಳು ಹೇಳಿವೆ.‘ಗಡಾಫಿ ಅಧಿಕಾರದಲ್ಲಿದ್ದಷ್ಟು ಸಮಯವೂ ನ್ಯಾಟೊ ತನ್ನ ಕಾರ್ಯಾಚರಣೆ ಮುಂದುವರಿಸಬೇಕು, ಇದರಿಂದ ನಾಗರಿಕರ ಜೀವ ರಕ್ಷಣೆಯಾಗುತ್ತದೆ ಮತ್ತು ಈ ಪ್ರದೇಶದಲ್ಲಿ ಒತ್ತಡ ನಿರ್ಮಾಣವಾಗುತ್ತದೆ’ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಮತ್ತು ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರು ಮೂರು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಬರೆದ ಜಂಟಿ ಲೇಖನದಲ್ಲಿ ತಿಳಿಸಿದ್ದಾರೆ.

 

‘ಲಿಬಿಯಾದ ಒಳಿತಿಗಾಗಿ ಗಡಾಫಿ ಪದತ್ಯಾಗ ಮಾಡಲೇಬೇಕು. ಹೊಸ ತಲೆಮಾರಿನ ನಾಯಕರಿಂದ ದೇಶದಲ್ಲಿ ಸಂವಿಧಾನ ರೀತ್ಯಾ ಅಧಿಕಾರ ನಡೆಯುವಂತಾಗಬೇಕು. ಗಡಾಫಿ ಅಧಿಕಾರದಲ್ಲಿ ಮುಂದುವರಿದ ಸ್ಥಿತಿಯಲ್ಲೇ ಲಿಬಿಯಾದ ಭವಿಷ್ಯದ ಬಗ್ಗೆ ಯೋಚಿಸುವುದೂ ಸಾಧ್ಯವಿಲ್ಲ’ ಎಂದು ಈ ಮೂವರೂ ನಾಯಕರು ಹೇಳಿದ್ದಾರೆ.

ದೇಶದಲ್ಲಿ ನಾಗರಿಕರ ವಿರುದ್ಧ ನಡೆದ ಅಪರಾಧಗಳು ಮತ್ತು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಬಗ್ಗೆ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ ವಿಚಾರಣೆ ನಡೆಸುವುದನ್ನು ಅವರು ಸ್ವಾಗತಿಸಿದ್ದಾರೆ.

 

ಗಡಾಫಿ ರಾಜೀನಾಮೆ ದೇಶದ ಅವಮಾನ (ಕೈರೊ ವರದಿ): ಜಾಗತಿಕ ಒತ್ತಡಕ್ಕೆ ಮಣಿದು ಗಡಾಫಿ ಅವರು ರಾಜೀನಾಮೆ ನೀಡುವುದೆಂದರೆ ಅದು ಇಡೀ ಲಿಬಿಯಾ ಜನತೆಗೆ ಆದಂತಹ ಅವಮಾನ ಎಂದು ಗಡಾಫಿ ಅವರ ಪುತ್ರಿ ಐಶಾ ಹೇಳಿದ್ದಾರೆ.

‘ಗಡಾಫಿ ಅವರ ರಾಜೀನಾಮೆ ಬಗ್ಗೆ ಮಾತನಾಡುವುದೇ ಇಡೀ ಲಿಬಿಯಾ ಜನತೆಗೆ ಮಾಡಿದಂತಹ ಅವಮಾನ. ಜನರ ಜೀವ ರಕ್ಷಣೆಯ ನೆಪದಲ್ಲಿ ನೀವು ನನ್ನ ತಂದೆಯ ಹತ್ಯೆಗೆ ಸಂಚು ನಡೆಸಿದ್ದೀರಿ’ ಎಂದು ಅವರು ದೂರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry