ಗಡಿನಾಡಿನ ಕನ್ನಡ ಯೋಧನ ನಿರ್ಗಮನ

7

ಗಡಿನಾಡಿನ ಕನ್ನಡ ಯೋಧನ ನಿರ್ಗಮನ

Published:
Updated:
ಗಡಿನಾಡಿನ ಕನ್ನಡ ಯೋಧನ ನಿರ್ಗಮನ

ಗಡಿಭಾಗದ ಜನರ ಭಾಷೆ, ಬದುಕು, ಸಂಸ್ಕೃತಿ ಕುರಿತ ಚಿಂತನೆ ಮತ್ತು ಕ್ರಿಯೆಗಳನ್ನೇ ತಮ್ಮ ಜೀವಿತದ ಪರಮೋದ್ದೇಶ ಮಾಡಿಕೊಂಡಿದ್ದ, ಡಾ. ಅನಿಲ್ ಕಮತಿ (57) ಈಚೆಗೆ ತೀರಿಕೊಂಡರು.ವೃತ್ತಿಯಿಂದ ವೈದ್ಯರಾಗಿದ್ದ ಕಮತಿಯವರು ಇದ್ದಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರ್ನಾಟಕದ ಕೊನೆಯ ಹಳ್ಳಿ ಯಕ್ಸಂಬಾದಲ್ಲಿ. ಈಚೆಗೆ ಕಣ್ಮರೆಯಾದ ದೊಡ್ಡಬಳ್ಳಾಪುರದ ಡಾ. ವೆಂಕಟರೆಡ್ಡಿಯವರಂತೆ ಕಮತಿಯವರೂ ಜನತೆಯ ವೈದ್ಯ ಹಾಗೂ ಚಳವಳಿಗಾರ ಆಗಿದ್ದರು. ರೆಡ್ಡಿಯವರದು ರೈತ ಚಳವಳಿಯಾಗಿದ್ದರೆ, ಕಮತಿಯವರದು ಕನ್ನಡ ಚಳವಳಿ. ಕಮತಿಯವರು ಯಕ್ಸಂಬಾದಲ್ಲಿ ಗೆಳೆಯರ ಬಳಗವನ್ನು ಕಟ್ಟಿ (1988) ಅದರ ವತಿಯಿಂದ ಕನ್ನಡ ಶಾಲೆ ನಡೆಸುತ್ತಿದ್ದರು. ಪ್ರತಿವರ್ಷ ನವೆಂಬರ್ ಒಂದರಂದು ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಈ ಕಾರ್ಯಕ್ರಮಗಳಿಗೆ ಸುತ್ತಮುತ್ತಲಿನ ಜನ ಊರಹಬ್ಬಕ್ಕೆ ಸೇರುವಂತೆ ಸೇರುತ್ತಿದ್ದರು. ಯಕ್ಸಂಬಾ ಕಾರ್ಯಕ್ರಮಕ್ಕೆ ಈ ಸಲದ ಅತಿಥಿ ಯಾರೆಂಬುದು ಆ ಭಾಗದಲ್ಲಿ ಸಾರ್ವಜನಿಕ ಕುತೂಹಲದ ಸಂಗತಿಯಾಗಿರುತ್ತಿತ್ತು.ಶಿವರಾಮ ಕಾರಂತ, ಹಾ.ಮಾ. ನಾಯಕ, ಎಸ್. ನಿಜಲಿಂಗಪ್ಪ, ಎಸ್.ಎಲ್. ಭೈರಪ್ಪ, ಚಂಪಾ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಎಂ. ಚಿದಾನಂದಮೂರ್ತಿ, ಚೆನ್ನವೀರಕಣವಿ, ಗುರುಲಿಂಗ ಕಾಪಸೆ, ಗಂಗೂಬಾಯಿ ಹಾನಗಲ್, ಎಂ.ಎಂ. ಕಲಬುರ್ಗಿ, ಏಣಗಿ ಬಾಳಪ್ಪ, ಪಾಟೀಲ ಪುಟ್ಟಪ್ಪ, ಜಯಂತ ಕಾಯ್ಕಿಣಿ, ಕುಂವೀ, ವಸುಧೇಂದ್ರ- ಹೀಗೆ ಎಲ್ಲ ತಲೆಮಾರಿನ ಎಲ್ಲ ಪ್ರದೇಶದ ಲೇಖಕರು ಯಕ್ಸಂಬಾಕ್ಕೆ ಅತಿಥಿಗಳಾಗಿ ಬಂದುಹೋಗಿದ್ದರು. ಈ ಲೇಖಕರ ಚಿಂತನೆಗಳನ್ನು ಗೆಳೆಯರ ಬಳಗದ ವತಿಯಿಂದ ಕಮತಿ ಪುಸ್ತಕವಾಗಿ (`ಸೀಮೆ') ಪ್ರಕಟಿಸಿದ್ದರು. ಅವರ ನಿಡುಗಾಲದ ಮಿತ್ರ ಚಂದ್ರಕಾಂತ ಪೋಕಳೆಯವರ ಪ್ರಕಾರ, ಇದೊಂದು ಐತಿಹಾಸಿಕ ಮಹತ್ವವುಳ್ಳ ಕೃತಿ.ಕೆಲವರ ಶ್ರಮ ಮತ್ತ ಛಲದಿಂದ ಅವರ ಊರುಗಳಿಗೆ ಒಂದು ವಿಶಿಷ್ಟ ಚಹರೆ ಪ್ರಾಪ್ತವಾಗುತ್ತದೆ. ಮಧುರಚನ್ನರು ತಮ್ಮ ಕಾರ್ಯಕ್ರಮಗಳ ಮೂಲಕ ಹಲಸಂಗಿಗೆ ಇಂತಹ ಚಹರೆಯನ್ನು ತಂದುಕೊಟ್ಟಿದ್ದರು. ಕಮತಿ ಹಾಗೂ ಅವರ ಗೆಳೆಯರ ದೆಸೆಯಿಂದ ಯಕ್ಸಂಬಾ ಕೂಡ ಕರ್ನಾಟಕದ ಸಾಂಸ್ಕೃತಿಕ ಗ್ರಾಮವಾಗಿ ರೂಪುಪಡೆದಿತ್ತು. ಕನ್ನಡದ ಲೇಖಕರು ತಮ್ಮ ಹಳ್ಳಿಗೆ ಬರಬೇಕು, ತಮ್ಮೂರ ಜನ ಅವರಾಡುವ ಮಾತನ್ನು ಆಲಿಸಬೇಕು ಎಂದು ಕಮತಿ ಹಂಬಲಿಸುತ್ತಿದ್ದರು. ಅವರ ಪ್ರಿಯ ಲೇಖಕ ಶಿವರಾಮ ಕಾರಂತರಾಗಿದ್ದರು. ಬಹುಶಃ ಕಾರಂತರ ಬರಹಕ್ಕಿಂತ ಪ್ರಾಮಾಣಿಕ ನಿಷ್ಠುರ ವ್ಯಕ್ತಿತ್ವ ಕಮತಿಯವರಿಗೆ ಹೆಚ್ಚು ಹಿಡಿಸಿತ್ತೆಂದು ಕಾಣುತ್ತದೆ. ಕಾರಂತರ ಜತೆ ಅವರು ನಿರಂತರ ಸಂಪರ್ಕ ಇಟ್ಟುಕೊಂಡಿದ್ದರು. (ಕಾರಂತರ ಹಾಗೆ ನಾಡಿನ ಬೇರೆಬೇರೆ ವ್ಯಕ್ತಿಗಳೊಂದಿಗೆ ಸಂಪರ್ಕ ಇರಿಸಿಕೊಂಡ ಲೇಖಕರೂ ಕಡಿಮೆ). ಬಹುಶಃ ಕಮತಿಯವರಿಗೆ ಕನ್ನಡ ಶಾಲೆಯ ಪ್ರಯೋಗ ಮಾಡಲು ಕಾರಂತರೂ ಕಾರಣವಿದ್ದೀತು. `ಒಡನಾಡಿ' ಎಂಬ ಪುಸ್ತಕ ಕೂಡ ಕಾರಂತರ `ಹಳ್ಳಿಯ ಹತ್ತು ಸಮಸ್ತರು' ಕೃತಿಯನ್ನು ನೆನಪಿಸುವಂತಿದೆ. ಅದರಲ್ಲಿ ತಮ್ಮ ಊರಿನ ಅನೇಕ ಅಜ್ಞಾತ ಆದರೆ ವಿಶಿಷ್ಟ ವ್ಯಕ್ತಿಗಳ ಚಿತ್ರಗಳನ್ನು ಕಮತಿಯವರು ಬರೆದಿದ್ದಾರೆ.ಅಕ್ಷರ ಕಲಿತವರು ನಗರಗಳತ್ತ ಚಲಿಸುತ್ತಾರೆ. ಅವರಿಗೆ ಹುಟ್ಟಿದೂರುಗಳು ವರ್ಷಕ್ಕೊಮ್ಮೆ ಭೇಟಿಕೊಡುವ ಪ್ರವಾಸಿತಾಣಗಳಂತಾಗುತ್ತವೆ. ಅವರಲ್ಲಿ ಕೆಲವರು ಮಾತ್ರ ತಮ್ಮ ಊರುಗಳಿಗೆ ಮರಳಿ ಬಂದು, ತಮ್ಮ ಕೆಲಸಗಳ ಜತೆಯಲ್ಲೇ ಪರಿಸರವನ್ನು ಬದಲಿಸಬೇಕೆಂದು ಯತ್ನಿಸುತ್ತಾರೆ. ಅದಕ್ಕಾಗಿ ತಮ್ಮ ಖಾಸಗಿ ಬದುಕನ್ನು ಬಲಿಗೊಟ್ಟು ದುಡಿಯುತ್ತಾರೆ. ಕಮತಿ ಅಂತಹವರ ಪೈಕಿ ಒಬ್ಬರು. ಆದರೆ ಸಂಘಟಕನಾಗಿ ಕಾರ್ಯಕರ್ತನಾಗಿ ಊರಿನ ಚಹರೆ ಬದಲಿಸಲು ಯತ್ನಿಸುತ್ತಿದ್ದ ಕಮತಿಯವರಿಗೆ, ಅದು ಎಂತಹ ಕಷ್ಟದ ಕೆಲಸವೆಂದು ಅರಿವಿತ್ತು. ಇದಕ್ಕೆ ಸಾಕ್ಷಿ ಅವರ ಕಾದಂಬರಿ `ತಂತ್ರ'. ನಗರದಲ್ಲಿ ಶಿಕ್ಷಣ ಪಡೆದು ಸರ್ಕಾರಿ ನೌಕರಿಯನ್ನು ಒಲ್ಲದೆ, ತನ್ನೂರನ್ನು ಆದರ್ಶಗ್ರಾಮ ಮಾಡಬೇಕೆಂದು ಮರಳಿ ಬರುವ ತರುಣನೊಬ್ಬನ ಕಥೆ ಇದರ ವಸ್ತು. ಆದರ್ಶ ಕಟ್ಟಿಕೊಂಡು ಬರುವ ಆತ, ತನ್ನ ಚಟುವಟಿಕೆಗಳಿಂದ ಸ್ಥಳೀಯ ರಾಜಕಾರಣಿಗಳ ಹಗೆತನ ಕಟ್ಟಿಕೊಂಡು, ಅಪರಾಧಿಯಾಗಿ ಜೈಲಿಗೆ ಹೋಗುವ ಮೂಲಕ ಕಾದಂಬರಿ ಮುಗಿಯುತ್ತದೆ. ಸರ್ಕಾರಿ ವ್ಯವಸ್ಥೆಯ ಭ್ರಷ್ಟತೆ, ಹೊಣೆಗೇಡಿತನಗಳ ಬಗ್ಗೆ ಸದಾ ಅಸ್ವಸ್ಥರಾಗಿದ್ದ ಕಮತಿ, ಪರಿಸ್ಥಿತಿ ಬದಲಾವಣೆಯಾಗಬೇಕು ಎಂದು ಕನಸು ಕಾಣುತ್ತಿದ್ದರು. ಆದರೆ ಕನಸು ಭಗ್ನವಾಗುವ ವಾಸ್ತವವನ್ನು ಚಿತ್ರಿಸಬಲ್ಲ ದುರಂತಪ್ರಜ್ಞೆಯೂ ಅವರಿಗಿತ್ತು.ನನಗೆ ಕಮತಿಯವರ ಸ್ನೇಹವಾಗಿದ್ದು ತೀರ ಆಕಸ್ಮಿಕ. ನಾನು `ಕನ್ನಡ ಅಧ್ಯಯನ' ಪತ್ರಿಕೆ ಸಂಪಾದಿಸುವಾಗ, ಗಡಿಭಾಗದ ಜನರ ಅನುಭವಗಳನ್ನು ದಾಖಲಿಸಬೇಕೆಂದು ಹಲವರಿಂದ ಲೇಖನ ಬರೆಯಿಸಿದೆ. ಕಮತಿಯವರು ತಮ್ಮ ಲೇಖನದಲ್ಲಿ ಕರ್ನಾಟಕದ ಗಡಿಗ್ರಾಮಗಳಲ್ಲಿ ಮನೆಮಾತು ಕನ್ನಡವು ಅನೇಕ ಕುಟುಂಬಗಳಿಂದ ಕಳೆದುಹೋಗುತ್ತಿರುವುದರ ಹಾಗೂ ಮರಾಠಿಯನ್ನು ಕನ್ನಡದವರು ಉಮೇದಿನಿಂದ ಕಲಿಯುತ್ತಿರುವ ಪ್ರಕರಣಗಳನ್ನು ಚರ್ಚಿಸಿದ್ದರು. ತಮ್ಮ ಊರುಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ರೈತರು ತುಡಿಯುತ್ತಿದ್ದಾರೆ ಎಂಬ ವಿಚಿತ್ರ ಸತ್ಯವನ್ನೂ ಅವರು ದಾಖಲಿಸಿದ್ದರು. ಇದಕ್ಕೆ ಕಾರಣ, ಮಹಾರಾಷ್ಟ್ರ ಸರ್ಕಾರವು ಅಲ್ಲಿನ ರೈತರಿಗೆ ನೀಡುವ ಸವಲತ್ತುಗಳು ಗಡಿಯೊಳಗಿನ ಕರ್ನಾಟಕದ ರೈತರಿಗೆ ಇಲ್ಲದೇ ಇದ್ದುದು.ಕರ್ನಾಟಕದ ಜನರು ಗಡಿಯಾಚೆ ಇರುವ ಉದ್ಯೋಗದ ಅವಕಾಶಗಳಿಗೆ ವಲಸೆ ಹೋಗಿ ಮರಾಠಿ ಕಲಿತು ಕನ್ನಡದ ವಿಷಯದಲ್ಲಿ ಬೆಳೆಸಿಕೊಳ್ಳುತ್ತಿದ್ದ ಉದಾಸೀನವನ್ನು ಕಮತಿ ಅಧ್ಯಯನ ಮಾಡಿದ್ದರು. ಭಾಷೆ ಮತ್ತು ಸಂಸ್ಕೃತಿಗಳನ್ನು ಕೇವಲ ಭಾವನಾತ್ಮಕ ಅಭಿಮಾನದಿಂದ ಉಳಿಸಿಕೊಳ್ಳುವುದು ಸಾಧ್ಯವಿಲ್ಲ, ಅದು ನಿತ್ಯ ಬದುಕಿನ ಆರ್ಥಿಕ ಚಟುವಟಿಕೆಯ ಭಾಗವಾಗಿದ್ದರೆ ಮಾತ್ರ ಉಳಿಯುತ್ತದೆ ಎಂಬ ದಿಟ ಅವರಿಗೆ ತಿಳಿದಿತ್ತು. ಇದಕ್ಕಾಗಿ ಅವರು ಕನ್ನಡ ಉಳಿಕೆ ಬರೀ ಅಭಿಮಾನದಿಂದಲ್ಲ ಅಥವಾ ಮರಾಠಿ ದ್ವೇಷದಿಂದಲ್ಲ, ಗಡಿಭಾಗದಲ್ಲಿ ಅಭಿವೃದ್ಧಿ ಕೆಲಸಗಳಿಂದ ಮಾತ್ರ ಸಾಧ್ಯ. ಬೆಳಗಾವಿ ನಮ್ಮದು ಎಂದು ಚಳವಳಿ ಮಾಡುವವರಿಗೆ ಗಡಿಯ ಮೇಲಿರುವ ಜನ ತಮ್ಮ ಬದುಕಿಗೆ ಮಿಡಿಯುವ ವ್ಯವಸ್ಥೆಯನ್ನಷ್ಟೆ ಬಯಸುತ್ತಾರೆ ಎಂಬ ಸತ್ಯವನ್ನು ಕಮತಿ ತಮ್ಮ ಬರಹಗಳ ಮೂಲಕ ತಿಳಿಸುತ್ತಿದ್ದರು. ಹೀಗಾಗಿ ಅವರ ಕನ್ನಡದ ಕಾರ್ಯಕ್ರಮಗಳಿಗೆ ಕೇವಲ ಸಂಭ್ರಮ ಉತ್ಸವದ ಮುಖವಿರಲಿಲ್ಲ. ಚಿಂತನೆ ಮತ್ತು ಕ್ರಿಯಾಶೀಲತೆಯ ಮುಖವೂ ಇತ್ತು. ಇದಕ್ಕಾಗಿಯೇ ಅವರು ಕನ್ನಡದ ಅತ್ಯುತ್ತಮ ಶಾಲೆಯನ್ನು ಸ್ಥಾಪಿಸಿದ್ದು.ಹೋದ ವರ್ಷ ಗೆಳೆಯರ ಬಳಗದ ಕಾರ್ಯಕ್ರಮಕ್ಕೆ ಹೋಗುವ ನನ್ನ ಪಾಳಿ ಬಂದಿತ್ತು. ಊರು ತಿರುಗುವ ಕಾಯಿಲೆಯುಳ್ಳ ನಾನು ಸಂತೋಷದಿಂದ ಹೋದೆ. ಕಮತಿಯವರ ಸಹವಾಸದಲ್ಲಿ ಎರಡು ದಿನವಿದ್ದೆ. ಸುತ್ತಮುತ್ತಲಿನ ಊರುಗಳನ್ನೆಲ್ಲ ತಿರುಗಾಡಿದೆ. ಶಾಸನಗಳಲ್ಲಿ `ಯಕ್ಕಸಂಬುಗೆ' ಎಂದು ಅದರ ಹೆಸರು. ಊರು ತುಂಬ ಶಾಸನಗಳು ವೀರಗಲ್ಲುಗಳು ದೊಡ್ಡದೊಡ್ಡ ಗುಡಿಗಳು. ಕಬ್ಬಿನ ಬೆಳೆಯಿಂದ ಸಮದ್ಧವಾದ ಊರು. ಒಂದು ಕಾಲಕ್ಕೆ ಈ ಊರು ಕುಸ್ತಿಪಟುಗಳಿಗೆ ಹೆಸರಾಗಿತ್ತು. ಮಹಾರಾಷ್ಟ್ರ ಸರ್ಕಾರ ಆರಂಭಿಸಿದ ಅಖಿಲ ಭಾರತ ಕುಸ್ತಿ ಸ್ಪರ್ಧೆಯಲ್ಲಿ ಗೆದ್ದು ಪ್ರಪ್ರಥಮ `ಹಿಂದ್‌ಕೇಸರಿ' ಪ್ರಶಸ್ತಿ ಪಡೆದ ಶ್ರೀಪತಿ ಖಂಚನಾಳೆ ಯಕ್ಸಂಬಾದವರು. ಕಮತಿ, ಬರವಣಿಗೆ ಮಾಡುತ್ತಿದ್ದ, ವೈಚಾರಿಕತೆ, ಜೀವನಪ್ರೀತಿ, ನಿಷ್ಠುರತೆ ತುಂಬಿದ ವ್ಯಕ್ತಿ; ಜೇನುಹುಳುವಿನಂತೆ ದುಡಿಯುತ್ತಿದ್ದ ಜೀವ. ಅವರು ಗೆಳೆಯರ ಬಳಗದ 25ನೇ ವರ್ಷದ ಕಾರ್ಯಕ್ರಮವನ್ನು ದೊಡ್ಡದಾಗಿ ಮಾಡಬೇಕು, ಗಿರೀಶ ಕಾರ್ನಾಡರನ್ನು ಕರೆಯಿಸಬೇಕು ಎಂದು ಬಯಸಿದ್ದರು. ಆದರೆ ತಾವೇ ಕಟ್ಟಿದ ಸಂಸ್ಥೆಯ ಬೆಳ್ಳಿಹಬ್ಬದ ವರ್ಷದಲ್ಲೇ ಅವರು ತೀರಿಕೊಂಡರು.ಕಮತಿಯವರ ಆಪ್ತರಾಗಿದ್ದ ಬಸ್‌ಕಂಡಕ್ಟರ್ ನಂದೂಸ್ವಾಮಿಯವರು `ಸರ‌್ರಾ ಗುಡ್ಡವೇ ಕುಸಿದು ನಮ್ಮ ಮ್ಯಾಲ ಬಿದ್ದಂಗಾಗದೇರಿ' ಎಂದರು. ನಿಜ, ಕಮತಿ ಕಾರಂತರ `ಬೆಟ್ಟದಜೀವ'ದಲ್ಲಿ ಬರುವ ಕಾಡುಕಡಿದು ಗದ್ದೆ ಮಾಡಿದ ಧೀಮಂತ ಗೋಪಾಲಯ್ಯನಂತೆ ಸಾಹಸಿಯಾಗಿದ್ದರು. ಅವರ ಸಾವು, ಗಡಿನಾಡ ಜನರ ತಲ್ಲಣಗಳನ್ನು ರಾಜ್ಯದ ಎಲ್ಲ ಭಾಗಕ್ಕೆ ಮುಟ್ಟಿಸುತ್ತಿದ್ದ ಒಬ್ಬ ಯೋಧನ ನಿರ್ಗಮನದಂತಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry