ಗಡಿನಾಡು ಅಭಿವೃದ್ಧಿಗೆ ಆಗ್ರಹ

7

ಗಡಿನಾಡು ಅಭಿವೃದ್ಧಿಗೆ ಆಗ್ರಹ

Published:
Updated:

ಚಳ್ಳಕೆರೆ: ಕರ್ನಾಟಕ ಹಾಗೂ ಆಂಧ್ರ ಗಡಿಭಾಗದ ಅಭಿವೃದ್ಧಿಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಆರೋಪಿಸಿದರು.ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿ ನಾಗಪ್ಪನಹಳ್ಳಿ ಗೇಟ್ ಹತ್ತಿರ ರಾಜ್ಯ ರೈತ ಸಂಘ ಸೋಮವಾರ ಸಮಗ್ರ ಗಡಿನಾಡು ಅಭಿವೃದ್ಧಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ರಸ್ತೆ ತಡೆ ಚಳವಳಿ ನೇತೃತ್ವವಹಿಸಿ ಅವರು ಮಾತನಾಡಿದರು.ದಶಕಗಳ ಕಾಲದಿಂದಲೂ ಗಡಿನಾಡು ಅಭಿವೃದ್ಧಿಗಾಗಿ ರೈತ ಸಂಘ ಹೋರಾಟ ಮಾಡುತ್ತಾ ಬಂದಿದೆ. ಆದರೂ, ಸರ್ಕಾರ ಈ ಭಾಗದ ಜನರ ಸಮಸ್ಯೆಗಳನ್ನು ಅರಿಯುವಲ್ಲಿ ನಿರ್ಲಕ್ಷ್ಯ ತೋರುತ್ತಾ ಬಂದಿದೆ ಎಂದು ಹರಿಹಾಯ್ದರು.ರಸ್ತೆ, ಶಾಲೆ, ಕುಡಿಯುವ ನೀರು ಮೂಲ ಸೌಕರ್ಯ ಒದಗಿಸುವಲ್ಲಿ ಯಾವ ಜನಪ್ರತಿನಿಧಿಯೂ ಮುಂದೆ ಬರುತ್ತಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಜನತೆಯ ಹತ್ತಿರ ಬರುವ ಜನಪ್ರತಿನಿಧಿಗಳು ಅಭಿವೃದ್ಧಿ  ಸಾಧಿಸುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಳಜಿ ತೋರುತ್ತಿಲ್ಲ. ಬದಲಾಗಿ, ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಗೆ ವಿರುದ್ಧವಾದ ಸರ್ಕಾರ ಇರಬಾರದು ಎಂದರು.ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ ಇರುವ ರಾಜ್ಯ ಸರ್ಕಾರದ ಕಾರ್ಯವೈಖರಿ ಕಂಡ ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಿದ ಸರ್ಕಾರ ರೈತರನ್ನು ಕಡೆಗಣಿಸಿದೆ ಎಂದು ನುಡಿದರು.ಮುಂಜಾನೆಯಿಂದಲೇ ರಸ್ತೆ ತಡೆ ಮಾಡುತ್ತಿದ್ದ ರೈತ ಸಂಘದ ಕಾರ್ಯಕರ್ತರು ಸರ್ಕಾರ ಹಾಗೂ ನೌಕರ ವರ್ಗದ ವಿರುದ್ಧ ಧಿಕ್ಕಾರ ಕೂಗುತ್ತಾ ಕೆಲಕಾಲ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ಮಾಡಿದರು.ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ಪ್ರಭಾರ ತಹಶೀಲ್ದಾರ್ ಡಾ. ಸ್ನೇಹಾ ಮಾತನಾಡಿ, ಗಡಿನಾಡು ಅಭಿವೃದ್ಧಿಗೆ ಮೇಲಾಧಿಕಾರಿಗಳ ಜತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.  ತಾ.್ಲಪಂ. ಇಒ ರಾಮನಾಥ ಗುಪ್ತಾ, ಲೋಕೋಪಯೋಗಿ ಎಂಜಿನಿಯರ್ ರಾಮಚಂದ್ರಪ್ಪ, ಡಿವೈಎಸ್‌ಪಿ ಹನುಮಂತರಾಯ ಪ್ರತಿಭಟನಾ ನಿರತರನ್ನು ಮನವೊಲಿಸಿ ರಸ್ತೆ ತೆರವುಗೊಳಿಸಿದರು.ರೈತ ಸಂಘದ ತಾಲ್ಲೂಕು ಅಧ್ಯಕ್ಷ ರಾಮಚಂದ್ರರೆಡ್ಡಿ, ಭೀಮಾರೆಡ್ಡಿ, ಖಾದರ್‌ಬಾಷಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry