ಗಡಿಭಾಗದ ಅಭಿವೃದ್ಧಿಗೆ ಮೀಸಲಾತಿ ಅಗತ್ಯ

7

ಗಡಿಭಾಗದ ಅಭಿವೃದ್ಧಿಗೆ ಮೀಸಲಾತಿ ಅಗತ್ಯ

Published:
Updated:

ಚಳ್ಳಕೆರೆ: ಕರ್ನಾಟಕ ಹಾಗೂ ಗಡಿಭಾಗದಲ್ಲಿ ವಾಸಿಸುವ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಮೂಲಕ ಸರ್ಕಾರ ಈ ಭಾಗದ ಜನರ ಬದುಕನ್ನು ಹಸನುಗೊಳಿಸಬೇಕಾಗಿದೆ ಎಂದು ಉಪನ್ಯಾಸಕ ಹಾಗೂ ಬಂಡಾಯ ಕವಿ ಡಾ.ಸಿ. ಶಿವಲಿಂಗಪ್ಪ ಅಭಿಪ್ರಾಯಪಟ್ಟರು.ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿ ಸಿದ್ದೇಶ್ವರನದುರ್ಗದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಗಡಿನಾಡ ಉತ್ಸವದ ಎರಡನೇ ದಿನವಾದ ಸೋಮವಾರದ ವಿಚಾರ ಸಂಕಿರಣದಲ್ಲಿ ‘ಗಡಿ ಭಾಗದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.ಈ ಭಾಗದಲ್ಲಿ ತೆಲುಗು ಹಾಗೂ ಕನ್ನಡ ಭಾಷಿಕರು ಒಬ್ಬರನ್ನೊಬ್ಬರು ಪ್ರೀತಿ, ವಿಶ್ವಾಸದಿಂದ ನಡೆಸಿಕೊಳ್ಳುವ ಮೂಲಕ ಸಾಮರಸ್ಯ ಸಾಧಿಸುತ್ತಾ ಬಂದಿದ್ದಾರೆ.ಕರ್ನಾಟಕದ ಕೋಲಾರ ಭಾಗದಲ್ಲಿ ತೆಲುಗು, ತಮಿಳು ಹಾಗೂ ಬೆಳಗಾವಿ ಭಾಗದಲ್ಲಿ ಮರಾಠಿ ಭಾಷೆಯ ಸಮಸ್ಯೆಗಳು ಇದ್ದಂತೆ ಜಿಲ್ಲೆಯ ಆಂಧ್ರ ಗಡಿಭಾಗದಲ್ಲಿ ಭಾಷಾ ಸಮಸ್ಯೆಗಳು ಇಲ್ಲ. ಬಹುಮುಖ್ಯವಾಗಿ ಇಲ್ಲಿನ ಜನರು ಮೂಲ ಸೌಕರ್ಯಗಳಿಂದ ಬಳಲುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ಶಿಕ್ಷಣ ಹಾಗೂ ವಿದ್ಯುತ್ ಸಮಸ್ಯೆಗಳಿಗೆ ಆಳುವ ಸರ್ಕಾರಗಳು ಪರಿಹಾರ ಹುಡುಕಬೇಕು. ಯಾವುದೇ ಭಾಗದ ಜನರು ಅರ್ಥಿಕವಾಗಿ ಸ್ವಾವಲಂಬಿಗಳಾಗದೇ ಭಾಷೆ, ರಾಜಕೀಯ ಮತ್ತು ವ್ಯವಸ್ಥೆಯಲ್ಲಿ ಸಮಾನತೆ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.ಗಡಿಭಾಗದಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ ನಗರ ಭಾಗಗಳಿಗಿಂತ ಶೇ.10ರಷ್ಟು ಹೆಚ್ಚು ಅನುದಾನ ನೀಡಬೇಕಾಗಿದೆ. ಗಡಿಭಾಗದ ಹಳ್ಳಿಗಳಾದ ಪಿ. ಮಹಾದೇವಪುರ, ಕ್ಯಾದಿಗುಂಟೆ ಮುಂತಾದ ಹಳ್ಳಿಗಳ ಪೋಷಕರು ಸಂಬಂಧಗಳ ಅನುಕೂಲತೆಯಲ್ಲಿ ಊರಿಂದ ಊರಿಗೆ ಮಕ್ಕಳನ್ನು ಕಳುಹಿಸುವ ಮೂಲಕ ಶಾಲೆಗೆ ಸೇರಿಸುತ್ತಿದ್ದಾರೆ. ಇಂತಹ ಉತ್ಸವಗಳ ಮೂಲಕ ಈ ಭಾಗದ ಜನರಿಗೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಬಾಂಧವ್ಯಗಳನ್ನು ಗಟ್ಟಿಮಾಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ವೀರೇಂದ್ರಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಭಾರತೀಯ ಭಾಷಾ ಭಾವನೆ ಮೂಡಲಿಗಡಿನಾಡ ಭಾಗದಲ್ಲಿ ವಾಸಿಸುವ ಜನರು ಕನ್ನಡ ಮತ್ತು ತೆಲುಗು ಭಾಷೆಗಳನ್ನು ಭಾರತೀಯ ಭಾಷೆಗಳ ನೆಲೆಯಲ್ಲಿ ಪರಸ್ಪರ ಒಂದನ್ನೊಂದು ಗೌರವಿಸುವುದನ್ನು ಕಲಿಯಬೇಕಿದೆ ಎಂದು ಉಪನ್ಯಾಸಕ ಪ್ರೊ.ಜಿ.ವಿ. ಶ್ರೀರಾಮರೆಡ್ಡಿ ಅಭಿಪ್ರಾಯಪಟ್ಟರು.ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿ ಸಿದ್ದೇಶ್ವರನ ದುರ್ಗದಲ್ಲಿ ನಡೆಯುತ್ತಿರುವ ಗಡಿನಾಡ ಉತ್ಸವದ ಎರಡನೇ ದಿನವಾದ ಸೋಮವಾರದ ವಿಚಾರ ಸಂಕಿರಣದಲ್ಲಿ ‘ಗಡಿಭಾಗದ ಕನ್ನಡ ಹಾಗೂ ತೆಲುಗು ಸಾಹಿತ್ಯ’ ಕುರಿತು ಅವರು ಮಾತನಾಡಿದರು.ಈ ಭಾಗದಲ್ಲಿ ಚಲನಚಿತ್ರಗಳು ಇಲ್ಲಿನ ಭಾಷಾ ಪ್ರೇಮ ಮತ್ತು ಅಭಿಮಾನಕ್ಕೆ ಸಾಕ್ಷಿಯಾಗಿವೆ. ತೆಲುಗು ಸಿನೆಮಾಗಳನ್ನು ಕನ್ನಡರಿಗರು ಹೆಚ್ಚು ನೋಡುವ ಮೂಲಕ ನೆರೆಯ ಭಾಷಾ ಸಹೋದರತೆ ವೃದ್ಧಿಸಲು ಸಹಕಾರಿಯಾಗಿದೆ ಎಂದರು. ತೆಲುಗು, ತಮಿಳು, ಮರಾಠಿ, ಭಾಷೆಗಳು ಕರ್ನಾಟಕದ ಕೋಲಾರ, ಬಳ್ಳಾರಿ ಗಡಿಭಾಗದಲ್ಲಿ ವಿಸ್ತರಿಸಿವೆ. ತೆಲುಗು ಮತ್ತು ಕನ್ನಡ ಗಡಿಭಾಗದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿಲ್ಲ ಎಂದರು.ಕರ್ನಾಟಕದ ಎಷ್ಟೋ ಶಾಸನಗಳು ಆಂಧ್ರದಲ್ಲಿ ಸಿಕ್ಕಿವೆ. ಅದೇ ರೀತಿ ತೆಲುಗಿನ ಶಾಸನಗಳು ಕರ್ನಾಟಕದಲ್ಲಿ ಸಿಕ್ಕಿರುವುದು ತೆಲುಗು ಮತ್ತು ಕನ್ನಡ ನೆಲವನ್ನು ಆಳಿದವರು ಈ ಎರಡೂ ಭಾಷೆಗಳನ್ನು ಬಲ್ಲವರೇ ಆಗಿದ್ದಾರೆ.ಕರ್ನಾಟಕವನ್ನು ಆಳಿದ ಚಾಲುಕ್ಯರು ಹಾಗೂ ಶಾತವಾಹನರು ಆಡಳಿತ ಭಾಷೆಯಾಗಿ ತೆಲುಗನ್ನು ಆರಿಸಿಕೊಂಡಿದ್ದರು. ಕನ್ನಡದ ಕವಿ ಪಂಪನಿಗೆ ತೆಲುಗು ಅಚ್ಚುಮೆಚ್ಚಿನ ಹಾಗೂ ಚೆನ್ನಾಗಿ ಮಾತನಾಡುವ ಭಾಷೆಯಾಗಿತ್ತು ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry