ಗಡಿಯಲ್ಲಿ ಉದ್ವಿಗ್ನ ಸ್ಥಿತಿ

7

ಗಡಿಯಲ್ಲಿ ಉದ್ವಿಗ್ನ ಸ್ಥಿತಿ

Published:
Updated:
ಗಡಿಯಲ್ಲಿ ಉದ್ವಿಗ್ನ ಸ್ಥಿತಿ

ಜಮ್ಮು (ಪಿಟಿಐ/ಐಎಎನ್‌ಎಸ್): ಪಾಕಿಸ್ತಾನದ ಸೇನಾ ಪಡೆಗಳು ಪದೇಪದೇ ಕದನವಿರಾಮ ಉಲ್ಲಂಘಿಸಿದ್ದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ-ಪಾಕ್ ಗಡಿಗುಂಟ ಶುಕ್ರವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಭಾರತದ ಸೇನಾಪಡೆಗಳು ಕಟ್ಟೆಚ್ಚರ ವಹಿಸಿವೆ.ಜಮ್ಮುವಿನಿಂದ 250 ಕಿ.ಮೀ. ದೂರದಲ್ಲಿರುವ ಪೂಂಚ್ ವಲಯದ ಕೃಷ್ಣಾ ಘಾಟಿ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನವೂ ಪಾಕ್ ಪಡೆಗಳು ಭಾರತದ ಸೈನಿಕರ ಮೇಲೆ ಗುಂಡು ಹಾರಿಸಿವೆ. ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಲು ಭಾರತದ ಸೈನಿಕರು ಸಂಯಮದಿಂದಲೇ ಪ್ರತಿ ದಾಳಿ ನಡೆಸಿದರು. ಈ ಗುಂಡಿನ ಚಕಮಕಿ ಅರ್ಧ ಗಂಟೆಗಳ ಕಾಲ ನಡೆಯಿತು. ಭಾರತದ ಸೈನಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.ಇದೇ ಪ್ರದೇಶದಲ್ಲಿ ಗುರುವಾರ ಸಂಜೆ 5 ಗಂಟೆಯಿಂದ ರಾತ್ರಿ 9.30ರವರೆಗೆ ಭಾರತದ ಗಡಿ ಠಾಣೆಗಳ ಮೇಲೆ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದರು ಎಂದು ಸೇನಾ ವಕ್ತಾರ ಕರ್ನಲ್ ಆರ್. ಕೆ. ಪಲ್ಟಾ ತಿಳಿಸಿದ್ದಾರೆ.ಬಸ್ ಸೇವೆ ಸ್ಥಗಿತ: ಭಾರತೀಯ ಯೋಧರ ಹತ್ಯೆಯ ಹಿನ್ನೆಲೆಯಲ್ಲಿ ಉಂಟಾಗಿರುವ ತ್ವೇಷಮಯ ಸನ್ನಿವೇಶಕ್ಕೆ ತುಪ್ಪ ಸುರಿಯುವಂತೆ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಜಮ್ಮು ಮತ್ತು ಕಾಶ್ಮೀರ ನಡುವಿನ ಬಸ್ ಸಂಚಾರವನ್ನು ಪಾಕಿಸ್ತಾನ ರದ್ದುಗೊಳಿಸಿದೆ. ಇದರಿಂದ ಪ್ರವಾಸಿಗರು ಪರದಾಡುವಂತಾಗಿದೆ. ಸರಕು ಸಾಗಣೆ ಸೇವೆಯೂ ಸ್ಥಗಿತಗೊಂಡಿದೆ.ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳುತ್ತಿದ್ದ 65ಕ್ಕೂ ಹೆಚ್ಚು ತರಕಾರಿ ಲಾರಿಗಳನ್ನು ಜಮ್ಮು ಮತ್ತು ಕಾಶ್ಮೀರದ ಚೆಕ್‌ಪೋಸ್ಟ್‌ಗಳಲ್ಲಿ ತಡೆಹಿಡಿಯಲಾಗಿದೆ.ಇಸ್ಲಾಮಾಬಾದ್ ವರದಿ: ಕದನ ವಿರಾಮ ಉಲ್ಲಂಘನೆಗೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಶುಕ್ರವಾರ ಕೂಡ ವಾಕ್ಸಮರ ಮುಂದುವರಿದಿದೆ.ಪಾಕ್ ವಿದೇಶಾಂಗ ಕಾರ್ಯದರ್ಶಿ ಜಲೀಲ್ ಅಬ್ಬಾಸ್ ಜಿಲಾನಿ ಅವರು ಭಾರತೀಯ ಹೈಕಮಿಷನರ್ ಶರತ್ ಸಭರವಾಲ್ ಅವರನ್ನು ಕರೆಸಿಕೊಂಡು, ಭಟ್ಟಲ್ ವಲಯದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಪಾಕ್ ಯೋಧನೊಬ್ಬ ಮೃತಪಟ್ಟಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ.ಕದನ ವಿರಾಮ ಉಲ್ಲಂಘನೆಯ ವಿಚಾರವನ್ನು ವಿಶ್ವಸಂಸ್ಥೆ ವೀಕ್ಷಕರ ಮೂಲಕ ಬಗೆಹರಿಸಿಕೊಳ್ಳುವ ಪಾಕ್ ಪ್ರಸ್ತಾಪವನ್ನು ಭಾರತ ಮತ್ತೊಮ್ಮೆ ತಳ್ಳಿಹಾಕಿದೆ.ಈ ವಿಚಾರದಲ್ಲಿ ಮೂರನೆಯವರ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂದು ಅದು ಸ್ಪಷ್ಟವಾಗಿ ತಿಳಿಸಿದೆ. ಈ ನಡುವೆ ರಕ್ಷಣಾ ಸಚಿವ ಎ. ಕೆ. ಆಂಟನಿ,  ಸೈನಿಕರನ್ನು ಹತ್ಯೆ ಮಾಡಿದ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ. ಭದ್ರತಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದ್ದು, ಆತಂಕಪಡುವ ಅಗತ್ಯ ಇಲ್ಲ ಎಂದೂ ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry