ಶನಿವಾರ, ಏಪ್ರಿಲ್ 17, 2021
31 °C

ಗಡಿ ಗ್ರಾಮಗಳಲ್ಲಿ ಜಲಕ್ಷಾಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ಬೇಸಿಗೆ ಬಿಸಿಲು ನೆತ್ತಿಗೇರುವ ಮುನ್ನವೇ ತಾಲ್ಲೂಕಿನ ವಿವಿಧ ಗಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ಎದುರಾಗಿದೆ. ದಾಬಕಾ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಕನಾಪುರ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆಯೇ ನೀರಿನ ಸಮಸ್ಯೆ ಎದುರಾಗಿ ಈಗ ಅದರ ಸ್ವರೂಪ ತೀವ್ರಗೊಂಡು ಜನ-ಜಾನುವಾರುಗಳು ಹಾಹಾಕಾರ ಪಡುವಂತಾಗಿದೆ.ಸುಮಾರು 600 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ಜಾಸ್ತಿಯಾಗಿದ್ದಾರೆ. ಇಷ್ಟು ಸಂಖ್ಯೆಯ ಜನರಿಗೆ ಏಕೈಕ ಕೋಳುವೆ ಬಾವಿ ಇದೆ. ಇದರಿಂದ ಪ್ರತಿ 15-20 ನಿಮಿಷಕ್ಕೊಮ್ಮೆ ಒಂದು ಕೊಡ ನೀರು ತುಂಬುತ್ತದೆ. ಹೀಗಾಗಿ ಗ್ರಾಮದ ಜನರೆಲ್ಲ ಚಂದಾ ಮಾಡಿ ಪ್ರತಿ ದಿನ ಟ್ರಾಕ್ಟರ್‌ದಲ್ಲಿ 3 ಕಿ.ಮೀ. ದೂರದ ಗಂಗನಬೀಡ್ ಗ್ರಾಮದಿಂದ ನೀರು ತರುತ್ತಿದ್ದೇವೆ ಎಂದು ಅಲ್ಲಿಯ ಮಹಿಳೆ ವಿಮಲಾಬಾಯಿ ಹೇಳುತ್ತಾರೆ.ಅಲ್ಪ ಸ್ವಲ್ಪ ಹಣ ಇದ್ದವರು ಚಂದಾ ಮಾಡಿ ಟ್ರಾಕ್ಟರ್‌ನಲ್ಲಿ ನೀರು ತರುತ್ತಿದ್ದಾರೆ. ನಿತ್ಯ ಕೂಲಿ ನಾಲಿ ಮಾಡಿ ಬದುಕುವ ಬಡವರು ಏನು ಮಾಡಬೇಕು ಎಂದು ಮೀನಾಬಾಯಿ ಮೇತ್ರೆ ಗ್ರಾಮಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ ಪ್ರತಿನಿಧಿ ಎದುರು ಗೋಳು ತೋಡಿಕೊಂಡರು. ಹಲವು ವರ್ಷಗಳಿಂದ ನಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದರೂ ಯಾರು ಕೇಳುವವರಿಲ್ಲ ಎಂದು ಜನಪ್ರತಿನಿಧಿ ಮತ್ತು ಅಧಿಕಾರಿಗಳ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ಗ್ರಾಮಕ್ಕೆ ಮಲತಾಯಿ ಧೋರಣೆಯಿಂದ ನೋಡುತ್ತಾರೆ. ಇನ್ನು ತನಕ ನಮ್ಮ ಗ್ರಾಮದ ಜನ ರಸ್ತೆ ಮತ್ತು ಬಸ್ ಕಂಡಿಲ್ಲ. ವಯೋವೃದ್ಧರು ಅನಾರೋಗ್ಯ ಪೀಡಿತರಾದಾಗ, ಮಹಿಳೆಯರ ಹೆರಿಗೆಯಂತಹ ಸಂದರ್ಭದಲ್ಲಿ ಎತ್ತಿನ ಬಂಡಿಯಲ್ಲೂ, ಮಂಚದ ಮೇಲೂ ಹಾಕಿಕೊಂಡು ಆಸ್ಪತ್ರೆಗೆ ಒಯ್ಯುವಂತಹ ದಯನೀಯ ಸ್ಥಿತಿ ನಮ್ಮ ಜನ ಎದುರಿಸುತ್ತಿದ್ದಾರೆ ಎಂದು ಗ್ರಾಮದ ದಿಗಂಬರ ಪಾಟೀಲ ಹೇಳುತ್ತಾರೆ.ಕುಡಿಯುವ ನೀರು, ರಸ್ತೆ, ಬಸ್ ಇಲ್ಲದೆ ನಮ್ಮ ಗ್ರಾಮದ ಯುವಕರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ. ಗ್ರಾಮದಲ್ಲಿ ನೀರಿಲ್ಲದ ಕಾರಣ ಮುಂದಿನ ತಿಂಗಳು ನಡೆಯಬೇಕಿದ್ದ ಮದುವೆ ಕಾರ್ಯ ನಿಂತು ಹೋಗಿವೆ. ಹೀಗಾಗಿ ಬೀಗರ ಮನವೊಲಿಸಿ ಪಕ್ಕದ ಗ್ರಾಮದ ಗುಡಿ ಗುಂಡಾರಗಳಲ್ಲಿ ಮದುವೆ ಕಾರ್ಯ ನಡೆಸಿಕೊಡುವುದು ಅನಿವಾರ್ಯವಾಗಿದೆ ಎಂದು ಅಕನಾಪುರ ಗ್ರಾಮದ ಸಂಜಯ ಪಾಟೀಲ ಗ್ರಾಮದ ಸ್ಥಿತಿಗತಿ ಬಹಳ ದುಃಖದಿಂದ ಹೇಳುತ್ತಾರೆ.ಹಿಂದಿನ ಜನಪ್ರತಿನಿಧಿಗಳು ಗ್ರಾಮದ ಸಮಸ್ಯೆ ಪರಿಹರಿಸುವುದಾಗಿ ಹೇಳಿ ಓಟು ಪಡೆದುಕೊಂಡು ಹೋದರು. ಈಗಿನ ಶಾಸಕ ಪ್ರಭು ಚವಾಣ್ ಅವರು ನಿಮ್ಮ ಊರಿಗೆ ಎಲ್ಲ ಸೌಲಭ್ಯ ಕಲ್ಪಿಸುವುದಾಗಿ ಕಳೆದ ಎರಡೂವರೆ ವರ್ಷದಿಂದ ಹೇಳಿಕೊಂಡು ಬಂದಿದ್ದಾರೆ. ಆದರೆ ಇಲ್ಲಿಯ ತನಕ ಗ್ರಾಮದಲ್ಲಿ ಯಾವುದೇ ಕೆಲಸ ಆಗಿಲ್ಲ ಎಂದು ಗ್ರಾಮಸ್ಥರು ಶಾಸಕರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಟ್ಯಾಂಕ್, ಬೋರ್‌ವೆಲ್, ಪೈಪ್‌ಲೈನ್ ಕಾಮಗಾರಿ ಆಗಿದೆ. ಆದರೆ ಅವುಗಳು ಉಪಯೋಗಕ್ಕೆ ಬಾರದೆ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರ ಮನೆ ತುಂಬಿದೆ ಎಂದು ದಿಗಂಬರ ಪಾಟೀಲ ತಮ್ಮ ಆಕ್ರೋಶ ಹೊರ ಹಾಕಿದರು.ಈ ರೀತಿಯ ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯಗಳಲದೆ ಬಳಲುತ್ತಿರುವ ಸಾಕಷ್ಟು ಗ್ರಾಮ ಮತ್ತು ತಾಂಡಾ ಈಗಲೂ ತಾಲ್ಲೂಕಿನಲ್ಲಿ ಕಾಣಬಹುದಾಗಿದೆ. ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರ ಹತ್ತಾರು ಯೋಜನೆಗಳು ಜಾರಿಗೊಳಿಸಿದರೂ ಅವು ಸಮರ್ಪಕವಾಗಿ ಅನುಷ್ಠಾಗೊಳ್ಳದೇ ಇರುವುದು ಸಮಸ್ಯೆಗೆ ಮೂಲ ಕಾರಣ ಎಂದು ಸಮಾಜದ ಚಿಂತಕರು, ಬುದ್ಧಿಜೀವಿಗಳು ತರ್ಕ ಮಂಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.