ಬುಧವಾರ, ನವೆಂಬರ್ 20, 2019
27 °C
ಕೆಎಂಎಫ್ ಹಾಲಾಹಲ ಭಾಗ - 8

ಗಡಿ ದಾಟಿ ಬಂದಾಗಿದೆ `ಶತ್ರು' ಪಡೆ!

Published:
Updated:

ಬೆಂಗಳೂರು: ಅದಾಗಲೇ `ಶತ್ರುಗಳು' ಕೋಟೆ ಭೇದಿಸಿ ಒಳ ನುಗ್ಗಿದ್ದಾರೆ. ಊರನ್ನಿನ್ನೂ ಕೊಳ್ಳೆ ಹೊಡೆದಿಲ್ಲ. ಆದರೆ, ಸದ್ದುಗದ್ದಲವಿಲ್ಲದೆ ಅದಕ್ಕೆ ಬೇಕಾದ ಹತಾರಗಳನ್ನು ಹವಣಿಸಿಕೊಳ್ಳುತ್ತಿದ್ದಾರೆ. ಈಗಲೇ ಮಟ್ಟ ಹಾಕಿ `ಬಂದ ದಾರಿಗೆ ಸುಂಕವಿಲ್ಲ'ದಂತೆ ಅವರನ್ನು ಅಟ್ಟದಿದ್ದರೆ, `ಹೇ ಅವರೇನು ಮಾಡಿಯಾರು' ಎಂದು ಉಡಾಫೆ ತೋರಿ ದಿಡ್ಡಿ ಬಾಗಿಲು ಭದ್ರ ಮಾಡದಿದ್ದರೆ, ಊರಿಗೆ ಬಂದವರು ಇಲ್ಲೇ ಬೇರು ಬಿಡುತ್ತಾರೆ. ಊರವರಿಗೆ ಚಳ್ಳೇ ಹಣ್ಣು ತಿನ್ನಿಸಿ ನೀರು ಕುಡಿಸುತ್ತಾರೆ!ಜನಸಾಮಾನ್ಯರ ಉಳಿವಿಗೆ ಜನಪರ ಉದ್ದೇಶದ ಕೆಎಂಎಫ್‌ನಂತಹ ಸಹಕಾರಿ ಸಂಸ್ಥೆ ಬೇಕೇಬೇಕು. ಅದರ ಅಸ್ತಿತ್ವಕ್ಕೆ ಧಕ್ಕೆ ತರುವ ಕಂಟಕ ಯಾವ ರೂಪದಲ್ಲೇ ಬರಲಿ, ಅದಕ್ಕೆ ಬಲವಾದ ಪ್ರತಿರೋಧ ವ್ಯಕ್ತವಾಗಲೇಬೇಕು. ಅಂತಹದ್ದೊಂದು ಕೆಲಸ ಆಗದಿರುವುದರಿಂದಲೇ ರಾಜ್ಯದಲ್ಲಿ ನಿಧಾನವಾಗಿ ಖಾಸಗಿ ಹಾಲಿನ ಡೇರಿಗಳು ಬೇರುಬಿಡಲಾರಂಭಿಸಿವೆ. ಅದರಲ್ಲೂ, ನಮ್ಮ ಸಹಕಾರಿ ಸಂಸ್ಥೆಯಲ್ಲಿನ ಹುಳುಕುಗಳನ್ನೇ ಬಂಡವಾಳ ಮಾಡಿಕೊಂಡ ಹೊರ ರಾಜ್ಯಗಳ ಪ್ರಬಲ ಕಂಪೆನಿಗಳು ಬಿಡುಬೀಸಾಗಿ ನಮ್ಮ ಊರು ಹೊಕ್ಕಿವೆ. ಇಲ್ಲಿನ ಮನೆ ಮಕ್ಕಳ ಜೇಬಿಗೆ ಕೈ ಹಾಕುವ ಧೈರ್ಯ ಮಾಡುತ್ತಿವೆ.ಆದರೆ, ಇದು ಭಂಡ ಧೈರ್ಯವಲ್ಲ. ಅವಕ್ಕೆ ಸರ್ಕಾರಗಳ ಅಭಯ ಹಸ್ತ ಇದೆ. ಆ ಹಸ್ತ ತಲೆಬಾಗಿ ಹಾಸುತ್ತಿರುವ ಖಾಸಗೀಕರಣದ ರತ್ನಗಂಬಳಿಯ ನೆಲಹಾಸು ಕೈಬೀಸಿ ಅವುಗಳನ್ನು ಕರೆಯುತ್ತಿದೆ. `ಅಗತ್ಯ ವಸ್ತು ಕಾಯ್ದೆ- 1955'ರ ಅಡಿ `ಹಾಲು ಮತ್ತು ಹಾಲಿನ ಉತ್ಪನ್ನಗಳ ಆದೇಶ'ಕ್ಕೆ (ಎಂಎಂಪಿಒ) ತಿದ್ದುಪಡಿ ತಂದು, ಹೈನುಗಾರಿಕೆಯನ್ನು ಖಾಸಗೀಕರಣಗೊಳಿಸಿರುವ ಸರ್ಕಾರದ ನೀತಿ ಅವುಗಳಿಗೆ ವರದಾನವಾಗಿದೆ. ಹೀಗಾಗಿ ಈ ಕಂಪೆನಿಗಳು ಯಾವಾಗ ಯಾವ ಊರಿಗೆ ಬೇಕಾದರೂ ನಿರ್ಭಯವಾಗಿ ಹೋಗಬಹುದು. ಎಗ್ಗಿಲ್ಲದೇ ಡೇರಿಗಳನ್ನು ತೆರೆದು, ಅಲ್ಲಿನ ಸಹಕಾರಿ ಸಂಸ್ಥೆಗಳಿಗೆ ಮಣ್ಣು ಮುಕ್ಕಿಸಬಹುದು.ಅಂತಹದ್ದೊಂದು ಸಾಧ್ಯತೆಗೆ ನಮ್ಮಲ್ಲಿ ನಿಧಾನವಾಗಿ ವೇದಿಕೆ ಸಿದ್ಧವಾಗುತ್ತಿದೆ. ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಿಂದ ಬರುತ್ತಿರುವ ಖಾಸಗಿ ಕಂಪೆನಿಗಳು ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ಧಾರವಾಡ, ವಿಜಾಪುರ, ಗುಲ್ಬರ್ಗದಂತಹ ನಮ್ಮ ಗಡಿ ಜಿಲ್ಲೆಗಳಲ್ಲಿ ನೆಲೆಯೂರುತ್ತಿವೆ. ಇತರ ಜಿಲ್ಲೆಗಳಲ್ಲೂ ನಿಧಾನವಾಗಿ ತಲೆ ಎತ್ತುತ್ತಿವೆ.ಹೆರಿಟೇಜ್, ಆರೋಗ್ಯ, ಗೋಕುಲ್, ವರ್ಣ, ಮಯೂರ, ಕೃಷ್ಣ, ಗೌರಿ, ತಿರುಮಲ, ಮದರ್, ಪೂಜಾ ಎಂಬಂತಹ ಹತ್ತಾರು ಹೆಸರುಗಳಲ್ಲಿ ಈಗಾಗಲೇ ದಿನಂಪ್ರತಿ 4-5 ಲಕ್ಷ ಲೀಟರ್ ಹಾಲಿನ ಮೇಲೆ ಹಕ್ಕುಸ್ವಾಮ್ಯ ಸಾಧಿಸಿವೆ. ಇದು ಸಾಲದೆಂಬಂತೆ, ಹೈನುಗಾರಿಕೆಯ ಲಾಭದ ಗುಟ್ಟು ಅರಿತಿರುವ ಊರೊಳಗಿನ ಹಿತ ಶತ್ರುಗಳೂ ಕೆಎಂಎಫ್‌ಗೆ ಆತಂಕ ಒಡ್ಡುವುದರಲ್ಲಿ ಹಿಂದೆ ಬಿದ್ದಿಲ್ಲ.ಕಳೆದ ವರ್ಷ ಕೋಲಾರದಲ್ಲಿ ನಡೆದ ಹಾಲು ಉತ್ಪಾದಕರ ಒಕ್ಕೂಟದ ಬೆಳ್ಳಿಹಬ್ಬದ ಮಹೋತ್ಸವದಲ್ಲಿ, ಸಹಕಾರಿ ಚಳವಳಿ  ಕೊಂಡಾಡಿದ್ದ ರಾಷ್ಟ್ರ ಮಟ್ಟದ ನಾಯಕರೊಬ್ಬರ ಪುತ್ರನೇ ಮಂಗಳೂರಿನಲ್ಲಿ ಇಂದು ಖಾಸಗಿ ಹಾಲಿನ ಡೇರಿಯ ಒಡೆಯ!ಹೀಗೆ ಖಾಸಗಿ ಕಂಪೆನಿಗಳ ಪಾರುಪತ್ಯ ಆರಂಭವಾಗಿರುವ ಸ್ಥಳಗಳಲ್ಲೇ ಕೆಎಂಎಫ್ ಅತ್ಯಂತ ವಿಭಿನ್ನವಾದ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆ ಬೆಳಗಾವಿ. ಉಳಿದ ಜಿಲ್ಲೆಗಳಲ್ಲಿ ಕೆಲವೇ ಊರುಗಳ ಜನ ಖಾಸಗಿ ಕಂಪೆನಿಗಳಿಗೆ ಮಣೆ ಹಾಕಿದ್ದರೆ, ಬೆಳಗಾವಿ ಮಾತ್ರ ಗರಿಷ್ಠ ಪ್ರಮಾಣದಲ್ಲಿ ಅವುಗಳಿಗೆ ಮಾರುಹೋಗಿದೆ. ಅನ್ಯ ಜಿಲ್ಲೆಗಳಂತೆ ಇಲ್ಲಿ ಸೀವೆು ಹಸುಗಳಿಗೆ ಜಾಗವಿಲ್ಲ. ಏನಿದ್ದರೂ ನಾಟಿ ಎಮ್ಮೆ ಮತ್ತು ಅದರ ಹಾಲಿಗಷ್ಟೇ ಆದ್ಯತೆ. ಹೊರಗಿನಿಂದ ಬರುವ ಹಸುವಿನ ಹಾಲನ್ನು ಇಲ್ಲಿನ ಜನ ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಅದರ ಗರಿಷ್ಠ ಲಾಭವನ್ನು ಪಡೆದುಕೊಳ್ಳುತ್ತಿರುವವರು ಮಾತ್ರ ನೆರೆ ರಾಜ್ಯದವರು.

ಕುಂದಾ ನಾಡಲ್ಲಿ ಕುಂದಿದ ವಹಿವಾಟು

ಆರಂಭದಲ್ಲಿ ಸೀವೆು ಹಸು ಕೊಳ್ಳುವ `ಸಮೂಹ ಸನ್ನಿ'ಗೆ ಇಲ್ಲಿನವರೂ ಒಳಗಾಗಿದ್ದರಾದರೂ, ಸ್ಥಳೀಯ ಹವಾಮಾನಕ್ಕೆ ಒಗ್ಗದ ಅವುಗಳಿಗೆ ಯಾವಾಗಲೋ ಗೇಟ್‌ಪಾಸ್ ಕೊಟ್ಟಾಗಿದೆ. ಐದು ನದಿಗಳ ಸಂಗಮ ಸ್ಥಳವಾದ ಬೆಳಗಾವಿ ಜಿಲ್ಲೆಯಲ್ಲಿ ಹಸಿ ಮೇವಿಗೆ ಬರವಿಲ್ಲ. ಮಲಪ್ರಭೆಯ ದಡದಲ್ಲಿ ಸಮೃದ್ಧಿಯಾಗಿ ಸಿಗುವ ಮೇವು ಉಣ್ಣುವ ಎಮ್ಮೆಗಳ ಹಾಲಿನಿಂದ ಸಿದ್ಧವಾಗುವ `ಕುಂದಾ' ಈ ನಾಡಿನ ಹೆಮ್ಮೆಯ ಸಿಹಿ ತಿನಿಸು.ವಿಚಿತ್ರವೆಂದರೆ, ಇಂತಹ ವಿಶೇಷ ಹೈನೋದ್ಯಮದ ಇತಿಹಾಸ ಹೊಂದಿರುವ ಜಿಲ್ಲೆಯಲ್ಲಿ ಕೆಎಂಎಫ್ ಸಂಗ್ರಹಿಸುವ ಹಾಲಿಗೆ ಅಧಿಕ ಮಾರುಕಟ್ಟೆ ಇರುವುದು  ಪಕ್ಕದ ಗೋವಾದಲ್ಲಿ! ಬೆಳಗಾವಿಯ ಜನ ಅತಿಯಾಗಿ ನೆಚ್ಚಿಕೊಂಡಿರುವುದು ಮಹಾರಾಷ್ಟ್ರದ ಖಾಸಗಿ ಡೇರಿಗಳು ಸರಬರಾಜು ಮಾಡುವ ಹಾಲನ್ನು. ಇದಕ್ಕೆ ಸಾಕಷ್ಟು ಕಾರಣಗಳಿವೆ. ಎಲ್ಲ ಸಂದರ್ಭಗಳಲ್ಲೂ ಏಕರೂಪದ ನಿಯಮ ಅನುಸರಿಸುವ ಸಹಕಾರಿ ತತ್ವದ ಗೋಜಲುಗಳಿವೆ. ವಿತರಕರನ್ನು ಕೈವಶ ಮಾಡಿಕೊಂಡಿರುವ ನೆರೆ ರಾಜ್ಯದ ಉದ್ಯಮಿಗಳ ಹುನ್ನಾರವಿದೆ.ಕೆಎಂಎಫ್‌ನ ಬೆಳಗಾವಿ ಜಿಲ್ಲಾ ಒಕ್ಕೂಟಕ್ಕೆ ದಿನಾ ಒಂದು ಲಕ್ಷ ಲೀಟರ್ ಹಾಲು ಬರುತ್ತದೆ. ಇದರಲ್ಲಿ ಸುಮಾರು ಅರ್ಧದಷ್ಟು ಹಾಲು ಗೋವಾಗೆ ಸರಬರಾಜಾಗುತ್ತದೆ. ಅಲ್ಲೂ ಒಕ್ಕೂಟಕ್ಕೆ ಪೆಟ್ಟು ಕೊಡಲು ಬಂದ ಖಾಸಗಿ ಕಂಪೆನಿಗಳ ಉದ್ದೇಶ ಫಲಿಸಿಲ್ಲ. ಖುದ್ದಾಗಿ ಗೋವಾದಲ್ಲೇ ಬೀಡುಬಿಟ್ಟ ಒಕ್ಕೂಟದ ಸಿಬ್ಬಂದಿ, ಅಲ್ಲಿನವರ ಅಹವಾಲು ಆಲಿಸಿದ್ದಾರೆ. ಹಸುವಿನ ಹಾಲು ಬೆರೆಸದೆ ಶುದ್ಧ ಎಮ್ಮೆಯ ಹಾಲನ್ನೇ ಪೂರೈಸಬೇಕೆಂಬ ಅವರ ಆಗ್ರಹಕ್ಕೆ ಮಣಿದಿದ್ದಾರೆ.`ನಂದಿನಿ' ಹಾಲಿನ ಗುಣಮಟ್ಟವನ್ನು ಮನದಟ್ಟು ಮಾಡಿಕೊಟ್ಟು, ಅಲ್ಲಿನವರ ಮನ ಗೆಲ್ಲಲು ಯಶಸ್ವಿಯಾಗಿದ್ದಾರೆ. ಆದರೆ ಗೋವಾಗೆ ಸಾಗಣೆ ವೆಚ್ಚವೇ ಅಧಿಕ  ವಾಗುವುದರಿಂದ ಒಕ್ಕೂಟ ಹೆಚ್ಚಿನ ಲಾಭದ ನಿರೀಕ್ಷೆಯನ್ನು ಮಾಡುವಂತಿಲ್ಲ. `ಹಿತ್ತಲ ಗಿಡ ಮದ್ದಲ್ಲ' ಎಂಬಂತೆ ಸ್ಥಳೀಯರು `ನಂದಿನಿ'ಯ ಮಹತ್ವ ಅರಿತಿಲ್ಲ ಎಂಬ ಕೊರಗು ಒಕ್ಕೂಟಕ್ಕಿದೆ.ಜಾಗೃತಿ ಶಿಬಿರ

ಖಾಸಗಿಯವರ ಪೈಪೋಟಿ ಎದುರಿಸಲು ಒಕ್ಕೂಟ ಸಾಕಷ್ಟು ಪ್ರಯತ್ನ ಮಾಡುತ್ತಿದೆ. `ನಂದಿನಿ'ಯ ಗುಣಮಟ್ಟದ ಜಾಗೃತಿಗಾಗಿ ಶಿಬಿರಗಳನ್ನು ಆಯೋಜಿಸುತ್ತದೆ. ರೈತರಿಗೆ ಹಸುಗಳ ನಿರ್ವಹಣೆಯ ಪಾಠ ಹೇಳುತ್ತದೆ. ಮನೆ ಮನೆ ಸಮೀಕ್ಷೆ ನಡೆಸಿ ನಾಗರಿಕರ ಮನ ಗೆಲ್ಲುವ ಪ್ರಯತ್ನಕ್ಕೆ ಕೈಹಾಕಿದೆ. ಆದರೂ ಅದರ ಈ ಏಕಾಂಗಿ ಹೋರಾಟಕ್ಕೆ ಖಾಸಗಿ ಡೇರಿಗಳ ಮಹತ್ವ ತಗ್ಗಿಸಲು ಸಾಧ್ಯವಾಗಿಲ್ಲ.`ರಂಗೋಲಿ ಕೆಳಗೆ ತೂರುವ' ಚಾಣಾಕ್ಷತನ ತೋರುತ್ತಿರುವ ಖಾಸಗಿ ಡೇರಿಗಳು, ರೈತರು- ಗ್ರಾಹಕರು ಇಬ್ಬರನ್ನೂ ಸೆಳೆಯಲು ತಮ್ಮದೇ ಆದ ತಂತ್ರಗಳನ್ನು ಹೂಡುತ್ತಿವೆ. ಮಹಾರಾಷ್ಟ್ರದಲ್ಲಿ ಹಾಲು ಮಾರಾಟ ದರ ಹೆಚ್ಚಾಗಿರುವುದರಿಂದ, ರೈತರಿಗೆ ಕೆಎಂಎಫ್‌ಗಿಂತ ಒಂದಷ್ಟು ಹೆಚ್ಚು ಹಣದ ಆಮಿಷ ಒಡ್ಡಿ ಹಾಲು ಕೊಳ್ಳುತ್ತವೆ. ಆದರೆ ಕೆಎಂಎಫ್‌ನ ಅನುಮತಿ ಇಲ್ಲದೆ ಜಿಲ್ಲಾ ಒಕ್ಕೂಟ ಗ್ರಾಹಕರಿಗಾಗಲಿ, ರೈತರಿಗಾಗಲಿ ಮನಬಂದಂತೆ ಹಾಲಿನ ಬೆಲೆ ಏರಿಳಿತ ಮಾಡುವಂತಿಲ್ಲ.ವಿತರಕರು ನಿಗದಿತ ಕಮಿಷನ್ ಪಡೆದು `ನಂದಿನಿ' ಪ್ಯಾಕೆಟ್ ಮೇಲೆ ಮುದ್ರಿತವಾದ ಎಂ.ಆರ್.ಪಿ. ದರದಲ್ಲೇ ಮಾರಾಟ ಮಾಡಬೇಕು. ಇದಕ್ಕೆ ಪ್ರತಿಯಾಗಿ ಖಾಸಗಿ ಕಂಪೆನಿಗಳು ತಮ್ಮ ಪ್ಯಾಕೆಟ್‌ಗಳ ಮೇಲೆ ಎಂ.ಆರ್.ಪಿ. ಮುದ್ರಿಸುವುದೇ ಇಲ್ಲ. ಇದರಿಂದ ಲೀಟರ್‌ಗೆ 2-4 ರೂಪಾಯಿ ಹೆಚ್ಚಿನ ಹಣಕ್ಕೆ ಮಾರಿಕೊಳ್ಳುವ ಅವಕಾಶ ಸಿಗುವುದರಿಂದ, ಬಹುತೇಕ ವಿತರಕರು ಖಾಸಗಿ ಹಾಲು ಮಾರಾಟಕ್ಕೇ ಒತ್ತು ನೀಡುತ್ತಾರೆ.`ಕೆಲವರಿಗೆ ನಂದಿನಿ ಹಾಲೇ ಬೇಕು. ಅದಕ್ಕೆ ಕೆಎಂಎಫ್ ಮಾರಾಟದ ಹಕ್ಕು ಪಡೆಯುವ ವಿತರಕರು, ಬರಬರುತ್ತಾ ಅಲ್ಲಿ ಖಾಸಗಿ ಹಾಲಿನ ಮಾರಾಟ ಶುರು ಮಾಡಿಕೊಳ್ಳುತ್ತಾರೆ. `ನಂದಿನಿ' ಹಾಲು ಮುಚ್ಚಿಟ್ಟು, ಸ್ಟಾಕಿಲ್ಲ ಎಂದು ಸುಳ್ಳು ಹೇಳಿ ಜನ ಖಾಸಗಿ ಹಾಲನ್ನೇ ಕೊಳ್ಳುವಂತೆ ಮಾಡುತ್ತಾರೆ. ಬಹುತೇಕ ಕಿರಾಣಿ ಅಂಗಡಿಗಳಲ್ಲಿ ಖಾಸಗಿ ಹಾಲು ಮಾರಾಟ ಆಗುತ್ತದೆ. ದಿನಸಿ ಸಾಲ ಬೇಕಿದ್ದರೆ ಈ ಹಾಲನ್ನೇ ಒಯ್ಯಿರಿ ಎಂಬ ಅಂಗಡಿ ಮಾಲೀಕನ ಒತ್ತಡಕ್ಕೆ ಗ್ರಾಹಕರು ಕಟ್ಟು ಬೀಳುತ್ತಾರೆ' ಎಂದು ವಿಶ್ಲೇಷಿಸುತ್ತಾರೆ ಸ್ಥಳೀಯರು.`ಖಾಸಗಿ ಕಂಪನಿಗಳಿಗೆ ಹೇಳುವವರು ಕೇಳುವವರಿಲ್ಲ. ಬೆಳಗಾವಿಗೆ ಅವರಿಂದ ಕಳಪೆ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದೆ. ಗಟ್ಟಿ ಬರಲಿ ಎಂದು ರಾಸಾಯನಿಕ, ಸೋಯಾ ಬೀನ್ ಪುಡಿ, ಯೂರಿಯಾದಂತಹ ಯಾವ ಪದಾರ್ಥವನ್ನು ಬೇಕಾದರೂ ಅವರು ಮಿಶ್ರ ಮಾಡಬಹುದು. ಆದರೆ ಸಹಕಾರಿ ಸಂಸ್ಥೆಯಾದ ಕೆಎಂಎಫ್‌ನದು ಶುದ್ಧ ಹಾಲು. ಇದರ ಸತ್ಯಾಸತ್ಯತೆಯನ್ನು ಜನ ಅರಿಯಬೇಕಾದರೆ ಸರ್ಕಾರ ಖಾಸಗಿ ಹಾಲಿನ ಗುಣಮಟ್ಟ ಪರೀಕ್ಷೆಗೆ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ಅವುಗಳ ನಿಜವಾದ ಬಣ್ಣ ಬಯಲಾಗುತ್ತದೆ' ಎನ್ನುತ್ತಾರೆ ಇಟಗಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಗದೀಶ ಬಸನಗೌಡ ಪಾಟೀಲ್.ಜನರಿಗೆ ಅರ್ಥವಾಗದ ಗುಣಮಟ್ಟ

`ಆಹಾರ ಗುಣಮಟ್ಟ ಮಾನದಂಡದ ಪ್ರಕಾರ, ಹಾಲು ಸಾಗಾಟಕ್ಕೆ ಸ್ಟೀಲ್ ಅಥವಾ ಅಲ್ಯೂಮಿನಿಯಂ ಕ್ಯಾನ್‌ಗಳನ್ನೇ ಬಳಸಬೇಕು. ಖಾಸಗಿಯವರು  ಪ್ಲಾಸ್ಟಿಕ್ ಕ್ಯಾನ್ ಬಳಸುತ್ತಾರೆ. ಸಂಗ್ರಹಿಸಿದ ಮೂರ‌್ನಾಲ್ಕು ಗಂಟೆಗಳ ಒಳಗೆ ಹಾಲನ್ನು ಶೀತಲೀಕರಣ ಘಟಕಗಳಲ್ಲಿ ತಂಪುಗೊಳಿಸಬೇಕು. ಅವರು ಮಂಜುಗಡ್ಡೆ ಹಾಕಿಕೊಂಡು ಬೆಳಗಿನಿಂದ ಸಂಜೆಯವರೆಗೂ ಒಂದೇ ಗಾಡಿಯಲ್ಲಿ ಹಾಲು ಸಾಗಿಸುತ್ತಾರೆ. ಮನೆ ಬಳಿ ಹಾಲು ತಂದುಕೊಡುವ ಗೌಳಿಗಳಿಗೂ ಗುಣಮಟ್ಟದ ಜ್ಞಾನವಿಲ್ಲ. ಜನರಿಗೆ ಇದೆಲ್ಲ ಅರ್ಥವಾಗುತ್ತಿಲ್ಲ' ಎಂದು ವಿಷಾದಿಸುತ್ತಾರೆ ಒಕ್ಕೂಟದ ಹಿರಿಯ ಅಧಿಕಾರಿಗಳು.ಈ ಎಲ್ಲ ಸಮಸ್ಯೆಗಳು ಏನೇ ಇದ್ದರೂ, ಅದು ಸಹಕಾರಿ ತತ್ವದ ಘನ ಉದ್ದೇಶ ಹೊಂದಿರುವ ಕೆಎಂಎಫ್‌ನ ಅಂತ್ಯ ಅಲ್ಲ, ಆರಂಭ ಮಾತ್ರ. ಹೀಗಾಗಿ ಆರಂಭದಲ್ಲೇ ಪಾಠ ಕಲಿಯಲು ಸಂಸ್ಥೆಗೆ ಸಾಕಷ್ಟು ಅವಕಾಶಗಳಿವೆ. ಅದಕ್ಕಾಗಿ ಭಿನ್ನ ಮಾದರಿಯ ಎರಡು ಉದಾಹರಣೆಗಳು ಅದರ ಮುಂದಿವೆ. ಅದರಲ್ಲಿ ಒಂದು, ಖಾಸಗಿ ಕಂಪೆನಿಗಳ ದರ್ಬಾರ್‌ನಿಂದ ಸೋತು ಸುಣ್ಣವಾಗಿರುವ ಆಂಧ್ರ ಮತ್ತು ಜನಾಂದೋಲನಕ್ಕೆ ತಲೆಬಾಗಿ ಎದೆಸೆಟೆಸಿ ನಡೆಯುತ್ತಿರುವ ಗುಜರಾತ್‌ನ ಹೈನೋದ್ಯಮ. ಆಂಧ್ರದಲ್ಲಿ ಸಹಕಾರಿ ಚಳವಳಿಯಡಿ ನಡೆಯುತ್ತಿದ್ದ ಹೈನುಗಾರಿಕೆಯ ಮೇಲೆ ಮಾಜಿ ಮುಖ್ಯಮಂತ್ರಿಯೊಬ್ಬರ ಕಣ್ಣು ಬಿದ್ದಿದ್ದೇ ತಡ, ಅವನತಿ ಆರಂಭವಾಗಲು ಹೆಚ್ಚು ದಿನವೇನೂ ಬೇಕಾಗಲಿಲ್ಲ.ಎರಡೇ ವರ್ಷದಲ್ಲಿ ಗರಿಷ್ಠ ಮಟ್ಟದ ಹಾಲು ವಹಿವಾಟನ್ನು ಸ್ವಾಧೀನಪಡಿಸಿಕೊಂಡ `ಹೆರಿಟೇಜ್' ಹಾಲಿನ ಅಬ್ಬರಕ್ಕೆ ಅಲ್ಲಿನ ಸಹಕಾರಿ ಕ್ಷೇತ್ರ ತತ್ತರಿಸಿಹೋಗಿದೆ. ಅಳಿದುಳಿದ ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು ಬಿಡುತ್ತಿದೆ. ಇನ್ನು ಡಾ. ಕುರಿಯನ್ ನೇತೃತ್ವದಲ್ಲಿ ಸಹಕಾರಿ ತತ್ವವನ್ನು ಅಪ್ಪಿಕೊಂಡು, ಇಡೀ ದೇಶದ ಹೈನೋದ್ಯಮಕ್ಕೇ ದೃಷ್ಟಿಬೊಟ್ಟಿನಂತಿರುವ ಗುಜರಾತ್‌ನ `ಅಮುಲ್' ಮಾದರಿಯೂ ಕಣ್ಣೆದುರಿಗಿದೆ. ಬೇಕಾದ್ದನ್ನು ಆರಿಸಿಕೊಳ್ಳುವ ಆಯ್ಕೆಯ ಅವಕಾಶ ಕೆಎಂಎಫ್ ಮುಂದಿದೆ.ಮುಂದುವರಿಯುವುದು...

ಪ್ರತಿಕ್ರಿಯಿಸಿ (+)