ಗಡಿ ಬೇಲಿ : ಚಿದಂಬರಂ ಪರಿಶೀಲನೆ

7

ಗಡಿ ಬೇಲಿ : ಚಿದಂಬರಂ ಪರಿಶೀಲನೆ

Published:
Updated:

ಷಿಲ್ಲಾಂಗ್ (ಪಿಟಿಐ): ಈಶಾನ್ಯ ರಾಜ್ಯಗಳಲ್ಲಿರುವ ಅಂತರರಾಷ್ಟ್ರೀಯ ಗಡಿ ಉದ್ದಕ್ಕೂ ಮುಂಗಾರು ಆರಂಭಕ್ಕೆ ಮುನ್ನ ಬೇಲಿ ನಿರ್ಮಿಸಿ ಭದ್ರತೆ ಬಿಗಿಗೊಳಿಸುವ ಗುರಿ ಇರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಭಾನುವಾರ ಮೇಘಾಲಯದ ಗಡಿಯಲ್ಲಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

ತಮ್ಮ ಈಶಾನ್ಯ ರಾಜ್ಯಗಳ ಭೇಟಿ ಅಂಗವಾಗಿ ಇಲ್ಲಿಗೆ ಭೇಟಿ ನೀಡಿದ್ದ ಸಚಿವರು, ರಸ್ತೆಗಳ ನಿರ್ಮಾಣ ಹಾಗೂ ಪ್ರಕಾಶಮಾನ ದೀಪಗಳ ಅಳವಡಿಕೆಯ ಎರಡನೇ ಹಂತದ ಕಾಮಗಾರಿ ಆರಂಭವಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಗಡಿ ಬೇಲಿ ನಿರ್ಮಾಣ ಕುರಿತು ರಚಿಸಲಾಗಿರುವ ಸಮನ್ವಯ ಸಮಿತಿ (ಸಿಸಿಐಬಿ) ಹಾಗೂ ಇದನ್ನು ವಿರೋಧಿಸುತ್ತಿರುವ ಪ್ರಮುಖ ಸರ್ಕಾರೇತರ ಸಂಸ್ಥೆಗಳ ಒಕ್ಕೂಟದ ಪ್ರಮುಖರನ್ನು ಕೂಡ ಸಚಿವರು ಭೇಟಿಯಾಗಿದ್ದರು.

ಗಡಿ ರೇಖೆಯ 150 ಗಜಗಳಷ್ಟು ಈಚೆ ಹಾಗೂ ಆಚೆ ಬೇಲಿ ಹಾಕಬೇಕೆಂದು ಸರ್ಕಾರ ಹೇಳುತ್ತಿದೆ. ಆದರೆ, ಇದನ್ನು ವಿರೋಧಿಸುತ್ತಿರುವ ಸಿಸಿಐಬಿ, ಹೀಗೆ ಮಾಡುವುದರಿಂದ ಕೃಷಿಯೋಗ್ಯ ಭೂಮಿ ನಷ್ಟವಾಗುತ್ತದೆ ಎಂದು ಆಕ್ಷೇಪಿಸುತ್ತಿದೆ.

ಕಳೆದ ವರ್ಷ ಭಾರತ ಮತ್ತು ಬಾಂಗ್ಲಾ ಜಂಟಿಯಾಗಿ ನಡೆಸಿದ ಗಡಿ ಸರ್ವೆಯನ್ನೂ ಅದು ವಿರೋಧಿಸಿದೆ. ಭೂ ಮಾಲೀಕರು ಹಾಗೂ ಸಂಬಂಧಿಸಿದ ಸಂಘಟನೆಗಳೊಂದಿಗೆ ಸರಿಯಾಗಿ ಮಾತುಕತೆ ನಡೆಸದೆ ಸರ್ವೆ ಮಾಡಲಾಗಿದೆ ಎಂದು ಅದು ಆಪಾದಿಸಿದೆ.

ಎರಡೂ ರಾಷ್ಟ್ರಗಳ ಗಡಿಯಲ್ಲಿ 3436.56 ಕಿ.ಮೀ. ಉದ್ದ ಬೇಲಿ ನಿರ್ಮಿಸಲು ಸರ್ಕಾರ ಅನುಮತಿ ನೀಡಿದ್ದು, ಈ ಪೈಕಿ 2735 ಕಿ.ಮೀ ಬೇಲಿ ನಿರ್ಮಾಣ ಮುಗಿದಿದೆ ಎಂದು ಗೃಹ ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಉಳಿದ ಕಾಮಗಾರಿಯನ್ನು ಮಾರ್ಚ್ ವೇಳೆಗೆ ಪೂರೈಸಬೇಕು ಎಂದೂ ಅದು ತಿಳಿಸಿದೆ.

ಮೇಘಾಲಯವು ಬಾಂಗ್ಲಾದೊಂದಿಗೆ 443 ಕಿ.ಮೀ. ಗಡಿ ಹಂಚಿಕೊಂಡಿದ್ದು ಹಲವೆಡೆ ಬೇಲಿ ನಿರ್ಮಾಣವಾಗಿಲ್ಲ. ಇದು ದುರ್ಗಮ ಭೂಪ್ರದೇಶವಾಗಿದ್ದರೂ ನುಸುಳುಕೋರರು ಅಂತಹ ಜಾಗಗಳ ಮೂಲಕವೂ ಗಡಿಗಳನ್ನು ದಾಟಿ ನಿಯಮಬಾಹಿರ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಗುವಾಹಟಿ ವರದಿ: ಷಿಲ್ಲಾಂಗ್‌ಗೆ ಬರುವ ಮುನ್ನ, ಇಲ್ಲಿನ ರಾಜಭವನದಲ್ಲಿ ಉನ್ನತ ಪೊಲೀಸ್, ಸೇನಾ ಮತ್ತು ಅರೆಸೇನಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು.

ಅಸ್ಸಾಂನಲ್ಲಿ ಮಾವೊವಾದಿಗಳ ಪ್ರಭಾವ ಹೆಚ್ಚಾಗುತ್ತಿರುವ ಜತೆಗೆ, ದಂಗೆಕೋರ ಸಂಘಟನೆಗಳು ಹಾಗೂ ಪಾಕಿಸ್ತಾನದ ಐಎಸ್‌ಐ ಜತೆ ನಕ್ಸಲರು ಸಂಪರ್ಕ ಹೊಂದುತ್ತಿರುವ ಬೆಳವಣಿಗೆ ಕುರಿತು ಗಂಭೀರವಾಗಿ ಪ್ರಸ್ತಾಪಿಸಿದರು.

ರಾಜ್ಯದಲ್ಲಿ ನಕ್ಸಲರ ಪ್ರಭಾವ ಹೆಚ್ಚಾಗುತ್ತಿರುವ ಬಗ್ಗೆ ಪ್ರಸ್ತಾಪಿಸುವ ಜತೆಗೆ ಯಾವುದೇ ಅಪಾಯ ಎದುರಿಸಲು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು ಎಂದು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ನಂತರ ಸುದ್ದಿಗಾರರಿಗೆ ತಿಳಿಸಿದರು.

ಈಶಾನ್ಯ ರಾಜ್ಯಗಳ ದಂಗೆಕೋರ ಸಂಘಟನೆಗಳು ನೆರೆಯ ಮ್ಯಾನ್ಮಾರ್‌ನಲ್ಲಿ ತಮ್ಮ ಶಿಬಿರಗಳನ್ನು ಹೊಂದಿರುವುದರಿಂದ ಆ ರಾಷ್ಟ್ರಕ್ಕೆ ಹೊಂದಿಕೊಂಡ ಗಡಿ ಭಾಗದಲ್ಲಿ ಬಿಗಿ ಪಹರೆ ಅಗತ್ಯ ಎಂದೂ ಚಿದಂಬರಂ ಸಭೆಯಲ್ಲಿ ಹೇಳಿದರು.

ಪ್ರಸ್ತುತ ಅಸ್ಸಾಂನಲ್ಲಿ ನಿಯೋಜಿಸಲಾಗಿರುವ 86 ಅರೆಸೇನಾ ಪಡೆಯ ಕಂಪೆನಿಗಳು ಸಾಲದಾಗಿದ್ದು, ಕನಿಷ್ಠ 125 ಕಂಪೆನಿಗಳನ್ನು ನಿಯೋಜಿಸಬೇಕೆಂದು ತಾವು ಸಭೆಯಲ್ಲಿ ಒತ್ತಾಯಿಸಿದ್ದಾಗಿ ಗೊಗೋಯ್ ತಿಳಿಸಿದರು.

ರಾಜ್ಯದಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿರುವುದರಿಂದ ಬೇರೆ ರಾಜ್ಯಗಳಂತೆ ಇಲ್ಲಿ ಅದಕ್ಕೆ ಯಾರಿಂದಲೂ ವಿರೋಧ ವ್ಯಕ್ತವಾಗಿಲ್ಲ ಎಂದೂ ಗೊಗೋಯ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry