ಗಡಿ ಮಾತುಕತೆ ತೃಪ್ತಿಕರ- ಮೆನನ್

7
ಚೀನಾ ಜತೆ ಭಾರತ ಒಡಂಬಡಿಕೆ

ಗಡಿ ಮಾತುಕತೆ ತೃಪ್ತಿಕರ- ಮೆನನ್

Published:
Updated:

ಬೀಜಿಂಗ್ (ಪಿಟಿಐ):  ಚೀನಾ ಜತೆಗಿನ ಗಡಿ ವಿವಾದವನ್ನು ಬಗೆ ಹರಿಸಿಕೊಳ್ಳಲು  ತೃಪ್ತಿಕರವಾದ, ನ್ಯಾಯಸಮ್ಮತ ಮತ್ತು ಉಭಯೇತರರಿಗೂ ಒಪ್ಪಿಗೆಯಾಗುವ  ಗಡಿ ಗುರುತಿಸಿಕೊಳ್ಳುವ ಒಡಂಬಡಿಕೆಗೆ ಬರಲಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರು ತಿಳಿಸಿದ್ದಾರೆ.ಚೀನಾದ ವಿದೇಶಾಂಗ ಇಲಾಖೆಯ ವಿಶೇಷ ರಾಜತಾಂತ್ರಿಕ ಅಧಿಕಾರಿ ಡೈ ಬಿಂಗೊ ಅವರ ಜತೆ ನಡೆಸಿದ ಮಾತುಕತೆಯಲ್ಲಿ ಈ ಒಡಂಬಡಿಕೆಗೆ ಬರಲಾಗಿದೆ. ಗಡಿ ವಿವಾದ ಇತ್ಯರ್ಥದ ಮಾತುಕತೆಯ ಚೌಕಟ್ಟಿನ ಬಗ್ಗೆ ಡೈ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.2005ರಲ್ಲಿ ಒಪ್ಪಿಕೊಂಡಿರುವಂತೆ ಮೊದಲ ಹಂತದಲ್ಲಿ ಗಡಿ ವಿವಾದ ಇತ್ಯರ್ಥದ ಮಾತುಕತೆಯ ಮಾರ್ಗದರ್ಶಿ ತತ್ವಗಳನ್ನು ರೂಪಿಸಿಕೊಂಡಿದ್ದು ಅದರಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಮಾತುಕತೆಯ ಚೌಕಟ್ಟನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.ಮಾತುಕತೆಯ ಚೌಕಟ್ಟನ್ನು ಅಂತಿಮಗೊಳಿಸಿದ ನಂತರ ಎರಡೂ ರಾಷ್ಟ್ರಗಳಿಗೆ ಒಪ್ಪಿಗೆಯಾಗುವಂತಹ ಗಡಿ ಗುರುತಿಸುವ ಕಾರ್ಯ ಆರಂಭವಾಗಲಿದೆ ಎಂದು ಮೆನನ್ ಹೇಳಿದ್ದಾರೆ.ಗಡಿ ವಿವಾದ ಬಾಕಿ ಇದೆ ಎಂಬ ಕಾರಣಕ್ಕೆ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಯಾವುದೇ ಅಡ್ಡಿ ಉಂಟಾಗಿಲ್ಲ ಎಂದಿದ್ದಾರೆ.ಮೆನನ್ ಅವರು ಚೀನಾ ವಿದೇಶಾಂಗ ಸಚಿವ ಯಾಂಗ್ ಜಿಯೆಚಿ ಅವರನ್ನು ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಧಿಕಾರದಿಂದ ನಿರ್ಗಮಿಸುತ್ತಿರುವ ಮತ್ತು ಪಕ್ಷದಲ್ಲಿ ಎರಡನೇ ಸ್ಥಾನದಲ್ಲಿ ಇರುವ ವು ಬಾಂಗೊ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಮೆನನ್ ಅವರು ಚೀನಾ ಪ್ರವಾಸವನ್ನು ಮುಕ್ತಾಯಗೊಳಿಸಲಿದ್ದಾರೆ.ವರದಿ ನಿರಾಕರಣೆ: ಗಡಿ ವಿವಾದ ಮಾತುಕತೆಯಲ್ಲಿ ಹಿನ್ನಡೆ ಉಂಟಾಗಿದೆ ಎಂಬ ಭಾರತದ ಮಾಧ್ಯಮಗಳ ವರದಿಯನ್ನು ಮೆನನ್  ನಿರಾಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry