ಶುಕ್ರವಾರ, ಏಪ್ರಿಲ್ 16, 2021
25 °C

ಗಡ್ಕರಿಗೆ ಯಡಿಯೂರಪ್ಪ ಧಿಕ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಿದ 24 ಗಂಟೆಗಳಲ್ಲಿ ತಮ್ಮನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡುವುದಾಗಿ ಹೇಳಿ ನಂತರದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳದೇ ಅನ್ಯಾಯ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ದಿಕ್ಕಾರ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಡಿ.10 ರ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಎಂದೂ ಅಧಿಕಾರದ ಹಿಂದೆ ಬಿದ್ದವನಲ್ಲ. ಜನರು ನೀಡಿದ ಆಶೀರ್ವಾದದಿಂದ ಮುಖ್ಯಮಂತ್ರಿಯಾದೆ. ಅದನ್ನು ಸಹಿಸದ ಕೆಲವರು ತಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡಿದರು. ಪಕ್ಷದ ಕೆಲ ಮುಖಂಡರು ಸಹ ಅದಕ್ಕೆ ಬೆಂಬಲ ನೀಡಿದರು. ಅದೇ ಕಾರಣಕ್ಕಾಗಿ ಪಕ್ಷದ ಅಧ್ಯಕ್ಷರಾಗಿದ್ದ ಗಡ್ಕರಿ ಅವರು ಏನೂ ತಪ್ಪು ಮಾಡದಿದ್ದರೂ ತಮ್ಮನ್ನು ಅಧಿಕಾರದಿಂದ ಕೆಳಗೆ ಇಳಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಕ್ಷದ ವರಿಷ್ಠರಿಗೆ ಇಲ್ಲಿನ ಎಲ್ಲ ವಿಷಯಗಳನ್ನು ತಿಳಿಸಿದರೂ ಅವರು, ಕೆಲವೇ ಕೆಲ ಜನರ ಅಭಿಪ್ರಾಯಕ್ಕೆ ಮಣಿದು ತಮಗೆ ಅನ್ಯಾಯ ಮಾಡಿದರು. ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಸಿ ತಾವು ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಂಡವರೇ ಇಂತಹ ಕೃತ್ಯ ನಡೆಸಿದರು ಎಂದು ಪರೋಕ್ಷವಾಗಿ ಅನಂತಕುಮಾರ ವಿರುದ್ಧ ವಾಗ್ದಾಳಿ ನಡೆಸಿದರು.ತಮ್ಮ ಮೇಲಿನ ಆರೋಪ ಮುಕ್ತರಾದ ಮೇಲೆ ಸಿ.ಎಂ. ಮಾಡುವುದಾಗಿ ಹೇಳಿ ಅಲ್ಲಿಯೂ ತಮಗೆ ಮೋಸ ಮಾಡಲಾಯಿತು ಎಂದ ಅವರು, ಇದಕ್ಕೆಲ್ಲ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ನೀಡುವುದಾಗಿ ತಿಳಿಸಿದ ಅವರು, ನನ್ನ ಬೆಂಬಲಿಗ ಶಾಸಕ ಹಾಗೂ ಸಚಿವರಿಗೆ ಏನಾದರೂ ತೊಂದರೆ ಕೊಡುವ ಕೆಲಸ ಮಾಡಿದರೆ, ಆ ಕ್ಷಣದಲ್ಲಿಯೇ ಈ ಸರ್ಕಾರವನ್ನು ಉಳಿಸುವುದಿಲ್ಲ ಎಂದು ಎಚ್ಚರಿಸಿದರು.ರಾಜ್ಯ ಪ್ರವಾಸ: ಸಮಾವೇಶದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪ್ರಾದೇಶಿಕ ಪಕ್ಷದ ಅಗತ್ಯತೆ ಹಾಗೂ ಮಹತ್ವದ ಬಗ್ಗೆ ತಿಳಿಸಿಕೊಡಲಾಗುವುದು. ಹಾವೇರಿ ಜಿಲ್ಲೆಯಲ್ಲಿ ಸಮಾವೇಶದ ಎರಡು ದಿನ ಮೊದಲು ಎಲ್ಲ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗುವುದು ಎಂದರು.ಹೊಸ ಪ್ರಾದೇಶಿಕ ಪಕ್ಷಗಳನ್ನು ಸಹಜವಾಗಿ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆಯಂತಹ ಮಹಾನಗರಗಳಲ್ಲಿ ಘೋಷಣೆ ಮಾಡುವುದು ಸಾಮಾನ್ಯ. ಆದರೆ, ನಾನು ಹಾವೇರಿಯನ್ನು ಹೊಸ ಪ್ರಾದೇಶಿಕ ಪಕ್ಷ ಘೋಷಣೆಗೆ ಆಯ್ಕೆ ಮಾಡಿಕೊಂಡ್ದ್ದಿದೇನೆ. ಏಕೆಂದರೆ, ಜಿಲ್ಲೆಯಲ್ಲಿ ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಎಲ್ಲರದ್ದೂ ಒಂದೇ ಧ್ವನಿ ಇಲ್ಲಿದೆ. ಹಲವು ದಾರ್ಶನಿಕರ ಪುಣ್ಯಭೂಮಿಯಾಗಿರುವುದೇ ಇದಕ್ಕೆ ಕಾರಣ ಎಂದರು. ಹೊಸ ಪಕ್ಷ ಸಂಘಟನೆಗಾಗಿ ಯುವಪಡೆಯೊಂದು ರಾಜ್ಯಾದ್ಯಂತ ಸಂಚರಿಸಲಿದೆ. ಪ್ರತಿ ಹಳ್ಳಿಯಲ್ಲಿ ತಲಾ ಒಬ್ಬ ಮಹಿಳೆ, ದಲಿತ, ಅಲ್ಪಸಂಖ್ಯಾತರಿರುವ 10 ಜನ ಯಡಿಯೂರಪ್ಪ ಅಭಿಮಾನಿಗಳು ಕೂಡಿಕೊಂಡು ಸಂಘಟನೆ ಮಾಡಿದರೆ ಅದನ್ನು ನಾನು ಪುರಸ್ಕರಿಸುತ್ತೇನೆ. ಅವರನ್ನೆಲ್ಲ ಬಳಸಿಕೊಂಡು ಹೊಸ ಪ್ರಾದೇಶಿಕ ಪಕ್ಷ ಬೆಳೆಸುತ್ತೇನೆ ಎಂದರು.ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಹರಿಹರ ಶಾಸಕ ಬಿ.ಪಿ. ಹರೀಶ, ಸ್ಥಳೀಯ ಶಾಸಕರಾದ ಶಿವರಾಜ ಸಜ್ಜನರ, ನೆಹರೂ ಓಲೇಕಾರ, ಜಿ ಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಮಾಜಿ ಶಾಸಕ ಯು.ಬಿ. ಬಣಕಾರ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.