ಗಡ್ಕರಿ ರಾಜೀನಾಮೆ ನೀಡಲಿ- ಧನಂಜಯ ಕುಮಾರ್

7

ಗಡ್ಕರಿ ರಾಜೀನಾಮೆ ನೀಡಲಿ- ಧನಂಜಯ ಕುಮಾರ್

Published:
Updated:

ನವದೆಹಲಿ: `ಮಹಾರಾಷ್ಟ್ರದಲ್ಲಿ ನೂರು ಎಕರೆ ಕೃಷಿ ಭೂಮಿ ಕಬಳಿಸಿದ ಆರೋಪಕ್ಕೆ ಒಳಗಾಗಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು~ ಎಂದು ಕೇಂದ್ರದ ಮಾಜಿ ಸಚಿವ ಧನಂಜಯ ಕುಮಾರ್ ಆಗ್ರಹಿಸಿದರು.`ನ್ಯಾಯ ಎಲ್ಲರಿಗೂ ಒಂದೇ. ಬಿ.ಎಸ್.ಯಡಿಯೂರಪ್ಪನವರ ಮೇಲೆ ಅಕ್ರಮ ಗಣಿಗಾರಿಕೆ ಹಗರಣದ ಆರೋಪ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಯಿತು. ಈಗ ಅದೇ ಮಾನದಂಡ ಪಕ್ಷದ ಅಧ್ಯಕ್ಷರಿಗೂ ಅನ್ವಯ ಆಗಬೇಕೆಂದು ಬಿಜೆಪಿಯಿಂದ ಮಂಗಳವಾರ ಉಚ್ಚಾಟಿತರಾದ ಧನಂಜಯ ಕುಮಾರ್ ಪತ್ರಕರ್ತರಿಗೆ ತಿಳಿಸಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬಣದಲ್ಲಿ ಗುರುತಿಸಿಕೊಂಡಿರುವ ಧನಂಜಯ ಕುಮಾರ್, ಬಿಜೆಪಿ ಅಧ್ಯಕ್ಷರನ್ನು ಕಂಡು `ಅಯ್ಯೋ ಪಾಪ~ ಎಂದು ಕನಿಕರ ಹುಟ್ಟುತ್ತದೆ ಎಂದು ವ್ಯಂಗ್ಯವಾಡಿದರು.`ಸಾರ್ವಜನಿಕ ಜೀವನದಲ್ಲಿ ಇರುವವರು ಆರೋಪ ಬಂದಾಗ ಅಗ್ನಿಪರೀಕ್ಷೆಗೆ ಒಳಗಾಗಬೇಕು. ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು~ ಎಂದು ಒತ್ತಾಯಿಸಿದರು.ಯಡಿಯೂರಪ್ಪ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದ ಬಿಜೆಪಿ ವರಿಷ್ಠರು, ಗಡ್ಕರಿ ಮೇಲೆ ಬಂದಿರುವ ಆರೋಪದ ಬಗ್ಗೆ ಏನನ್ನುತ್ತಾರೆ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ. ಸದ್ಯದಲ್ಲೇ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಲಿದ್ದಾರೆ. ಹೊಸ ಪಕ್ಷ ಸ್ಥಾಪನೆ ಸಿದ್ಧತೆ ನಡೆಸಿದ್ದಾರೆ. ಡಿಸೆಂಬರ್ ವೇಳೆಗೆ ಹೊಸ ಪಕ್ಷ ಅಸ್ತಿತ್ವಕ್ಕೆ ಬರಲಿದೆ~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry