ಗುರುವಾರ , ಏಪ್ರಿಲ್ 22, 2021
30 °C

ಗಡ್ಡ(ಗುಡ್ಡ)ಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಜನ

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಸಾಣೇಹಳ್ಳಿ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ಮಳೆ ಇಲ್ಲದೆ ಬರದ ಛಾಯೆುಂದ ಜನರು ತತ್ತರಿಸುತ್ತಿದ್ದಾರೆ. ಈಗ ಎಲ್ಲಿ ನೋಡಿದರೂ ಭೂತಾಯಿಗೆ ಹಸಿರು ಸೀರೆ ಉಡಿಸಿದಂತೆ ಬೆಳೆಗಳು ಹಚ್ಚ ಹಸುರಾಗಿ ಕಂಗೊಳಿಸಬೇಕಿತ್ತು. ಆದರೆ ಎಲ್ಲೇ ಕಣ್ಬಿಟ್ಟರೂ ಬರಿದಾದ ಬೆತ್ತಲೆ ಭೂಮಿ ಕಾಣುವುದು. ಕೆರೆಕಟ್ಟೆಗಳು ಒಣಗಿ ದನಕರುಗಳಿಗೆ ಮೇವಿಲ್ಲ, ನೀರಿಲ್ಲ. ಪಶುಸಂಗೋಪನೆ ಬೇಡವೇ ಬೇಡ ಎನ್ನುವ ಪರಿಸ್ಥಿತಿ.

 

ಕುಡಿಯುವ ನೀರಿಗೂ ಬರ. ಇಂಥ ಸಂದರ್ಭದಲ್ಲಿ ನಮಗೆ ದೇವರು, ತೀರ್ಥಕ್ಷೇತ್ರಗಳು, ಪವಾಡಪುರುಷರು ನೆನಪಾಗುವರು. ಸಂಕಟ ಬಂದಾಗ ವೆಂಕಟರಮಣ  ಎನ್ನುವ ಧೋರಣೆ. ಗಡ್ಡ(ಗುಡ್ಡ)ಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಜನರೇ ಹೆಚ್ಚು.ಈಗ ಕರ್ನಾಟಕ ಸರ್ಕಾರದ ಮುಜರಾಯಿ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಕರ್ನಾಟಕದ ಎಲ್ಲ ದೇವಾಲಯಗಳಲ್ಲಿ ಪೂಜೆ ಮಾಡಿಸುವಂತೆ ಆದೇಶ ಮಾಡಿದ್ದಾರೆ. ಅದಕ್ಕಾಗಿ ಸುಮಾರು ಹದಿನೈದು ಕೋಟಿ ಹಣ ವ್ಯಯವಾಗುವುದಂತೆ. ಈ ಪೂಜೆಯ ಉದ್ದೇಶ ವರುಣದೇವನ ಕೃಪೆ ಪಡೆಯುವುದು.ಆ ವರುಣ ದೇವ ಪೂಜೆಯಿಂದ ಸಂಪ್ರೀತನಾಗಿ ಮಳೆಯನ್ನು ಸುರಿಸಿ ಇಳೆಯನ್ನು ತೋಯಿಸಲಿ ಎನ್ನುವುದು. ಇಲ್ಲಿ ಸಂಪ್ರೀತನಾಗುವುದು ವರುಣ ದೇವ ಅಲ್ಲ, ಪೂಜಾರಿ, ಪುರೋಹಿತರು.ಅಜ್ಞಾನ ಅವಿವೇಕದ ಪರಮಾವಧಿ. `ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ~ ಎಂದರು ಬಸವಣ್ಣನವರು. ಆದರೆ ಇವತ್ತು ಅಜ್ಞಾನದ ಬಲದಿಂದ ಜ್ಞಾನದ ಕೇಡಾಗುತ್ತಿರುವುದು ವಿಷಾದನೀಯ. ಮಳೆಗೂ ಪೂಜೆಗೂ ಸಂಬಂಧವಿಲ್ಲ.ಪೂಜೆ ಮನಸ್ಸಿನ ಶಾಂತಿಗಾಗಿ. ಅದು ತೀರ ಖಾಸಗಿಯಾದುದು. ಮನುಷ್ಯ ಮಾಡಬಾರದ ಪಾಪ ಮಾಡಿ ದೇವರ ಪೂಜೆ ಮಾಡಿದರೆ ಪಾಪ ಪಲ್ಲಟವಾಗಲು ಸಾಧ್ಯವೇ? ಮಾಡಬಾರದ ಪಾಪ ಮಾಡಿದ ಜನರು ಏನೇನೋ ದಾನ ಮಾಡಿ ತಮ್ಮ ಪಾಪವನ್ನು ಕಳೆದುಕೊಳ್ಳಲು ಮುಂದಾಗುವರು.ಆದರೆ ಮಾಡಿದ ಪಾಪ ಏನೇ ದಾನ ಕೊಟ್ಟರೂ ಕಳೆಯದು ಎನ್ನುವ ಸತ್ಯವನ್ನು ಅವರು ಮರೆಯುವರು. ನಮ್ಮಲ್ಲಿ ಮಳೆ ಬಾರದ್ದಕ್ಕೆ ಕಾರಣ ಮನುಷ್ಯ ಪ್ರಕೃತಿಯ ಮೇಲೆ ಎಸಗುತ್ತಿರುವ ನಿರಂತರ ಅತ್ಯಾಚಾರ.

 

ಬೆಟ್ಟಗುಡ್ಡಗಳನ್ನು ಬಗೆದು ಬರಿದು ಮಾಡಿದ ಫಲ ಮಳೆಯ ಅನಾವೃಷ್ಟಿ ಅಥವಾ ಅತಿವೃಷ್ಟಿ. ಇರುವ ಕಾಡುಗಳನ್ನು ನಾಶ ಮಾಡಿದ್ದು ಸಹ ಮಳೆಯ ವ್ಯತ್ಯಾಸಕ್ಕೆ ಕಾರಣ. ಅಷ್ಟೇ ಆಗಿದ್ದರೆ ಚಿಂತೆ ಇರಲಿಲ್ಲ.ಎಲ್ಲಿ ಬೇಕೋ ಅಲ್ಲಿ ಖನಿಜಗಳಿಗಾಗಿ, ಇಂಧನಕ್ಕಾಗಿ, ನೀರಿಗಾಗಿ ಭೂಮಿಯನ್ನು ಆಳವಾಗಿ ಬಗಿಯುತ್ತ ದೊಡ್ಡ ದೊಡ್ಡ ಕಂದಕಗಳನ್ನು ತೋಡಿದ ಪರಿಣಾಮ ಪರಿಸರದ ಏರುಪೇರಿಗೆ ಕಾರಣವಾಗಿದೆ. ಇದರಿಂದ ಪರಿಸರ ಮಾಲಿನ್ಯ ಅತಿಯಾಗಿ ಮೋಡಗಳ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ಮರೆಯಬಾರದು.ಮನುಷ್ಯ ಪರಿಸರದ ಸಮತೋಲನ ಕಾಯ್ದುಕೊಂಡರೆ ಯಾವ ದೇವರ ಪೂಜೆಯನ್ನೂ ಮಾಡುವ ಅಗತ್ಯವಿಲ್ಲ. ಇವತ್ತು ವಿವಿಧ ಕಾರ್ಖಾನೆಗಳ ಮಾಲಿನ್ಯ ನದಿಗಳ ನೀರಿನಲ್ಲಿ ಹಾಗೂ ವಾಯುವಿನಲ್ಲಿ ಸೇರಿ ಜಲಮಾಲಿನ್ಯ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.

 

ಈಗ ಮನುಷ್ಯ ತನ್ನ ತಪ್ಪನ್ನು ಅರಿತು ತಾನು ಮಾಡುತ್ತಿರುವ ಪಾಪ ಕಾರ್ಯಗಳಿಂದ ವಿಮುಕ್ತನಾಗಬೇಕು. ಸರಳವಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕು. ಗಣಿಗಾರಿಕೆ ನಿಲ್ಲಬೇಕು. ಕಾಡಿನ ನಾಶ ತಪ್ಪಬೇಕು. ಮರಗಳನ್ನು ಕಡಿಯುವ ಬದಲು ಬೆಳೆಸುವ ಕ್ರಾಂತಿ ನಡೆಯಬೇಕು.ಪರಿಸರದ ಸಮತೋಲನ ಕಾಯ್ದುಕೊಳ್ಳಬೇಕು. ಇವತ್ತು ನೋಡಿ ಸೆರೆಮನೆಯಿಂದ ಹೊರಬರಲು ನೂರಾರು ಕೋಟಿ ಹಣವನ್ನು ಲಂಚರೂಪದಲ್ಲಿ ಕೊಡುತ್ತಾರೆ ಎಂದರೆ ಅವರು ಎಷ್ಟು ಲೂಟಿ ಮಾಡಿರಬಹುದು? ಪರಿಸರವನ್ನು ಎಷ್ಟು ಹಾಳು ಮಾಡಿರಬಹುದು? ಆ ಮಹಾನುಭಾವರು ಗಣಿಗಾರಿಕೆಯ ಹೆಸರಿನಲ್ಲಿ ನಮ್ಮ ಗುಡ್ಡ ಬೆಟ್ಟಗಳನ್ನು ತೋಡಿ ತೋಡಿ ದೊಡ್ಡ ದೊಡ್ಡ ಕಂದಕಗಳನ್ನು ಸೃಷ್ಟಿಸಿದ ದುಷ್ಫಲ ಮಳೆಯ ಅಭಾವ ಎನ್ನುವ ಸತ್ಯವನ್ನು ಸರ್ಕಾರ ಮನಗಾಣದೆ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದರೆ ಪರಿಸರ ಸರಿಯಾಗಿ ಮಳೆ ಬರುತ್ತದೆ ಎನ್ನುವುದು ಅವರ ಭ್ರಮೆ.ನಿಜಕ್ಕೂ ಮಳೆ ಬೇಕೆಂದರೆ ವೈಜ್ಞಾನಿಕ ಶೋಧನೆಗಳಂತೆ ಮೋಡ ಬಿತ್ತನೆಯ ಕಾರ್ಯ ಮಾಡಬೇಕಿತ್ತು. ಅದನ್ನು ಮಾಡದೆ ಕೋಟಿ ಕೋಟಿ ಹಣವನ್ನು ಪೂಜಾರಿ ಪುರೋಹಿತರ ಬಾಯಿಗಿಟ್ಟರೆ, ಹೋಮ ಹವನ ಮಾಡಿಸಿದರೆ ಗುಡ್ಡಕ್ಕೆ ಕಲ್ಲು ಹೊತ್ತಂತೆ. ಅದಕ್ಕಾಗಿಯೇ ಬಸವಣ್ಣನವರು 12ನೆಯ ಶತಮಾನದಲ್ಲೇ ಮೌಢ್ಯಗಳನ್ನು ನೇರವಾಗಿ ಪ್ರತಿಭಟಿಸಿದರು.

`ಕಲ್ಲ ನಾಗರ ಕಂಡರೆ ಹಾಲನ್ನು ಎರೆಯುವ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲು~ ಎನ್ನುವ ಜನರ ರೀತಿ ನೀತಿಯನ್ನು ಬಸವಣ್ಣನವರು ಲೇವಡಿ ಮಾಡುವರು. `ಹಸಿದ ಹೊಟ್ಟೆಗೆ ಅನ್ನ ನೀಡದೆ, ಉಣ್ಣದ ದೇವರಿಗೆ ಎಡೆ ಹಿಡಿಯುವುದು ಎಂಥ ಧರ್ಮ~ ಎಂದು ಕೇಳುವರು.

 

ಇವತ್ತಿಗೂ ಬಸವಣ್ಣನವರ ವಿಚಾರಗಳನ್ನು ಅರಿತು ಆಚರಣೆಯಲ್ಲಿ ತರುವ ಮನಸ್ಸು ಮಾಡದಿರುವುದು ವಿಷಾದನೀಯ. ಯಾರೇ ಮೌಢ್ಯಗಳಿಗೆ ಬಲಿಯಾದರೂ ಬಸವಭಕ್ತರು ಅಂಥ ಮೌಢ್ಯಗಳಿಗೆ ಬಲಿಯಾಗಬಾರದಿತ್ತು. ಕಂದಾಚಾರಗಳಿಗೆ ಮಾನ್ಯತೆ ನೀಡಬಾರದಾಗಿತ್ತು. ಹೋಮ ಹವನಗಳನ್ನು ತ್ಯಜಿಸಬೇಕಿತ್ತು.

 

ಆದರೆ ಅವರಿಂದಲೇ ಅವುಗಳ ವೈಭವೀಕರಣ ನಡೆದಿದೆ. ಅದನ್ನು ಪ್ರತಿಭಟಿಸುವ ಎದೆಗಾರಿಕೆ ಅವರ ಅನುಯಾಯಿಗಳಿಗಿಲ್ಲ. ಬದಲಾಗಿ ತಮ್ಮವರು ಮಂತ್ರಿಗಳೋ, ಮುಖ್ಯಮಂತ್ರಿಗಳೋ ಆಗಬೇಕೆಂದು ಬಸವಭಕ್ತರೇ ಕಂಡ ಕಂಡ ದೇವಾಲಯಗಳಲ್ಲಿ ಪೂಜೆ ಮಾಡಿಸುವರು. ಹೋಮ ಹವನ ಮಾಡಿಸುವರು. ಅದಕ್ಕಾಗಿ ಸಾಕಷ್ಟು ದುಂದುವೆಚ್ಚ ಮಾಡುವರು.ತಾಯಿಯ ಹಾಲೇ ನಂಜಾದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ, ಧರೆಯೇ ಹೊತ್ತಿ ಉರಿದರೆ ರಕ್ಷಣೆ ಎಲ್ಲಿಂದ? ರಕ್ಷಣೆ ಮಾಡುವವರು ಯಾರು? ಆದ್ದರಿಂದ ಜನಪ್ರತಿನಿಧಿಗಳು ಅಜ್ಞಾನಿಗಳಾಗದೆ, ಅವಿವೇಕದ ಕಾರ್ಯಗಳಿಗೆ ಕೈಹಾಕದೆ ಸುಜ್ಞಾನಿಗಳಾಗಿ ಮೌಢ್ಯಗಳಿಗೆ ಕೊಡಲಿ ಏಟು ನೀಡಿ ವಿವೇಕದ ತಳಹದಿಯ ಮೇಲೆ ಸತ್ಕಾರ್ಯಗಳನ್ನು ಮಾಡುತ್ತ ಹೋದರೆ ಸಾಕು.ಈ ಪೂಜೆ, ಯಜ್ಞಗಳಿಗೆಂದು ದುಂದುವೆಚ್ಚ ಮಾಡುವ ಹಣವನ್ನೇ ಒಳಿತಿನ ಕಾರ್ಯಗಳಿಗೆ ಬಳಕೆ ಮಾಡಬೇಕು. ಪೂಜೆಗೆಂದು 15 ಕೋಟಿ ರೂಪಾಯಿ ಖರ್ಚು ಮಾಡುವ ಬದಲು ಅದೇ ಹಣದಿಂದ ಸಾವಿರಾರು ಕೆರೆಗಳ ಹೂಳೆತ್ತಿಸುವ ಕಾರ್ಯ ಮಾಡಿದರೆ ಮುಂದೆ ಅದರಿಂದ ನಾಡಿಗೆ, ಕೃಷಿಕರಿಗೆ ಒಳಿತಾಗುವುದು.ಇಂಥ ವಿವೇಕ ಸರ್ಕಾರದಲ್ಲಿರುವ ಎಲ್ಲ ಜನಪ್ರತಿನಿಧಿಗಳಿಗೆ ಉದಯವಾಗಬೇಕಿದೆ. ಅವರಲ್ಲಿ ಉದಯವಾಗದಿದ್ದಲ್ಲಿ ಐಎಎಸ್, ಐಪಿಎಸ್ ಇತ್ಯಾದಿ ಮಾಡಿ ಅವರಿಗೆ ಮಾಗದರ್ಶನ ಮಾಡುವವರು ಜನಪ್ರತಿನಿಧಿಗಳ ಕಿವಿ ಹಿಂಡುವ ಕಾರ್ಯ ಮಾಡಬೇಕು. ಅವರೂ ಮಾಡದಿದ್ದರೆ ಜನರೇ ಬಂಡೆದ್ದು ಅವರಿಗೆ ಬುದ್ಧಿ ಕಲಿಸುವ ಹೊಣೆಯನ್ನು ಹೊತ್ತುಕೊಳ್ಳಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.