ಸೋಮವಾರ, ಡಿಸೆಂಬರ್ 16, 2019
25 °C

ಗಣತಂತ್ರದ ಮೆರಗು; ಮನದುಂಬಿದ ಸೊಬಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣತಂತ್ರದ ಮೆರಗು; ಮನದುಂಬಿದ ಸೊಬಗು

ಬೆಂಗಳೂರು:  ಇತ್ತ ರಾಜ್ಯಪಾಲರಿಂದ ಧ್ವಜಾ ರೋಹಣ ನೆರವೇರುತ್ತಿದ್ದಂತೆಯೇ ಆಕಾಶದಿಂದ ಹೆಲಿಕಾಪ್ಟರ್ ಮೂಲಕ ಉದುರಿದ ಗುಲಾಬಿ ದಳಗಳ ಕೆಂಪು ಅಂಬರ ತುಂಬಿದ ಸಂಭ್ರಮ. ಅದರ ಹಿಂದೆಯೇ ರಾಷ್ಟ್ರಗೀತೆಯ ನಿನಾದ. ರಾಷ್ಟ್ರಪ್ರೇಮದ ರೋಮಾಂಚನದ ಕ್ಷಣಗಳಲ್ಲಿ ಮಿಂದ ಎಲ್ಲರ ಮನಗಳೊಳಗೆ `ಜನಗಣಮನ~ದ ಗುನುಗು.ನಗರದ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಗುರುವಾರ ಬೆಳಿಗ್ಗೆ ಕೊರೆವ ಚಳಿಯನ್ನೂ ಮೀರಿ ಸೇರಿದ್ದ ಸಾವಿರಾರು ಜನರು 63 ನೇ ಗಣರಾಜ್ಯೋತ್ಸವಕ್ಕೆ ಸಾಕ್ಷಿಯಾದರು.ಭಾರತೀಯ ಸೇನೆ, ಗಡಿ ಭದ್ರತಾ ಪಡೆ, ಕೆಎಸ್‌ಆರ್‌ಪಿಯ ನಾಲ್ಕು ತಂಡಗಳು, ಸಿಎಆರ್‌ನ ಮೂರು ತಂಡಗಳು, ಹೋಮ್‌ಗಾರ್ಡ್‌ನ ಪುರುಷ ಹಾಗೂ ಮಹಿಳಾ ತಂಡಗಳು, ಅಗ್ನಿಶಾಮಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಭಾರತ ಸೇವಾ ದಳ, ಸೆಂಟ್ ಜಾನ್ಸ್ ಆಂಬುಲೆನ್ಸ್, ಎನ್‌ಎಸ್‌ಎಸ್, ಆರ್ಮಿ ಬ್ಯಾಂಡ್ ತಂಡಗಳು ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು ಗಣರಾಜ್ಯೋತ್ಸವ ದಿನಾ ಚರಣೆಯ ಪೆರೇಡ್‌ನಲ್ಲಿ ಭಾಗವಹಿಸಿದ್ದರು.ಧ್ವಜಾರೋಹಣದ ನಂತರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತೆರೆದ ಜೀಪ್‌ನಲ್ಲಿ ಪೆರೇಡ್ ತಂಡಗಳ ಬಳಿ ತೆರಳಿ ಗೌರವ ವಂದನೆ ಸ್ವೀಕರಿಸಿದರು.ಪೆರೇಡ್ ಮುಗಿಯುತ್ತಿದ್ದಂತೇ ಪ್ಯಾರಾಚೂಟ್‌ನಲ್ಲಿ ಬಾನಿಂದ ಹಾರಿ ಬಂದ ಭಾರತೀಯ ಸೇನೆಯ ಪ್ಯಾರಾ ಮೋಟಾರ್ ಗ್ಲೈಡಿಂಗ್ ತಂಡದ ಮೂವರು ಯೋಧರು ಮೈದಾನದಲ್ಲಿ ನೆರೆದಿದ್ದ ನೋಡುಗರ ಹರ್ಷೋದ್ಗಾರಕ್ಕೆ ಕಾರಣರಾದರು.ಪೆರೇಡ್‌ನ ಮೊದಲ ವಿಭಾಗದ ಪ್ರಥಮ ಪ್ರಶಸ್ತಿ ಮೇಜರ್ ಜನರಲ್ ಸಂದೀಪ್ ಸಿಂಗ್ ನೇತೃತ್ವದ ಭಾರತೀಯ ಸೇನೆ ತಂಡಕ್ಕೆ ಲಭಿಸಿತು. ಎರಡನೇ ಪ್ರಶಸ್ತಿ ವಿಕಾಸ್ ಕುಮಾರ್ ನೇತೃತ್ವದ ಗಡಿ ಭದ್ರತಾ ಪಡೆಗೆ ಹಾಗೂ ಮೂರನೇ ಪ್ರಶಸ್ತಿ ಎಸ್.ಎನ್.ರಾಜೇಶ್ ನೇತೃತ್ವದ ಸಿಎಆರ್ (ನಗರ) ತಂಡದ ಪಾಲಾಯಿತು. ಎರಡನೇ ವಿಭಾಗದಲ್ಲಿ ಸಿವಿಲ್ ಡಿಫೆನ್ಸ್ ಹೋಮ್   ಗಾರ್ಡ್ ತಂಡ, ಅಗ್ನಿಶಾಮಕ ಮಹಿಳಾ ತಂಡ ಹಾಗೂ ಮೀಸಲು ಪೊಲೀಸ್ ತಂಡಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡವು.ಮೂರು, ನಾಲ್ಕು ಮತ್ತು ಐದನೇ ವಿಭಾಗದ ಪ್ರಥಮ ಬಹುಮಾನಗಳನ್ನು ಎನ್‌ಎಸ್‌ಎಸ್ ಬಾಲಕಿಯರ ತಂಡ, ಫ್ಲಾರೆನ್ಸ್ ಪಬ್ಲಿಕ್ ಶಾಲೆಯ ಬಾಲಕಿಯರ ತಂಡ ಹಾಗೂ ಸಿಲಿಕಾನ್ ಸಿಟಿ ಅಕಾಡೆಮಿ ಆಫ್ ಸೆಕೆಂಡರಿ ಎಜುಕೇಷನ್ ತಂಡಗಳಿಗೆ ನೀಡಲಾಯಿತು.ಮಕ್ಕಳ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಉಮೇಶ್ ಹಾಗೂ ಶ್ರುತಿ ನೇತೃತ್ವದ ಸಮರ್ಥನಂ   ಟ್ರಸ್ಟ್‌ನ ಅಂಗವಿಕಲ ಮಕ್ಕಳ ತಂಡ, ದ್ವಿತೀಯ ಬಹುಮಾನವನ್ನು ಧರ್ಮರಾಜ್ ನೇತೃತ್ವದ ರಮಣ ಮಹರ್ಷಿ ಅಂಧ ಮಕ್ಕಳ ಶಾಲಾ ತಂಡ ಮತ್ತು ತೃತೀಯ ಬಹುಮಾನವನ್ನು ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ಶಾಲಾ ತಂಡಗಳು ಪಡೆದುಕೊಂಡವು.ವಾದ್ಯ ವಿಭಾಗದಲ್ಲಿ ಎಸ್‌ಎಆರ್‌ಎಸ್ ಲಿಟಲ್ ಫ್ಲವರ್ ಶಾಲಾ ತಂಡ, ಅಶ್ವಿನಿ ಶಾಲಾ ತಂಡ ಹಾಗೂ ಭಾರತ ಸೇವಾ ದಳದ ತಂಡಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದವು. ರಾಜ್ಯಪಾಲರಿಂದ ಬಹುಮಾನಗಳನ್ನು ಪಡೆದು ಕೊಂಡ ಎಲ್ಲರ ಮುಖಗಳಲ್ಲಿಯೂ ಗೆಲವಿನ ಸಂತಸ ತುಂಬಿತ್ತು. ವರ್ಣದ ಚಿತ್ತಾರ ಮೂಡಿಸಿದ ಚಿಣ್ಣರು...

ಬೆಂಗಳೂರು: ಮಾಣಿಕ್ ಷಾ ಪೆರೇಡ್ ಮೈದಾನ ಗುರುವಾರ ಅಕ್ಷರಶಃ ಸಾಂಸ್ಕೃತಿಕ ವೇದಿಕೆಯಾಗಿ ಬದಲಾಗಿತ್ತು. ಬಣ್ಣ ಬಣ್ಣದ ವಸ್ತ್ರಗಳನ್ನು ತೊಟ್ಟ ಚಿಣ್ಣರು ಮೈದಾನವನ್ನು ವರ್ಣಮಯಗೊಳಿಸಿದರು. ನಗರದ ವಿವಿಧ ಶಾಲೆಗಳ ನೂರಾರು ಮಕ್ಕಳು ಗಣರಾಜ್ಯೋತ್ಸವದ ನೃತ್ಯ ರೂಪಕಗಳಿಗೆ ಹೆಜ್ಜೆಯಾದರು.ನಗರದ ಹೆಗ್ಗನಹಳ್ಳಿ, ಶಿವನಹಳ್ಳಿ, ಅಗ್ರಹಾರ ದಾಸರಹಳ್ಳಿ ಮತ್ತು ಪೊಲೀಸ್ ಕಾಲೋನಿ ಸರ್ಕಾರಿ ಪ್ರೌಢಶಾಲೆಯ ಸುಮಾರು 700 ವಿದ್ಯಾರ್ಥಿಗಳು `ಜನನಿ ಜನ್ಮ ಭೂಮಿ~ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಿದರು. ಮಂಜುಳಾ ಪರಮೇಶ್ ಅವರ ನೇತೃತ್ವದಲ್ಲಿ ತರಬೇತುಗೊಂಡ ಮಕ್ಕಳು ರಾಷ್ಟ್ರಧ್ವಜಗಳನ್ನು ಹಿಡಿದು ಮೈದಾನದೊಳಕ್ಕೆ, ಜೊತೆಗೆ ನೋಡುಗರ ಮನಸ್ಸಿನೊಳಕ್ಕೂ ಲಗ್ಗೆ ಇಟ್ಟರು. ಯಕ್ಷಗಾನ, ನವಿಲು ಕುಣಿತಗಳನ್ನು ಬಳಸಿಕೊಂಡ ಅದ್ಭುತ ನೃತ್ಯ ರೂಪಕ ಇದಾಗಿತ್ತು. ಗುರಪ್ಪನಪಾಳ್ಯದ ಮದರ್ ಲ್ಯಾಂಡ್ ಆಂಗ್ಲ ಶಾಲೆ ಹಾಗೂ ಬನ್ನೇರುಘಟ್ಟ ರಸ್ತೆಯ ಎನ್‌ವಿಎನ್ ವಿದ್ಯಾಮಂದಿರದ 725 ಮಕ್ಕಳು `ಜೈ ಹಿಂದ್~ ನೃತ್ಯ ರೂಪಕ ಪ್ರದರ್ಶಿಸಿದರು.ಸೌಂದರ್ಯ ಪ್ರೌಢಶಾಲೆಯ 700 ವಿದ್ಯಾರ್ಥಿಗಳು ಯಕ್ಷಗಾನ, ಪಂಜಾಬಿ, ಮಣಿಪುರಿ, ಭರತನಾಟ್ಯ ನೃತ್ಯ ಪ್ರಕಾರಗಳನ್ನು ಬಳಸಿಕೊಂಡು ವಿವಿಧ ಹಾಡುಗಳ ತುಣುಕುಗಳನ್ನು ಕಟ್ಟಿ ಅಪೂರ್ವ ನೃತ್ಯ ಮಾಲೆಯಾಗಿಸಿದರು. ತರುಣ್ ಮತ್ತು ತಂಡ ತರಬೇತುಗೊಳಿಸಿದ `ನಾವೆಲ್ಲರೂ ಒಂದೇ~ ನೃತ್ಯ ರೂಪಕ ನೋಡುಗರೂ ಎದ್ದು ನಿಂತು ಹಾಡಿಗೆ ಹೆಜ್ಜೆ ಹಾಕುವಂತೆ ಮಾಡಿತು. ಎಲ್ಲಾ ನೃತ್ಯ ರೂಪಕಗಳೂ ಮೈದಾನದಲ್ಲಿ ಸೇರಿದ್ದ ಜನರ ರಾಷ್ಟ್ರಭಕ್ತಿಯನ್ನು ಉದ್ದೀಪಿಸುವಂತಿದ್ದವು. `ನಾವೆಲ್ಲರೂ ಒಂದೇ~, `ಜನನಿ ಜನ್ಮ ಭೂಮಿ~ ಮತ್ತು `ಜೈ ಹಿಂದ್~ ನೃತ್ಯ ರೂಪಕಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸಾಂಸ್ಕೃತಿಕ ಬಹುಮಾನಗಳು ಸಂದವು.ಹಮ್ ಸಬ್ ಭಾರತೀಯ ಹೈಂ...

ಬೆಂಗಳೂರು: `ರಾಜ್ಯ ಯಾವುದಾದರೇನು ದೇಶ ಒಂದೇ. ಎಲ್ಲಿಯೇ ಬದುಕಿದರೂ, ಎಲ್ಲಿಯೇ ಸತ್ತರೂ ನಾವೆಲ್ಲರೂ ಭಾರತೀಯರೇ...~ಗುರುವಾರ ಪೆರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವವನ್ನು ಕಣ್ತುಂಬಿಕೊಂಡ ಬಿಹಾರದ ಲಾಜೂ ಹೆಮ್ಮೆಯಿಂದ ಹೇಳಿದ ಮಾತುಗಳಿವು.ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿರುವ ಲಾಜೂ ತಪ್ಪದೇ ಪ್ರತಿವರ್ಷವೂ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಗಳ ಸಂದರ್ಭದಲ್ಲಿ ಭಾಗವಹಿಸುತ್ತಿರುವುದಾಗಿ ಅಭಿಮಾನದಿಂದ ನುಡಿಯುತ್ತಾನೆ.`ಶಾಲಾ ದಿನಗಳಲ್ಲಿ ದಿನಾಚರಣೆಗಳ ಸಂದರ್ಭದಲ್ಲಿ ಕೊಡುತ್ತಿದ್ದ ಸಿಹಿಯ ನೆನಪು ಇನ್ನೂ ಮಾಸಿಲ್ಲ. ಸ್ವಂತ ನೆಲದಿಂದ ದೂರಾದ ಭಾವನೆ ಮೂಡಿದಾಗೆಲ್ಲ ದಿನಾಚರಣೆಗಳು ಭಾರತೀಯತೆಯ ಭಾವವನ್ನು ನೆನಪಿಸಿ ನನ್ನ ಅನಾಥ ಪ್ರಜ್ಞೆಯನ್ನು ದೂರಮಾಡುತ್ತವೆ~ ಎನ್ನುತ್ತಾನೆ ಲಾಜೂ.`ವರ್ಣಮಯ ನೃತ್ಯಗಳು ಇಷ್ಟವಾದವು. ಭಾರತೀಯರು ಅತಿ ಭಾವುಕರು ಎಂದು ಮಾತ್ರ ತಿಳಿದಿದ್ದೆ. ಇಲ್ಲಿಗೆ ಬಂದ ಮೇಲೆ ಅಪಾರ ದೇಶಾಭಿಮಾನಿಗಳೂ ಕೂಡಾ ಎಂಬುದು ತಿಳಿಯಿತು. ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜದ ಬಗ್ಗೆ ಅಪಾರ ಭಕ್ತಿ ಭಾರತೀಯರಲ್ಲಿದೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೇನೆ. ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದು ಖುಷಿ ತಂದಿದೆ~ ಎಂಬುದು ಆಸ್ಟ್ರೇಲಿಯಾದ ಪ್ರವಾಸಿ ಫೆಡ್ರಿಕ್ ಮಾತು.ಸಾಮಾನ್ಯ ಪ್ರವೇಶ ದ್ವಾರದ ಮೂಲಕ ಬಂದ ಅನ್ಯ ರಾಜ್ಯ ಹಾಗೂ ಅನ್ಯ ದೇಶದ ಅದೆಷ್ಟೋ ಜನರು 63 ನೇ ಗಣರಾಜ್ಯೋತ್ಸವದ ಆಚರಣೆಯಲ್ಲಿ ಭಾಗಿಗಳಾದರು.

ಪ್ರತಿಕ್ರಿಯಿಸಿ (+)