ಭಾನುವಾರ, ಜನವರಿ 19, 2020
20 °C

ಗಣತಿ ಕಾರ್ಯಕ್ಕೆ ಸಹಕರಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ದೇಶದ ಬಡಜನರ ಜೀವನ ಮಟ್ಟ ಸುಧಾರಿಸಬೇಕು ಎಂಬ ಮಹಾತ್ವಾಕಾಂಕ್ಷೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಹಮ್ಮಿಕೊಂಡಿರುವ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಕಾರ್ಯಕ್ರಮಕ್ಕೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಎಂ.ಸಿ.ನಾಣಯ್ಯ, ನಗರಸಭೆ ಅಧ್ಯಕ್ಷರಾದ ಎಚ್.ಎಂ.ನಂದಕುಮಾರ್, ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ, ನಗರಸಭೆ ಆಯುಕ್ತ ಶಶಿಕುಮಾರ್. ಇತರರು ಚಾಲನೆ ನೀಡಿದರು.ಏನಿದರ ಮಹತ್ವ?: ದೇಶದಾದ್ಯಂತ ಪ್ರತಿಯೊಂದು ಕುಟುಂಬಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ಬೆಂಬಲದೊಂದಿಗೆ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯನ್ನು ನಡೆಸಲು ನಿರ್ಧರಿಸಲಾಗಿದೆ.ಸರ್ಕಾರದ ಯೋಜನೆಗಳ ಫಲಶ್ರುತಿ ತಿಳಿಯಲು, ಗ್ರಾಮೀಣಾಭಿವದ್ಧಿಗಾಗಿ ಹೊಸ ನೀತಿ, ಯೋಜನೆಗಳನ್ನು ರೂಪಿಸಲು ಸಹಾಯಕವಾಗುವ ಇಂತಹ ಗಣತಿಯು ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ.ಮಾಹಿತಿ ಸಂಗ್ರಹಿಸುವ ವಿಧಾನಕಂದಾಯ ಅಧಿಕಾರಿಗಳು ಪ್ರತಿ ಮನೆಗಳಿಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸುವರು. ಮಾಹಿತಿಯನ್ನು ವಿದ್ಯುನ್ಮಾನ ಯಂತ್ರದಲ್ಲಿ ಅಳವಡಿಸಲು ಡಾಟಾ ಎಂಟ್ರಿ ಆಪರೇಟರ್‌ಗಳು ಸಹ ಅವರೊಂದಿಗೆ ಇರುತ್ತಾರೆ. ಮಾಹಿತಿ ಸಂಗ್ರಹಿಸಿದ ನಂತರ ಮಾಹಿತಿ ನೀಡಿದವರಿಗೆ ಅದನ್ನು ಓದಿ ಹೇಳಿ ಅವರ ಒಪ್ಪಿಗೆ ಪಡೆಯಲಾಗುವುದು. ಒಮ್ಮೆ ಅಳವಡಿಸಿದ ಮಾಹಿತಿಯನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.ಪ್ರತಿ ಕುಟುಂಬಕ್ಕೆ ಸಂಬಂಧಿಸಿದಂತೆ ಪ್ರತಿ ವ್ಯಕ್ತಿಯ ವೈಯಕ್ತಿಕ ವಿವರಗಳು, ಆರ್ಥಿಕ ಸ್ಥಿತಿಗತಿ, ವಸತಿ, ನಿವಾಸಕ್ಕೆ ಸಂಬಂಧಪಟ್ಟ ಮಾಹಿತಿ, ಧರ್ಮ, ಜಾತಿ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುವುದು. ವಿವಾಹ ವಿಚ್ಚೇದನ ಪಡೆದವರು, ವಿಧವೆಯರು, ಅವಿವಾಹಿತರು, ಅಂಗವಿಕಲರು, ಮಾನಸಿಕ ಅಸ್ವಸ್ಥರು, ಮಹಿಳೆಯರು ಕೂಡ ಪ್ರತ್ಯೇಕ ಕುಟುಂಬವೆಂದು ಘೋಷಿಸಿಕೊಳ್ಳಬಹುದು.ಗಣತಿ ಸಮಯದಲ್ಲಿ ದಾಖಲಿಸಲಾದ ಮಾಹಿತಿಯ ಬಗ್ಗೆ ಮಾಹಿತಿ ನೀಡಿದವರಿಗೆ ತಿಳಿಸಿ ಅವರಿಂದ ಸಹಿಯನ್ನು ಪಡೆದು ಸ್ವೀಕೃತಿ ಪ್ರತಿಯನ್ನು ನೀಡಲಾಗುವುದು. ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಸಾರ್ವಜನಿಕವಾಗಿ (ಧರ್ಮ, ಜಾತಿ, ಪಂಗಡ ಮಾಹಿತಿಯನ್ನು ಹೊರತುಪಡಿಸಿ) ಬಹಿರಂಗಪಡಿಸುವುದರ ಬಗ್ಗೆ ಮಾಹಿತಿದಾರರ ಒಪ್ಪಿಗೆಯನ್ನು ಕೇಳಲಾಗುವುದು. ಒಪ್ಪಿದಲ್ಲಿ ಈ ಮಾಹಿತಿಯನ್ನು ಸಾರ್ವಜನಿವಾಗಿ ಪ್ರಕಟಿಸಲಾಗುವುದು.ಮಾಹಿತಿ ನೀಡಲು ಒಪ್ಪಿಗೆ ಕೊಡದಿದ್ದಲ್ಲಿ ಸರಕಾರದ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಯಾವುದೇ ಪ್ರಯೋಜನ ಪಡೆಯಲು ಪರಿಗಣಿಸಲಾಗುವುದಿಲ್ಲ. ಇದರಲ್ಲಿ ವ್ಯತ್ಯಾಸಗಳಿದ್ದಲ್ಲಿ ಕರಡು ಪಟ್ಟಿ ಪ್ರಕಟಣೆಯಾದ 21 ದಿನದೊಳಗೆ ಕ್ಲೇಮುಗಳನ್ನು ಸರ್ಕಾರದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೇಮಿಸಲ್ಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು.ನಂತರ ಗ್ರಾಮ ಸಭೆಯಲ್ಲಿ ಮಂಡಿಸಿ ಸಭೆಯಲ್ಲಿ ವ್ಯಕ್ತವಾಗುವ ಎಲ್ಲಾ ಅಭಿಪ್ರಾಯಗಳನ್ನು  ದಾಖಲಿಸಿ ಪ್ರತ್ಯೇಕವಾಗಿ ಕ್ಲೇಮುಗಳನ್ನು ಪರಿಶೀಲಿಸಲಾಗುವುದು.ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಕಾರ್ಯವು 40 ದಿನಗಳ ಕಾಲ ನಿರಂತರವಾಗಿ ನಡೆಯಲಿದೆ. ಮಾಹಿತಿ ಸಂಗ್ರಹಿಸಿದ ವೇಳೆ ನಿಖರತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ನ್ಯಾಯ ಸಮ್ಮತ ಪ್ರಕ್ರಿಯೆಗಾಗಿ ಸಾರ್ವಜನಿಕರ ಸಹಕಾರ ಅಗತ್ಯವಿರುವುದರಿಂದ ಗಣತಿ ಸಮಯದಲ್ಲಿ ಗಣತಿದಾರರು, ಡಾಟಾ ಎಂಟ್ರಿ ಆಪರೇಟರ್‌ಗಳು ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾಡಳಿತ ಕೋರಿದೆ.

ಪ್ರತಿಕ್ರಿಯಿಸಿ (+)