ಗಣಪತಿ ಜಾತ್ರೆ: ಮಂದಿರಕ್ಕೆ ವಿದ್ಯುದ್ದೀಪಾಲಂಕಾರ

7

ಗಣಪತಿ ಜಾತ್ರೆ: ಮಂದಿರಕ್ಕೆ ವಿದ್ಯುದ್ದೀಪಾಲಂಕಾರ

Published:
Updated:

ಕುಶಾಲನಗರ: ಗಣಪತಿ ದೇವಸ್ಥಾನ ಸಮಿತಿ ವತಿಯಿಂದ ಗಣಪತಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಇಲ್ಲಿಯ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜನರನ್ನು ಆಕರ್ಷಿಸಿತು.ಸೋಮವಾರ ಸ್ಥಳೀಯ ಕಲಾವಿದರು ನಡೆಸಿಕೊಟ್ಟ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಗೀತ ಕಲಾ ಕೇಂದ್ರದದವರು ನಡೆಸಿಕೊಟ್ಟ ಕೀರ್ತನ ಕಾವೇರಿ ವೈಭವಂ ನೃತ್ಯ ರೂಪಕ ಪ್ರೇಕ್ಷಕರ ಮನಸೂರೆಗೊಂಡಿತು.ಮಂಗಳವಾರ ಸಾರ್ವಜನಿಕರಿಗೆ ಏರ್ಪಡಿಸಿದ್ದ ಅಂತ್ಯಾಕ್ಷರಿ ಅಕ್ಷರಮಾಲೆ ರಂಜಿಸಿತು. ಸೋಮವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ದೇವಸ್ಥಾನ ಸಮಿತಿಯ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಕಲೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿವೆ ಎಂದರು.ಸಾಂಸ್ಕೃತಿಕ ಸಮಿತಿ ಸಂಚಾಲಕ ಬಿ.ಎಸ್.ಲೋಕೇಶ್‌ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ನಿರ್ದೇಶಕ ಡಿ.ಅಪ್ಪಣ್ಣ, ವಿದ್ವಾನ್ ಬಿ.ಸಿ.ಶಂಕರಯ್ಯ, ವಾಣಿಜ್ಯೋದ್ಯಮಿ ಜನಾರ್ಧನ ಹತ್ವಾರ್ ಇದ್ದರು.ಇದೇ ಮೊದಲ ಬಾರಿಗೆ ಬೃಹತ್ ಮಾದರಿಯಲ್ಲಿ ಏರ್ಪಡಿಸಿರುವ ಜಾತ್ರೆಯಲ್ಲಿ ವಸ್ತು ಪ್ರದರ್ಶನ, ಮನೋರಂಜನಾ ಕಾರ್ಯಕ್ರಮಗಳು, ವಿವಿಧ ಮಾದರಿಯ ಅಂಗಡಿಗಳು, ತಿಂಡಿ ತಿನಿಸುಗಳು, ಜಾದೂ ಪ್ರದರ್ಶನ, ಮಕ್ಕಳಿಗೆ ಮನೋರಂಜನೆ ನೀಡುವ ಜಾಯಿಂಟ್ ವ್ಹೆಲ್, ಕೋಲಂಬಸ್, ವಿವಿಧ ಬಗೆಯ ವಿನೋದದ ಆಟಿಕೆಗಳು, ಪುಟಾಣಿ ರೈಲು, ಬೈಕ್ ಮತ್ತು ಕಾರು ಸರ್ಕಸ್, ವಿವಿಧ ಬಗೆಯ ಸಾಹಸ ಪ್ರದರ್ಶನ ಹಾಗೂ ವಸ್ತುಪ್ರದರ್ಶನ ಇತ್ಯಾದಿ ಪ್ರದರ್ಶನಗಳು ಜನರನ್ನು ಆಕರ್ಷಿಸುತ್ತಿವೆ.ಗಣಪತಿ ದೇವಸ್ಥಾನವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಬುಧವಾರ ಧರ್ಮಗುರುಗಳಿಂದ ಸರ್ವಧರ್ಮದ ಕುರಿತು ಧಾರ್ಮಿಕ ಪ್ರವಚನ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry