ಶನಿವಾರ, ಜನವರಿ 25, 2020
28 °C

ಗಣರಾಜ್ಯೋತ್ಸವ: ಅಧಿಕಾರಿ, ಸಿಬ್ಬಂದಿ ಗೈರು ವಿರುದ್ಧ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ರಾಷ್ಟ್ರೀಯ ಹಬ್ಬಗಳಿಗೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಅವರ ಸಿಬ್ಬಂದಿ ಗೈರು ಹಾಜರಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದ್ದು, ಈ ಬಾರಿಯ ಉತ್ಸವಕ್ಕೆ ಗೈರು ಹಾಜರಾಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಎಚ್ಚರಿಸಿದರು.ತಾಲ್ಲೂಕು ಕಚೇರಿಯಲ್ಲಿ ಬುಧವಾರ ಗಣರಾಜ್ಯೋತ್ಸವ  ಆಚರಣೆಗೆ ಸಂಬಂಧ  ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಬಾರಿ ಗಣರಾಜ್ಯೋತ್ಸವ ದಿನ ಎಲ್ಲ ಇಲಾಖೆಗಳ ಹಾಜರಾತಿ ಪುಸ್ತಕ ತರುವಂತೆ ಸೂಚಿಸಲಾಗುವುದು. ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಇದಕ್ಕೆ ಅವಕಾಶ ಕೊಡದೆ ರಾಷ್ಟ್ರೀಯ ಉತ್ಸವದಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು ಎಂದು ಅವರು ಸಲಹೆ ಮಾಡಿದರು.ಜ. 26ರಂದು ಬೆಳಿಗ್ಗೆ 8.45ಕ್ಕೆ ನಿಯಮದಂತೆ ಧ್ವಜಾರೋಹಣ ನೆರವೇರಲಿದೆ. ಶಾಸಕ ಡಿ. ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ದೇಶಭಕ್ತಿ ಬಿಂಬಿಸುವ ಐದು ನೃತ್ಯ ಕಾರ್ಯಕ್ರಮ ನಡೆಸಲಾಗುತ್ತದೆ. ಕರಾಟೆ ಪಟು ರಂಗಸ್ವಾಮಿ, ಬಾಲ ಪ್ರತಿಭೆ ನಿಶಾಂತ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಕೆ. ತಿಪ್ಪೇಸ್ವಾಮಿ, ಮತ್ತು ಜುಂಜಪ್ಪ, ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಂಡು ಬಂದಿರುವ ಮ್ಯಾಕ್ಲೂರಹಳ್ಳಿಯ ಬಿ. ಸುಮಾ, ರಾಷ್ಟ್ರೀಯ ಉತ್ಸವಗಳಲ್ಲಿ ಮಹಾತ್ಮ ಗಾಂಧೀಜಿ ವೇಷಧರಿಸಿ ಗಮನ ಸೆಳೆಯುವ ಕರಿಯಣ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ತಿಪ್ಪೇಸ್ವಾಮಿ ವಿವರಿಸಿದರು.ಪುರಸಭಾ ಸದಸ್ಯ ಜಿ. ಧನಂಜಯಕುಮಾರ್ ಮಾತನಾಡಿ, ಶಾಲಾ ಮಕ್ಕಳಿಗೆ ಪಠ್ಯವಾಗಿರುವ ಗೌತಮ ಬುದ್ಧನ ಕತೆ ಇರುವ ಮನಪರಿವರ್ತನೆ ನಾಟಕವನ್ನು ಗಣ ರಾಜ್ಯೋತ್ಸವದ ಸಂಜೆ ಪ್ರದರ್ಶಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದಾಗ, ತಹಶೀಲ್ದಾರ್ ಒಪ್ಪಿಗೆ ಸೂಚಿಸಿದರು. ಪುರಸಭೆ ಮುಖ್ಯಾಧಿಕಾರಿ ಚಂದ್ರಶೇಖರಪ್ಪ ಮತ್ತಿತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)