ಶುಕ್ರವಾರ, ಡಿಸೆಂಬರ್ 6, 2019
19 °C

ಗಣರಾಜ್ಯೋತ್ಸವ ಸಿದ್ಧತೆ: 10 ಸಾವಿರ ಆಸನ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣರಾಜ್ಯೋತ್ಸವ ಸಿದ್ಧತೆ: 10 ಸಾವಿರ ಆಸನ ವ್ಯವಸ್ಥೆ

ಬೆಂಗಳೂರು: ನಗರದ ಮಾಣೆಕ್ ಶಾ ಪೆರೇಡ್ ಮೈದಾನದಲ್ಲಿ ಗುರುವಾರ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಭಾರಿ ಭದ್ರತೆ ಏರ್ಪಡಿಸಲಾಗಿದ್ದು, 50 ತುಕಡಿಗಳು ಪಥ ಸಂಚಲನ ನಡೆಸಲಿವೆ.ಮೈದಾನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ, `ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭದಲ್ಲಿ ಗಣ್ಯರು ಹಾಗೂ ಸಾರ್ವಜನಿಕರಿಗೆ ಒಟ್ಟು 10,000 ಆಸನ ವ್ಯವಸ್ಥೆ ಮಾಡಲಾಗಿದೆ~ ಎಂದರು.`ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ, ಸೇವಾದಳದ ವತಿಯಿಂದ ಪಥ ಸಂಚಲನ ನಡೆಯಲಿದೆ. ವಿವಿಧ ಶಾಲೆಗಳ ಸುಮಾರು 1,500 ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ~ ಎಂದು ಮಾಹಿತಿ ನೀಡಿದರು.`ಬೆಳಿಗ್ಗೆ 9ಕ್ಕೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಗೌರವ ರಕ್ಷೆ ಸ್ವೀಕರಿಸಿ ನಂತರ ರಾಜ್ಯಪಾಲರು, ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ. ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 2,100 ಮಕ್ಕಳು ಭಾಗವಹಿಸಲಿದ್ದಾರೆ~ ಎಂದು ತಿಳಿಸಿದರು.`ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸಿದರೆ ತಕ್ಷಣ ತುರ್ತು ಸೇವೆಗೆಂದು 12 ಅಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. 50  ವೈದ್ಯರು ಮತ್ತು 100 ಮಂದಿ ಶುಶ್ರೂಕಿಯರನ್ನು ನೇಮಿಸಲಾಗಿದೆ. ಮೈದಾನದ ಸುತ್ತಮುತ್ತಲಿನ 25 ಆಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ 1,200 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ~ ಎಂದು ಹೇಳಿದರು.ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ, `ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಆಯಕಟ್ಟಿನ ಭಾಗಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೈದಾನದ ಸುತ್ತ 1,500 ಪೊಲೀಸರನ್ನು ನಿಯೋಜಿಸಲಾಗುವುದು. ಸುಮಾರು 500 ಹಿರಿಯ ಅಧಿಕಾರಿಗಳು ಇದರ ಮೇಲ್ವಿಚಾರಣೆ ನಡೆಸಲಿದ್ದಾರೆ~ ಎಂದು ವಿವರಿಸಿದರು.ರಾಜಭವನ ರಸ್ತೆಯ ಜಿ 1 ದ್ವಾರದ ಮೂಲಕ  ಗಣ್ಯವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ ಇದೇ ರಸ್ತೆಯ ಜಿ 2 ಮೂಲಕ ಅತಿಗಣ್ಯ ವ್ಯಕ್ತಿಗಳಿಗೆ, ಕಾಮರಾಜರಸ್ತೆಯ ಜಿ 3 ದ್ವಾರದ ಮೂಲಕ ನಿವೃತ್ತ ಸೇನಾಧಿಕಾರಿಗಳು ಹಾಗೂ ಬಿಎಸ್‌ಎಫ್ ಅಧಿಕಾರಿಗಳು ಮತ್ತು ಇದೇ ರಸ್ತೆಯ ಜಿ 4 ದ್ವಾರದ ಮೂಲಕ ಸಾರ್ವಜನಿಕರು ಪ್ರವೇಶಿಸಬಹುದು.ಸಾರ್ವಜನಿಕರು ಸಮಾರಂಭ ಆರಂಭವಾಗುವ ಅರ್ಧ ಗಂಟೆ ಮೊದಲು ಅಂದರೆ 8.30 ಕ್ಕೆ ಆಸೀನರಾಗಿರಬೇಕು. ಸಾರ್ವಜನಿಕರು ಯಾವುದೇ ಕೈಚೀಲ ಅಥವಾ ಪ್ಲಾಸ್ಟಿಕ್ ಚೀಲಗಳನ್ನು ತರುವಂತಿಲ್ಲ. ಪಾಸ್ ಇರುವವರಿಗೆ ಮಾತ್ರ ಆಸನ ವ್ಯವಸ್ಥೆಯಿರುತ್ತದೆ.

 

ಪ್ರತಿಕ್ರಿಯಿಸಿ (+)