ಸೋಮವಾರ, ಡಿಸೆಂಬರ್ 16, 2019
26 °C

ಗಣವೇಷ ತೊಟ್ಟ ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣವೇಷ ತೊಟ್ಟ ಮುಖ್ಯಮಂತ್ರಿ

ಹುಬ್ಬಳ್ಳಿ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ನಗರದಲ್ಲಿ ಶುಕ್ರವಾರ ನಡೆದ ಆರ್‌ಎಸ್‌ಎಸ್ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಗಣವೇಷಧಾರಿಗಳಾಗಿ ಪಾಲ್ಗೊಂಡರು. ಮುಖ್ಯಮಂತ್ರಿಗಳ ಜತೆಯಲ್ಲಿ ಸಚಿವರಾದ ಜಗದೀಶ ಶೆಟ್ಟರ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರಾದ ಪ್ರಹ್ಲಾದ ಜೋಶಿ, ಅನಂತಕುಮಾರ ಹೆಗಡೆ ಸಹ ಗಣವೇಷಧಾರಿಗಳಾಗಿ ಶಿಬಿರದಲ್ಲಿ ಭಾಗವಹಿಸಿದ್ದರು.ಉದ್ಘಾಟನಾ ಸಮಾರಂಭಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಹೆಲಿಕಾಪ್ಟರ್ ಮೂಲಕ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಳಿಕ ಲಘು ವಿಶ್ರಾಂತಿ ಪಡೆಯಲು ವಿಐಪಿ ಲಾಂಜ್‌ಗೆ ತೆರಳಿದರು. ಅಲ್ಲಿಂದ ವಾಪಸ್ಸಾದಾಗ ಅವರು ಗಣವೇಷಧಾರಿಗಳಾಗಿದ್ದರು. ಆದರೆ, ಜತೆಯಲ್ಲೇ ಬಂದಿದ್ದ ಸಚಿವ ಎಸ್.ಸುರೇಶಕುಮಾರ್ ಮಾತ್ರ ಮಾಮೂಲಿ ಉಡುಪಿನಲ್ಲಿದ್ದರು.ವಿಮಾನ ನಿಲ್ದಾಣದಿಂದ ನೇರವಾಗಿ ಶಿಬಿರಕ್ಕೆ ತೆರಳಿದ ಸದಾನಂದಗೌಡ, ಸಂಘದ ಪ್ರಮುಖರನ್ನು ಭೇಟಿ ಮಾಡಿದರು. ನಂತರ ವೇದಿಕೆ ಕೆಳಭಾಗದಲ್ಲಿ ಹಾಕಲಾಗಿದ್ದ ಕುರ್ಚಿಯಲ್ಲಿ ಕುಳಿತು ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಿದರು.

 

ಧ್ವಜವಂದನೆ ಸಲ್ಲಿಸಿದ್ದಲ್ಲದೆ ಸಂಘ ಗೀತೆಯನ್ನೂ ಹಾಡಿದರು. ಹೊರಗಡೆ ಮುಖ್ಯಮಂತ್ರಿಗಳನ್ನು ನೋಡಲು ಜನ ಮುಗಿಬಿದ್ದರೆ, ಶಿಬಿರದ ಒಳಗಡೆ ಮುಖ್ಯಮಂತ್ರಿಗಳೇ ಮುಂದಾಗಿ ಹಿರಿಯ ಸ್ವಯಂಸೇವಕರ ಹತ್ತಿರ ಹೋಗಿ ಮಾತನಾಡಿಸಿದರು.ಉದ್ಘಾಟನಾ ಸಮಾರಂಭ ಮುಗಿದ ನಂತರ ಡೇರೆಗಳಿಗೆ ಭೇಟಿ ನೀಡಿದರು. ಅಲ್ಲಿಂದ ಪ್ರದರ್ಶಿನಿಗೆ ಭೇಟಿ ನೀಡಿದ ಅವರು, ಅಲ್ಲಿಯ ನುಡಿಚಿತ್ರಗಳನ್ನು ವೀಕ್ಷಿಸಿದರು. `ಈ ದಿನ ಶಿಬಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಒಂದು ಅದ್ಭುತ ಭಾರತ ದರ್ಶನವನ್ನು ಕಂಡೆ. ಸಾವಿರಾರು ವರ್ಷಗಳ ಚರಿತ್ರೆಯ ಮೂಲರೂಪ, ಮುಂದಿನ ಭವಿಷ್ಯದ ಕಲ್ಪನೆ, ಯುವಕರಿಗೆ ದೇಶಭಕ್ತಿಯ ಸ್ಫೂರ್ತಿ ಇವು ಅದ್ಭುತ~ ಎಂದು ಅವರು ಸಂದರ್ಶಕರ ಪುಸ್ತಕದಲ್ಲಿ ಬರೆದರು.`ನಾವೆಲ್ಲ ದೇಶಭಕ್ತ ವ್ಯಕ್ತಿಗಳಾಗೋಣ, ಸಮಾಜಕ್ಕೆ ಶಕ್ತಿಯಾಗೋಣ~ ಎಂದೂ ಅವರು ಆ ಪುಸ್ತಕದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)