ಗಣಾಧ್ಯಕ್ಷಾಯ ಧೀಮಹೆ...

7

ಗಣಾಧ್ಯಕ್ಷಾಯ ಧೀಮಹೆ...

Published:
Updated:

ಶಿರಸಿ: ಸಾಮರಸ್ಯದ ಪ್ರತೀಕವಾದ ಹಿಂದುಗಳ ಪವಿತ್ರ ಹಬ್ಬ ಗಣೇಶ ಚೌತಿಯನ್ನು ತಾಲ್ಲೂಕಿನಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು. ಭಾನುವಾರ ಗೌರಮ್ಮನನ್ನು ಮನೆಗೆ ಕರೆ ತರುವ ಮೂಲಕ ಪ್ರಾರಂಭವಾದ ಹಬ್ಬ, ಮರುದಿನ ಗಣೇಶನನ್ನು ಪೂಜಿಸಿ, ಮಂಗಳವಾರ ಗೌರಿಯನ್ನು ಮನೆಗೆ ಕಳುಹಿಸುವದರೊಂದಿಗೆ ಸಂಪನ್ನಗೊಂಡಿತು. ಇನ್ನೇನಿದ್ದರೂ ಪೇಟೆಯ ಸಾರ್ವಜನಿಕ ಗಣಪತಿ ವೀಕ್ಷಣೆಗೆ ಬರುವ ಸಂಭ್ರಮ.ಗಣೇಶ ಹಬ್ಬವೆಂದರೆ ಇತರ ಹಬ್ಬಗಳಂತೆ ಅಲ್ಲ. ಒಂದು ವಾರದ ಮೊದಲೇ ಗಣಪನಿಗೆ ಪ್ರಿಯವಾದ ಚಕ್ಕುಲಿ, ವಡೆ, ಅತ್ರಾಸ ಇನ್ನಿತರ ಖಾದ್ಯಗಳನ್ನು ಮಹಿಳೆಯರು ಸಿದ್ಧಪಡಿಸುತ್ತಾರೆ. ಹಬ್ಬದ ದಿನ ಮೋದಕ, ಪಂಚಕಜ್ಜಾಯವನ್ನು ವಿಘ್ನವಿನಾಶಕನಿಗೆ ನೈವೇದ್ಯ ಮಾಡುತ್ತಾರೆ. ಗ್ರಾಮೀಣ ಜನರಿಗೆ ಚವತಿ ಹಬ್ಬವೆಂದರೆ ಹೆಚ್ಚು ವಿಶೇಷ. ಉದ್ಯೋಗಕ್ಕೆಂದು ಮಹಾನಗರಗಳಿಗೆ ಹೋದವರು ಸಹ ಚವತಿ ಹಬ್ಬವನ್ನು ಮಿಸ್‌ಮಾಡಿಕೊಳ್ಳುವುದಿಲ್ಲ.ಕುಟುಂಬದ ಎಲ್ಲ ಸದಸ್ಯರನ್ನು, ಸಮಾಜದ ಎಲ್ಲ ವಗರ್ದವರನ್ನು ಒಂದೆಡೆ ಸೇರಿಸುವ ಹಬ್ಬ ಗಣೇಶ ಚೌತಿ. ಯುವಕರು, ಮುದುಕರು, ಮಕ್ಕಳು ಎಲ್ಲ ಸಮುದಾಯದವರು ಬೇಧ–ಭಾವವಿಲ್ಲದೆ ಸಾರ್ವಜನಿಕ ಗಣೇಶ ಮಂಟಪ ಸಿದ್ಧಪಡಿಸಲು ದುಡಿಯುತ್ತಾರೆ. ತಾಲ್ಲೂಕಿನ ಗ್ರಾಮೀಣ ಹಾಗೂ ನಗರದ ಪ್ರದೇಶಗಳಲ್ಲಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.ಮನೆಗಳಲ್ಲಿ ಗಣಪತಿ ಪೂಜಿಸುವ ಬಹುತೇಕ ಕಡೆಗಳಲ್ಲಿ ಮಂಗಳವಾರ ಋಷಿ ಪಂಚಮಿಯಂದು ವಿಸರ್ಜಿಸುವ ಪದ್ಧತಿಯಿದೆ. ಹಳ್ಳಿಯಲ್ಲಿ ಹಬ್ಬ ಮುಗಿಸಿದ ಗ್ರಾಮೀಣ ಜನರು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ವೀಕ್ಷಣೆಗೆ ಬರುತ್ತಾರೆ. ಹೀಗಾಗಿ ಹಬ್ಬದ ನೈಜ ರಂಗು ಬುಧವಾರದಿಂದ ಶುರುವಾಗುತ್ತದೆ. ಗಣಪತಿ ಮಂಟಪದ ಪಕ್ಕದಲ್ಲಿ ವಿವಿಧ ದೃಶ್ಯಾವಳಿ ರೂಪಿಸಲಾಗಿದೆ. ಸಂಜೆಯಾಗುತ್ತಿದ್ದಂತೆ ದೃಶ್ಯಾವಳಿ ವೀಕ್ಷಣೆಗೆ ಹೋಗುವ ಜನರ ಸಂಭ್ರಮ ಹಬ್ಬಕ್ಕೆ ಇನ್ನಷ್ಟು ಕಳೆಕಟ್ಟುತ್ತದೆ.ನಗರದ ದೇವಿಕರೆ, ಮಾರ್ಕೆಟ್, ಝೂ ವೃತ್ತ, ಉಣ್ಣೇಮಠ ಗಲ್ಲಿ, ಕೆ.ಇ.ಬಿ, ಪೊಲೀಸ್‌ ಠಾಣೆ, ಬಸ್‌ ನಿಲ್ದಾಣ, ಆಟೋ ನಿಲ್ದಾಣ, ಅಶ್ವತ್ಥ ಕಟ್ಟೆ, ಕೋಟೆಕೆರೆ, ಮಾರಿಗುಡಿ, ಹನುಮಗಿರಿ ಇನ್ನಿತರ ಕಡೆಗಳಲ್ಲಿ ಆಕರ್ಷಕ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಶತಮಾನದ ಇತಿಹಾಸ ಹೊಂದಿರುವ ಇಲ್ಲಿನ ದೊಡ್ಡ ಗಣಪತಿ ದೇವಾಲಯಕ್ಕೆ ಸೋಮವಾರ ಹಾಗೂ ಮಂಗಳವಾರ ಸಹಸ್ರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.ಮಂಗಳವಾರ ಬೆಳಿಗ್ಗೆ ಒಂದೇಸವನೆ ಸುರಿದ ಮಳೆ ಸಾರ್ವಜನಿಕ ವಿನಾಯಕನನ್ನು ಪ್ರತಿಷ್ಠಾಪಿಸಿದ ಸಮಿತಿಗಳಿಗೆ ಆತಂಕ ಹುಟ್ಟಿಸಿದರೂ ಮಧ್ಯಾಹ್ನದ ನಂತರ ಮಳೆ ಬಿಡುವುಕೊಟ್ಟಿದೆ. ಆದರೆ ಮೋಡ ಕಟ್ಟಿದ ವಾತಾವರಣ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry