ಗಣಿಗಳ ಪುನಶ್ಚೇತನ:ಕೂಲಿ ಕಾರ್ಮಿಕರಿಗೆ ಆಸರೆ

7

ಗಣಿಗಳ ಪುನಶ್ಚೇತನ:ಕೂಲಿ ಕಾರ್ಮಿಕರಿಗೆ ಆಸರೆ

Published:
Updated:

ಬಳ್ಳಾರಿ: ಅಪಾರ ಪ್ರಮಾಣದ ಅದಿರು ಮತ್ತು ಮ್ಯಾಂಗನೀಸ್ ಸಂಪನ್ಮೂಲದ ಬೆಟ್ಟ- ಗುಡ್ಡಗಳಿಂದ ಆವೃತವಾಗಿರುವ ಆ ಗ್ರಾಮಗಳ ಬಹುತೇಕರಿಗೆ ಗಣಿಗಾರಿಕೆಯ ಮೇಲೆ ಪ್ರೀತಿ ಇದೆ. ಆದರೆ ಅಕ್ರಮವಾಗಿ, ನಿಯಮ ಬಾಹಿರವಾಗಿ ಗಣಿಗಾರಿಕೆ ನಡೆಸಿರುವುದು, ಅದನ್ನು ಅವೈಜ್ಞಾನಿಕವಾಗಿ ಸಾಗಣೆ ಮಾಡಿರುವ ಬಗ್ಗೆ ಕೋಪವೂ ಇದೆ.

ಜಿಲ್ಲೆಯ ಸಂಡೂರು ಮತ್ತು ಹೊಸಪೇಟೆ ತಾಲ್ಲೂಕುಗಳಲ್ಲಿರುವ ರಾಮಗಢ, ಸ್ವಾಮಿಮಲೆ, ರಾಮನಮಲೆ, ದೋಣಿಮಲೆ, ಭರತರಾಯನ ಹರಿವು, ಗುಂಡಾ ಅರಣ್ಯ ಪ್ರದೇಶಗಳಲ್ಲಿರುವ ಐವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ  ಒಂದೂವರೆ ವರ್ಷದಿಂದ ಗಣಿಗಾರಿಕೆಯೊಂದಿಗೇ ನಿಂತು ಹೋಗಿದ್ದ `ಉಪಜೀವನ'ವೆಂಬ ಗಡಿಯಾರ, ಇದೀಗ `ಗಣಿಗಾರಿಕೆ ಪುನಾರಂಭವಾಗಲಿದೆ' ಎಂಬ ಸೂಚನೆ ದೊರೆತ ತಕ್ಷಣ ಮತ್ತೆ `ಟಿಕ್ ಟಿಕ್' ಸದ್ದು ಮಾಡಲಾರಂಭಿಸಿದೆ.

ಗಣಿಗಳು ಸ್ಥಗಿತಗೊಂಡಿದ್ದರಿಂದ ಗಣಿಗಾರಿಕೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಪಡೆದು, ಅಷ್ಟಿಷ್ಟು ಹಣ ಸಂಪಾದಿಸಿದ್ದ ಕೂಲಿಕಾರರಿಗೆ `ಜೀವನ ನಿರ್ವಹಣೆಗೆ ಪರ್ಯಾಯ ಮಾರ್ಗ ಅನುಸರಿಸದೆ ವಿಧಿ ಇಲ್ಲ' ಎಂಬ ಸ್ಥಿತಿ ಇತ್ತು.

ಈಗ ಗಣಿ ಚಟುವಟಿಕೆಗೆ ಚಾಲನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಉದ್ಯೋಗದ ಭರವಸೆ ದೊರೆತಿದ್ದು, ಗಣಿಗಳ ಪುನಶ್ಚೇತನ ಮತ್ತು ಪುನರುಜ್ಜೀವನ (ಆರ್ ಅಂಡ್ ಆರ್) ಅನುಷ್ಠಾನ ಕಾರ್ಯಕ್ಕಾಗಿ ಕೂಲಿಕಾರರಿಗೆ ನಿತ್ಯವೂ ಕೆಲಸ ಸಿಗುವಂತಾಗಿದೆ.

ಒಂದು ಅಥವಾ ಎರಡು ಎಕರೆ ಕೃಷಿ ಭೂಮಿಯನ್ನೇ ನೆಚ್ಚಿಕೊಂಡು ಜೀವಿಸುತ್ತಿದ್ದ ಈ ಭಾಗದ ರೈತರು ಮತ್ತು ಕೃಷಿ ಕಾರ್ಮಿಕರು ಬರಗಾಲದಿಂದಾಗಿ ಕೃಷಿ ಕೈಕೊಟ್ಟ ಸಂದರ್ಭದಲ್ಲಿ ಆಸರೆಯಾಗಿದ್ದುದು ಗಣಿಗಳಲ್ಲಿ ಉದ್ಯೋಗ.

ಇಲ್ಲಿ ಮೊದಲಿನಿಂದಲೂ ಸಣ್ಣ ಪ್ರಮಾಣದಲ್ಲಿದ್ದ ಗಣಿಗಾರಿಕೆ, 2002ರಲ್ಲಿ ತಾರಕಕ್ಕೇರಿ, 2011ರ ವೇಳೆಗೆ ಒಮ್ಮೆಗೆ ಕುಸಿಯಿತು. ತಮ್ಮ ಜಮೀನಿನಲ್ಲಿ ದೊರೆಯುವ ಅದಿರನ್ನು ಹೊರ ತೆಗೆಯುವ ಸಲುವಾಗಿ  ಜಮೀನಿನಲ್ಲಿ ಹಳ್ಳ ತೋಡಿ, ಲಕ್ಷಾಂತರ ರೂಪಾಯಿ ಎಣಿಸಿದ್ದ ಅನೇಕರು, `ಅತ್ತ ಕೃಷಿಯೂ ಇಲ್ಲ, ಇತ್ತ ಗಣಿಯೂ ಇಲ್ಲ' ಎಂಬ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ಆರ್ ಅಂಡ್ ಅರ್ ಅನುಷ್ಠಾನ ಕಾರ್ಯ ಪೂರ್ಣಗೊಳಿಸಿರುವ ಸಂಡೂರು ತಾಲ್ಲೂಕಿನ ಎರಡು ಗಣಿಗಳಲ್ಲಿ ಗಣಿಗಾರಿಕೆ ಆರಂಭವಾಗಿದ್ದು, ಭುಜಂಗನಗರ, ತಾರಾನಗರ, ಯಶವಂತ ನಗರ, ರಣಜಿತ್‌ಪುರ, ಸುಶೀಲ ನಗರ, ರಾಮಗಢ, ಧರ್ಮಾಪುರ, ನಂದಿಹಳ್ಳಿ, ಸಿದ್ದಾಪುರ, ಜಯಸಿಂಗಪುರ, ಅಪ್ಪೇನಹಳ್ಳಿ, ಲಕ್ಷ್ಮೀಪುರ, ದೌಲತ್‌ಪುರ, ಮುರಾರಿಪುರ, ಉಬ್ಬಲಗುಂಡಿ- ರಾಜಾಪುರ, ಕಲ್ಲಹಳ್ಳಿ- ರಾಜಾಪುರ ಗ್ರಾಮಗಳ ಕೂಲಿ ಕಾರ್ಮಿಕರಿಗೆ ಸಂಡೂರು ಸುತ್ತಮುತ್ತಲಿರುವ 40ಕ್ಕೂ ಅಧಿಕ ಗಣಿಗಳಲ್ಲಿ ನಡೆದಿರುವ ಪುನಶ್ಚೇತನ ಅನುಷ್ಠಾನ ಕಾಮಗಾರಿಯಲ್ಲಿ ಕೆಲಸ ದೊರೆತಿದೆ.

ಚೆಕ್ ಡ್ಯಾಮ್‌ಗಳ ನಿರ್ಮಾಣ ಮತ್ತು ಸಸಿ ನೆಟ್ಟು ಅರಣ್ಯೀಕರಣಕ್ಕೆ ಚಾಲನೆ ನೀಡುವ ಕೆಲಸ ಪಡೆದಿರುವ ನೂರಾರು ಕಾರ್ಮಿಕರು ನಂತರದ ದಿನಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗವನ್ನೂ ಪಡೆಯಲಿದ್ದಾರೆ.ಗಣಿಗಾರಿಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿ, ಅದಿರು ಸಾಗಣೆ ಶುರುವಾದರೆ, ಲಾರಿಗಳ ಮಾಲೀಕರು, ಚಾಲಕರು, ಕ್ಲೀನರ್‌ಗಳು, ಜೆಸಿಬಿ, ಎಕ್ಸವೇಟರ್‌ಗಳ ಆಪರೇಟರ್‌ಗಳು, ಮೇಟಿಗಳು, ಸಸಿಗಳಿಗೆ ನೀರುಣಿಸುವವರು, ಅಡುಗೆ ಮಾಡುವವರು, ಕಾರ್ಮಿಕರ, ಅದಿರಿನ ಮತ್ತು ವಾಹನಗಳ ಲೆಕ್ಕ ಇಡುವ ಗುಮಾಸ್ತರು, ಭದ್ರತಾ ಸಿಬ್ಬಂದಿಗೆ ಕೆಲಸ ದೊರೆಯಲಿದೆ ಎಂದು ಧರ್ಮಾಪುರ ಗ್ರಾಮದ ಅಂಜಿನಪ್ಪ ಮತ್ತು ಉಜ್ಜಿನಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ಗಣಿಗಾರಿಕೆ ಸ್ಥಗಿತಗೊಂಡ ನಂತರ ಉದ್ಯೋಗ ಕಳೆದುಕೊಂಡವರೂ, ಹೊಸದಾಗಿ ಉದ್ಯೋಗ ಪಡೆಯುವವರಿಗೂ ಸಂತಸವಾಗಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ, ಸಾಲ ಮಾಡಿ ಲಾರಿ ಖರೀದಿಸಿರುವ ಅನೇಕರು ನಿಟ್ಟುಸಿರು ಬಿಡುವಂತಾಗಿದೆ ಎಂದು ಇದೇ ಗ್ರಾಮದ ಯುವಕ ಸುನಿಲಕುಮಾರ್ ಅಭಿಪ್ರಾಯಪಡುತ್ತಾರೆ.

ಪರಿಸರಕ್ಕೆ ಧಕ್ಕೆಯಾಗದಂತೆ, ನಿಯಮಾನುಸಾರ ಸಕ್ರಮ ಗಣಿಗಾರಿಕೆ ನಡೆಸಿದಲ್ಲಿ ಮುಂದಿನ ಪೀಳಿಗೆಗೂ ನೈಸರ್ಗಿಕ ಸಂಪನ್ಮೂಲ ಉಳಿಯುತ್ತದೆ. ಅಕ್ರಮದಿಂದಾಗಿ ಅನೇಕರ ಜೀವನಕ್ಕೆ ತೊಂದರೆ ಮಾಡುವವರು ಈ ಕುರಿತು ಎಚ್ಚೆತ್ತುಕೊಳ್ಳಬೇಕು. ಸಂಬಂಧಿಸಿದ ಇಲಾಖೆಗಳೂ ಈ ಬಗ್ಗೆ ಮುತುವರ್ಜಿ ವಹಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry