ಸೋಮವಾರ, ಏಪ್ರಿಲ್ 19, 2021
27 °C

ಗಣಿಗಾರಿಕೆಗೆ ತತ್ತರಿಸಿದ ನೀಲನಕೊಪ್ಪಲು

ಪ್ರಜಾವಾಣಿ ವಾರ್ತೆ ವಿಶೇಷ ವರದಿ ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: `ನೀಲನಕೊಪ್ಪಲು ಗ್ರಾಮದ ಕಡೆ ಒಮ್ಮೆ ನೋಡಿ ಸ್ವಾಮಿ...~-ಹಾಗಂತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಕೇಳಲೇಬೇಕಾಗಿದೆ.ಏಕೆಂದರೆ ಈ ಊರಿನ ಮೇಲೆ ಕಲ್ಲು ಗಣಿಗಾರಿಕೆಯ ದುಷ್ಪರಿಣಾಮ ತೀವ್ರವಾಗಿ ತಟ್ಟುತ್ತಿದೆ. ಬಡವರ ಮನೆಗಳು ಬಿರುಕು ಬಿಡುತ್ತಿವೆ. ಗ್ರಾಮದಲ್ಲಿ ಕನಿಷ್ಠ ಒಂದು ರಸ್ತೆ ಕೂಡ ಸಿಮೆಂಟ್ ಅಥವಾ ಡಾಂಬರು ಕಂಡಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಬೀದಿಯಲ್ಲಿ ಹರಿಯುತ್ತಿದೆ.ಬೀದಿ ದೀಪಗಳು ಬೆಳಕು ಕೊಡುತ್ತಿಲ್ಲ. ಕೆಟ್ಟು ಎರಡು ತಿಂಗಳು ಕಳೆದಿದ್ದು, ಜನರು ಕತ್ತಲು ಕವಿದ ಬೀದಿಗಳಲ್ಲಿ ಓಡಾಡಬೇಕಾದ ದುಸ್ಥಿತಿ ಬಂದಿದೆ. ಆದರೂ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲೀ ಈ ಊರಿನ ಕಡೆಗೆ ತಲೆ ಹಾಕಿಲ್ಲ. ನೀಲನಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು, ಸಾರಿಗೆ ಸಂಸ್ಥೆ ಬಸ್‌ಗಳು ಸರಿಯಾಗಿ ಬರುತ್ತಿಲ್ಲ. ಶಾಲೆ, ಕಾಲೇಜು ವಿದ್ಯಾರ್ಥಿಗಳು, ರೋಗಿಗಳಿಗೆ ತೊಂದರೆಯಾಗಿದೆ.ಗ್ರಾಮಕ್ಕೆ ಕೂಗಳತೆ ದೂರದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಅದರಿಂದ ಹೊರ ಹೊಮ್ಮುವ ಅಪಾಯಕಾರಿ ದೂಳು ಈ ಊರಿನ ಮನೆಗಳಿಗೆ ಮೆತ್ತಿಕೊಳ್ಳುತ್ತಿದೆ. ಕಲ್ಲು ಬಂಡೆ ಸ್ಫೋಟಿಸಲು ಬಳಸುವ ಸ್ಫೋಟಕದ ರಭಸಕ್ಕೆ ಊರಿಗೆ ಊರೇ ಘಡ ಘಡ ಅದುರುತ್ತದೆ. ಈಗಾಗಲೇ 20ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಇಲಾಖೆಗೆ ಗ್ರಾಮಸ್ಥರು ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ.ಯಾವೊಂದು ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದು ಎನ್.ಕೆ.ಸಿದ್ದೇಗೌಡ, ರವಿ ಇತರರು ಆಕ್ರೋಶ ವ್ಯಕ್ತಪಡಿಸುತ್ತಾರೆ.  ವಸತಿ ಯೋಜನೆಯಡಿ ಮನೆ ಕಟ್ಟುತ್ತಿರುವ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ಸಕಾಲಕ್ಕೆ ಚೆಕ್ ನೀಡುತ್ತಿಲ್ಲ. ಸಾಲ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದೇವೆ. ಒಂದು ಚೆಕ್ ಪಡೆಯಲು ತಿಂಗಳು ಕಾಲ ಅಲೆಯಬೇಕು ಎನ್ನುವುದು ಕುಮಾರ ಅವರ ನೋವಿನ ಮಾತು.ಚುನಾವಣೆ ಸಮಯದಲ್ಲಿ ಕಾಲು ಹಿಡಿಯುವ ರಾಜಕಾರಣಿಗಳು ನಂತರ ಜನರನ್ನು ಮರೆಯುತ್ತಾರೆ. ನೀಲನಕೊಪ್ಪಲು ಗ್ರಾಮದಲ್ಲಿ ಹೇಳಿಕೊಳ್ಳುವಂತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರದ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ ಎಂದು ರಾಜಣ್ಣ, ಎನ್.ಎಂ.ನಾಗರಾಜು ಇತರರು ಗ್ರಾಮಸ್ಥರು ದೂರಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.