ಗುರುವಾರ , ಏಪ್ರಿಲ್ 15, 2021
20 °C

ಗಣಿಗಾರಿಕೆ: ಕೇಂದ್ರದ ವಿವರಣೆ ಕೋರಿದ ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಳ್ಳಾರಿ ಬಳಿಯ ಕುಮಾರಸ್ವಾಮಿ ಬೆಟ್ಟದಲ್ಲಿ ಅದಿರು ಗಣಿಗಾರಿಕೆ ಅನುಮತಿಗಾಗಿ ಕಾದಿರುವ ಅರ್ಜಿಗಳನ್ನು 4 ತಿಂಗಳಲ್ಲಿ ಪರಿಗಣಿಸುವಂತೆ ಸೂಚಿಸಿದ್ದ ತನ್ನ ತೀರ್ಪಿನ ಪುನರ್‌ಪರಿಶೀಲನೆಗೆ ಕೋರಿ ಕೆಲವು ಗಣಿ ಕಂಪೆನಿಗಳು ಹಾಗೂ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೋಮವಾರ ಕೇಳಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಿಲುವು ತಿಳಿಸಲು ಅವಕಾಶ ನೀಡುವಂತೆ ಅಟಾರ್ನಿ ಜನರಲ್ ಜಿ.ಇ. ವಹನ್ವತಿ ಮಾಡಿದ ಮನವಿಯನ್ನು ನ್ಯಾ. ಪಿ. ಸದಾಶಿವಂ ಹಾಗೂ ಎಚ್.ಎಲ್. ದತ್ತು ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ ಮಾನ್ಯ ಮಾಡಿತು. ಈ ವಿವಾದದಲ್ಲಿ ಕೇಂದ್ರದ ನಿಲುವನ್ನು ಆಲಿಸಿಲ್ಲ ಎಂದು ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು.

ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿದ ನ್ಯಾಯಾಲಯ, ಪ್ರಮಾಣ ಪತ್ರಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿತು. 2010ರ ಸೆಪ್ಟೆಂಬರ್ 13ರ ತೀರ್ಪನ್ನು ಪ್ರಶ್ನಿಸಿ ಜೆಎಸ್‌ಡಬ್ಲ್ಯು, ಕಲ್ಯಾಣಿ ಸ್ಟೀಲ್ಸ್ ಹಾಗೂ ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿವೆ. ಕಳೆದ ಮೇ ತಿಂಗಳಲ್ಲಿ ಅರ್ಜಿ ವಿಚಾರಣೆಗೆ ಬಂದಾಗ ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದಾಗಿ ಪೀಠ ಹೇಳಿತ್ತು.

2010ರ ಸೆಪ್ಟೆಂಬರ್ 13ರಂದು ಹೈಕೋರ್ಟ್ ತೀರ್ಪನ್ನು ಬದಿಗೊತ್ತಿದ ಸುಪ್ರೀಂಕೋರ್ಟ್ ಹೊಸದಾಗಿ ಸಂಡೂರ್ ಮ್ಯಾಂಗನೀಸ್, ಜೆಎಸ್‌ಡಬ್ಲ್ಯು, ಎಂಎಸ್‌ಪಿಎಲ್ ಹಾಗೂ ಕಲ್ಯಾಣಿ ಸ್ಟೀಲ್ಸ್ ಅರ್ಜಿಗಳನ್ನು ಹೊಸದಾಗಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.