ಗಣಿಗಾರಿಕೆ ಗೊತ್ತಾಗಿದ್ದೇ ಕರ್ನಾಟಕದಲ್ಲಿ:ಜೆ.ಎಸ್. ಕೇಹರ್

ಸೋಮವಾರ, ಮೇ 20, 2019
30 °C

ಗಣಿಗಾರಿಕೆ ಗೊತ್ತಾಗಿದ್ದೇ ಕರ್ನಾಟಕದಲ್ಲಿ:ಜೆ.ಎಸ್. ಕೇಹರ್

Published:
Updated:

ಬೆಂಗಳೂರು: `ಇಲ್ಲಿಗೆ ಬರುವ ಮುನ್ನ ಗಣಿಗಾರಿಕೆಯ ಆಳ ಇಷ್ಟೊಂದು ಇದೆ ಎಂದು ತಿಳಿದೇ ಇರಲಿಲ್ಲ. ರಾಜ್ಯ ಹೈಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಒಂದು ವರ್ಷದ ಅವಧಿಯಲ್ಲಿ ಈ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ದೊರಕಿತು~ ಎಂದು ಸುಪ್ರೀಂಕೋರ್ಟ್‌ಗೆ ನೇಮಕಗೊಂಡಿರುವ ನ್ಯಾ. ಜೆ.ಎಸ್.ಕೇಹರ್ ಇಲ್ಲಿ ಹೇಳಿದರು.ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಕೇಹರ್ ಅವರಿಗೆ ರಾಜ್ಯ ವಕೀಲರ ಪರಿಷತ್ತು ಸೋಮವಾರ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.`ಪಂಜಾಬ್- ಹರಿಯಾಣ ಸೇರಿದಂತೆ ಇತರ ಹೈಕೋರ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಆದರೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅಲ್ಲಿ ಯಾವುದೇ ಪ್ರಕರಣಗಳು ಇರಲಿಲ್ಲ. ಇದರಿಂದ ಈ ವಿಷಯದ ಬಗ್ಗೆ ನನಗೆ ತಿಳಿವಳಿಕೆಯೇ ಇರಲಿಲ್ಲ. ಅದರ ಅರಿವನ್ನು ಕರ್ನಾಟಕ ಮಾಡಿಸಿಕೊಟ್ಟಿದೆ~ ಎಂದರು.`ಇಲ್ಲಿ ದಾಖಲಾಗುವ ಹೆಚ್ಚಿನ ಪ್ರಕರಣಗಳು ಸವಾಲಾಗಿವೆ. ಇದರ ಜೊತೆಗೆ ಇಲ್ಲಿಯ ವಕೀಲರು ಕೂಡ ಶ್ರಮಜೀವಿಗಳು~ ಎಂದು ಅವರು ತಿಳಿಸಿದರು.ಹೈಕೋರ್ಟ್‌ಗೆ ಹೆಚ್ಚಿನ ರೀತಿಯಲ್ಲಿ ಭದ್ರತಾ ವ್ಯವಸ್ಥೆ ಮಾಡಿರುವುದು ಕೆಲ ವಕೀಲರಿಗೆ ಅಸಮಾಧಾನ ಆಗಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ ನ್ಯಾ.ಕೇಹರ್, `ದೆಹಲಿ ಹೈಕೋರ್ಟ್‌ನಲ್ಲಿ ನಡೆದ ಘಟನೆ ಇಲ್ಲಿಯೂ ಮರುಕಳಿಸಬಾರದು ಎಂದು ಈ ರೀತಿ ಮಾಡಲಾಗಿದೆ. ಯಾವ ರೀತಿ ಭದ್ರತೆ ಒದಗಿಸಬೇಕು ಎನ್ನುವುದನ್ನು ನ್ಯಾಯಮೂರ್ತಿಗಳು ನಿರ್ಧರಿಸಿಲ್ಲ. ಬದಲಿಗೆ ಅದನ್ನು ಪೊಲೀಸ್ ಇಲಾಖೆ ನಿರ್ಧರಿಸಿದೆ.ಅದರಂತೆ ನಾವು ನಡೆದುಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದ ಇನ್ನಾವುದೇ ಸಮಸ್ಯೆ ಇದ್ದರೆ ನೂತನ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತನ್ನಿ~ ಎಂದು ಸೂಚಿಸಿದರು.ಅಧಿಕಾರ ಸ್ವೀಕಾರ: ಬೀಳ್ಕೊಡುಗೆಗೆ ಮುನ್ನ ನಡೆದ ಕಾರ್ಯಕ್ರಮದಲ್ಲಿ, ಹೈಕೋರ್ಟ್ ನೂತನ ಹಿರಿಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ವಿಕ್ರಮಜಿತ್ ಸೇನ್ ಅವರು ಅಧಿಕಾರ ಸ್ವೀಕರಿಸಿದರು.ನಂತರ ಮಾತನಾಡಿದ ಅವರು, `ನ್ಯಾಯಮೂರ್ತಿಗಳಾದವರು ಯಾವುದೇ ಭಯವಿಲ್ಲದೆ ತೀರ್ಪು ನೀಡಬೇಕು. ಯಾವುದೇ ಒತ್ತಡಗಳಿಗೆ ಮಣಿಯಬಾರದು~ ಎಂದರು. ಸದ್ಯ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ನ್ಯಾ. ಸೇನ್ ಅವರು ಶೀಘ್ರದಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

ಎಲ್ಲವೂ ಒಳ್ಳೆಯದು, ಆದರೆ...

ಬೆಂಗಳೂರಿನ ರಸ್ತೆಗಳ ಕುರಿತು ಮೊದಲ ದಿನವೇ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾ. ವಿಕ್ರಮಜಿತ್ ಸೇನ್ ಅವರು, `ಬೆಂಗಳೂರಿನಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ನಾನು ಕೇಳಿದ್ದೇನೆ. ಆದರೆ ಇಲ್ಲಿಯ ಸಂಚಾರ ದಟ್ಟಣೆ ಹಾಗೂ ಕಿರಿದಾದ ರಸ್ತೆಗಳು ಮಾತ್ರ ಇದಕ್ಕೆ ಹೊರತಾಗಿವೆ. ಇಲ್ಲಿ ದಾಖಲಾಗುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪೈಕಿ ಹೆಚ್ಚಿನವು ರಸ್ತೆಗಳಿಗೇ ಸಂಬಂಧಿಸಿದ್ದು ಎಂಬುದು ನನ್ನ ಗಮನಕ್ಕೆ ಬಂದಿದೆ~ ಎಂದರು.ಬಿಟಿಎಂ ಲೇಔಟ್ ಬಳಿ ವಸತಿ ಉದ್ದೇಶಕ್ಕೆ ಮೀಸಲು ಇರಿಸಿರುವ ಜಮೀನಿನಲ್ಲಿ ಆರು ಮಹಡಿಗಳ ವಾಣಿಜ್ಯ ಸಮುಚ್ಚಯ ನಿರ್ಮಾಣ ಆಗುತ್ತಿರುವ ಕುರಿತು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry