ಗಣಿಗಾರಿಕೆ: ಜೈಲಿನಲ್ಲಿ ರೆಡ್ಡಿ ಎರಡು ವರ್ಷ ಪೂರ್ಣ

7

ಗಣಿಗಾರಿಕೆ: ಜೈಲಿನಲ್ಲಿ ರೆಡ್ಡಿ ಎರಡು ವರ್ಷ ಪೂರ್ಣ

Published:
Updated:

ಬಳ್ಳಾರಿ: ಅಕ್ರಮ ಗಣಿಗಾರಿಕೆ, ರಾಜಸ್ವ ವಂಚನೆ, ಗಣಿ- ಗಡಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರದ ಆದೇಶದ ಮೇರೆಗೆ ತನಿಖೆ ನಡೆಸಿದ ಸಿಬಿಐ ತಂಡವು, ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ ಇದೇ 5ಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿದೆ.2011ರ ಸೆ.5ರ ಬೆಳಿಗ್ಗೆ 6.15ಕ್ಕೆ ನಗರದ ಹವಂಭಾವಿಯಲ್ಲಿರುವ ನಿವಾಸಗಳಿಂದ ಜನಾರ್ದನ ರೆಡ್ಡಿ  ಹಾಗೂ ಓಬಳಾಪುರಂ ಮೈನಿಂಗ್ ಕಂಪನಿ (ಓಎಂಸಿ) ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ ರೆಡ್ಡಿ ಅವರನ್ನು ಬಂಧಿಸಿ ಹೈದರಾಬಾದ್‌ಗೆ ಕರೆದೊಯ್ದಿದ್ದ ಸಿಬಿಐ, ಅಲ್ಲಿನ ಚಂಚಲಗುಡಾ ಕಾರಾಗೃಹದಲ್ಲಿ ಇರಿಸಿತ್ತು.ನಂತರ, ಕರ್ನಾಟಕದ ಸಂಡೂರು ಭಾಗದಲ್ಲಿರುವ ರಾಮಗಡ ಅರಣ್ಯ ವಲಯದಲ್ಲಿ ನಡೆದಿರುವ ಅಸೋಸಿಯೇಟೆಡ್ ಮೈನಿಂಗ್ ಕಂಪನಿಯ (ಎಎಂಸಿ) ಅಕ್ರಮ ಗಣಿಗಾರಿಕೆ, ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ ಸಿಬಿಐ, ಈ ಇಬ್ಬರನ್ನೂ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆ ತಂದಿತ್ತಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿ ಪರಮಾಪ್ತರು, ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳೂ ಒಳಗೊಂಡಂತೆ ಒಟ್ಟು 12 ಜನರನ್ನು ಇದುವರೆಗೆ ಬಂಧಿಸಿದೆ.ಮೆಹಫೂಜ್ ಅಲಿ ಖಾನ್, ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್, ಚಿಂತಲ ಶ್ರೀನಿವಾಸರೆಡ್ಡಿ, ಕೇಬಲ್ ಮುರಳಿ, ಇದ್ದಲಿ ಎರಿಸ್ವಾಮಿ, ಶ್ಯಾಂ ಸಿಂಗ್ ಮತ್ತಿತರ ಬಂಧಿತರು ರೆಡ್ಡಿ ಆಪ್ತರಾಗಿದ್ದು, ಮನೋಜ್ ಕುಮಾರ್ ಶುಕ್ಲಾ, ಎಸ್.ಮುತ್ತಯ್ಯ, ವಿಶ್ವನಾಥನ್, ಮಹೇಶ್ ಪಾಟೀಲ, ಎಸ್.ಪಿ. ರಾಜು ಬಂಧಿತ ಅಧಿಕಾರಿಗಳಾಗಿದ್ದಾರೆ.ತನಿಖೆಯ ಭಾಗವಾಗಿ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು, ರೆಡ್ಡಿ ಆಪ್ತರು, ಗಣಿ ಉದ್ಯಮಿಗಳು ಸಿಬಿಐ ವಿಚಾರಣೆ ಎದುರಿಸಿದ್ದು, ಅನೇಕರ ಮೇಲೆ ಈಗಲೂ ಬಂಧನದ ತೂಗು ಕತ್ತಿ ನೇತಾಡುತ್ತಿದೆ.ಜಾಮೀನಿಗೆ ಲಂಚ: ಜನಾರ್ದನ ರೆಡ್ಡಿ ಜಾಮೀನಿಗಾಗಿ ಲಂಚ ನೀಡಿದ ಪ್ರಕರಣವೂ ಬೆಳಕಿಗೆ ಬಂದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಸಿಬಿಐ ಜತೆಗೇ ತನಿಖೆ ನಡೆಸಿ, ರೆಡ್ಡಿ ಸೋದರ ಜಿ.ಸೋಮಶೇಖರ ರೆಡ್ಡಿ, ಹಾಗೂ ಕಂಪ್ಲಿ ಶಾಸಕ ಟಿ.ಎಚ್. ಸುರೇಶಬಾಬು ಅವರನ್ನು ಬಂಧಿಸಿತ್ತಾದರೂ, ನಂತರ ಅವರಿಗೆ ಜಾಮೀನು ದೊರೆಯಿತು. ಸಿಬಿಐ ನ್ಯಾಯಾಲಯದ ನ್ಯಾಯಾಧೀಶರು, ಅವರ ಸಹಚರರು, ಲಂಚ ವ್ಯವಹಾರಕ್ಕೆ ಮಧ್ಯವರ್ತಿಗಳಾದವರು ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ದೇಶದ ಗಮನ ಸೆಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry