ಸೋಮವಾರ, ಮೇ 23, 2022
24 °C

ಗಣಿಗಾರಿಕೆ: ಪರಿಸರ ತಜ್ಞರ ತಂಡ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣಿಗಾರಿಕೆ: ಪರಿಸರ ತಜ್ಞರ ತಂಡ ಭೇಟಿ

ಚಿಕ್ಕನಾಯಕನಹಳ್ಳಿ: ಗಣಿಗಾರಿಕೆಯಿಂದ ಜನ, ಜಾನುವಾರು ಹಾಗೂ ಬೆಳೆಗಳ ಮೇಲಾದ ಪರಿಣಾಮದ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೆಶನದ ಪರಿಸರ ತಜ್ಞರ ತಂಡವು ಬುಧವಾರ ಇಲ್ಲಿನ ಗಣಿ ಪ್ರದೇಶಕ್ಕೆ ಸೇರಿದ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿತು.ಸುಪ್ರೀಂ ಕೋರ್ಟ್ ನಿರ್ದೆಶನದ ಪರಿಸರ ತಜ್ಞರ ಉಪ ತಂಡ ಇಲ್ಲಿನ ಗಣಿ ಪ್ರದೇಶಕ್ಕೆ ಸೇರಿದ ಗ್ರಾಮಗಳಲ್ಲಿ ಸಭೆ ನಡೆಸಿ ಗಣಿಗಾರಿಕೆಗೂ ಮೊದಲು ಗ್ರಾಮದಲ್ಲಿನ ಮಳೆ, ಬೆಳೆ ಹೈನುಗಾರಿಕೆ, ತೋಟಗಾರಿಕೆ, ಜನ ಜಾನುವಾರುಗಳ ಆರೋಗ್ಯ, ಅಂತರ್ಜಲದ ಮಟ್ಟ ಹಾಗೂ ಜನರ ಜೀವನ ವಿಧಾನಗಳ ಬಗ್ಗೆ ಕೂಲಂಕಷ ಮಾಹಿತಿ ಸಂಗ್ರಹಿಸಿದರು.

ಗಣಿಗಾರಿಕೆ ಆರಂಭಗೊಂಡ ನಂತರ ಬದಲಾದ ಹಾಗೂ ಇವೆಲ್ಲದರ ಮೇಲೆ ಆಗಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ  ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸ ಲಾಯಿತು.ಗ್ರಾಮಸ್ಥರು ಗಣಿಗಾರಿಕೆ ದೂಳಿನಿಂದ ಬೆಳೆಗಳಿಗೆ ಹಾನಿಯಾಗಿದೆ. ಜನ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಹೈನುಗಾರಿಕೆ ಪ್ರಮಾಣ ಕಮ್ಮಿಯಾಗಿದೆ. ಅಂತರ್ಜಲ ಮಟ್ಟ ಕುಸಿತವಾಗಿದೆ ಎಂದು ವಿವರಿಸಿದರು.ಗ್ರಾಮಸ್ಥರಾದ ಪ್ರಸನ್ನ ಹಾಗೂ ಮದಕರಿ ಮಾತನಾಡಿ, ಪ್ರಕೃತಿ ಮೇಲಾಗಿರುವ ಅಕ್ರಮ ಗಣಿಗಾರಿಕೆಯಿಂದ ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ಹಲವು ಶಾಶ್ವತ ಸಮಸ್ಯೆ ಎದುರಿಸಬೇಕಿದ್ದು, ಈಗ ಆಗಿರುವ ಹಾನಿಯನ್ನು ಸರಿಪಡಿಕೊಳ್ಳ ಬೇಕಿದೆ. ಈ ಕಾರಣದಿಂದ ಗಣಿಗಾರಿಕೆಗೆ ಆಸ್ಪದ ಬೇಡ ಎಂದರು. ಮತ್ತೆ ಕೆಲವರುಗಣಿಗಾರಿಕೆಯಿಂದ ಜಮೀನು ರಹಿತರಿಗೆ ಕೆಲಸ ಸಿಗಲಿದ್ದು,  ನಿಯಮಬದ್ದವಾಗಿ ಗಣಿಗಾರಿಕೆ ನಡೆಯಲಿ ಎಂದರು.

ನಂತರ ಗೊಲ್ಲರಹಳ್ಳಿಗೆ ಭೇಟಿ ನೀಡಿದ ತಂಡ, ಅಲ್ಲಿನ ಜನರ ಅಭಿಪ್ರಾಯ ಸಂಗ್ರಹಿಸಿತು. ಈ ಗ್ರಾಮವು ಗಣಿಗಾರಿಕೆ ಪ್ರದೇಶದ ಸನಿಹದಲ್ಲಿರುವುದರಿಂದ ಗಣಿ ಗಾರಿಕೆ ಪರಿಣಾಮ ಇಲ್ಲಿ ಹೆಚ್ಚು ಎಂದು ಗ್ರಾಮಸ್ಥರು ದೂರಿದರು. ಗಣಿಗಾರಿಕೆಗೆ ಮತ್ತೆ ಆಸ್ಪದ ಬೇಡ ಎಂದರು.ಗ್ರಾಮದ ಕಲುಷಿತಗೊಂಡ ಕುಡಿಯುವ ನೀರಿನ ಮಾದರಿಯನ್ನು ತಂಡ ಸಂಗ್ರಹಿಸಿತು. ನಂತರ ಬುಳ್ಳೆನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ತಂಡದಲ್ಲಿ ಅರಣ್ಯ ತಜ್ಞ ಅರುಣ್‌ಕುಮಾರ್, ಜೀವ ವಿಜ್ಞಾನಿ ಸೋಮಶೇಖರ್ ಇದ್ದರು. ತೋಟಗಾರಿಕಾ ಸಹಾಯಕ ನಿರ್ದೆಶಕ ಪ್ರಸಾದ್, ತಹಶೀಲ್ದಾರ್ ಆರ್.ಉಮೇಶ್‌ಚಂದ್ರ, ಪಿಎಸ್‌ಐ ಚಿದಾನಂದ ಮೂರ್ತಿ ಮುಂತಾದವರು ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.