ಭಾನುವಾರ, ಜನವರಿ 19, 2020
28 °C

ಗಣಿಗಾರಿಕೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಡೆದ ಗಣಿಗಾರಿಕೆಯಿಂದ ರೈತರು ಹಾಗೂ ಜನ ಸಾಮಾನ್ಯರಿಗೆ ಆಗಿರುವ ಕಷ್ಟ, ನಷ್ಟಗಳು ಒಂದೆರಡಲ್ಲ. ಗಣಿಗಾರಿಕೆಯಿಂದ ಪರಿಸರಕ್ಕೆ ಅಪಾರ ಹಾನಿಯಾಗಿದೆ, ಗಣಿ ಪ್ರದೇಶದ ಕೃಷಿ ಹಾಗೂ ತೋಟಗಾರಿಕೆ ಉತ್ಪಾದನೆ ಗಣನೀಯವಾಗಿ ಕುಸಿದಿದೆ, ಸಾವಿರಾರು ಜನರು ರೋಗ, ರುಜಿನಗಳಿಂದ ನರಳುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಗಳನ್ನು ಗಣಿಗಾರಿಕೆ ಅಧ್ವಾನಗಳನ್ನು ಅಧ್ಯಯನ ಮಾಡಿದ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.

 

ಗಣಿ ಅಕ್ರಮಗಳನ್ನು ನಿಯಂತ್ರಿಸುವ ವಿಷಯದಲ್ಲಿ ಮೂರೂ ಜಿಲ್ಲೆಗಳ ಜ್ಲ್ಲಿಲಾಡಳಿತಗಳು ವಿಫಲವಾಗಿವೆ. ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳ ಹಿಂದಿನ ಉಸ್ತುವಾರಿ ಸಚಿವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರು ಎಂದು ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿಯೇ ಹೇಳಿದ್ದರು.ಈ ಎಲ್ಲ ಅಕ್ರಮಗಳಿಗೆ ಗಣಿ ಇಲಾಖೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ  ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೇ ನೇರ ಹೊಣೆ. ಅಕ್ರಮ ಗಣಿಗಾರಿಕೆಯ ವಿರುದ್ಧ ಚಕಾರ ಎತ್ತದ ಜಿಲ್ಲಾಧಿಕಾರಿಗಳು ಮತ್ತು ಇತರ ಇಲಾಖೆಗಳ ಅಧಿಕಾರಿಗಳೂ ಅಪರಾಧಿಗಳೇ.ಗಣಿಗಾರಿಕೆಗೆ ಅನುಮತಿ ನೀಡುವ ಅಧಿಕಾರ ಕೇಂದ್ರ ಸರ್ಕಾರದ್ದೇ ಆದರೂ ಅಕ್ರಮಗಳನ್ನು ನಿಯಂತ್ರಿಸುವ ಹೊಣೆ ರಾಜ್ಯದ್ದು ಎಂಬುದನ್ನು ಬಿಜೆಪಿ ಸರ್ಕಾರ ಅರ್ಥ ಮಾಡಿಕೊಳ್ಳಲೇ ಇಲ್ಲ. ರಾಜ್ಯ ಸರ್ಕಾರದ ಹೊಣೆಗೇಡಿತನಕ್ಕೆ ರೈತರ ಮತ್ತು ಜನ ಸಾಮಾನ್ಯರ ಹಿತ ಬಲಿಯಾಗಿರುವುದನ್ನು ನಿರ್ಲಕ್ಷಿಸಲಾಗದು.ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಜೊತೆಗೆ, ಮೂರೂ ಜಿಲ್ಲೆಗಳಲ್ಲಿ ಅರಣ್ಯ ನಾಶವಾಗಿದೆ. ಜೀವ ಸಂಕುಲಕ್ಕೆ ಹಾನಿಯಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ಅಕ್ರಮ ಗಣಿಗಾರಿಕೆಗೆ ತುತ್ತಾದ ಪ್ರದೇಶ ಮತ್ತೆ ಸುಸ್ಥಿತಿಗೆ ಬರಲು ಹತ್ತಾರು ವರ್ಷಗಳೇ ಬೇಕಾದೀತು.ಅಕ್ರಮ ಗಣಿಗಾರಿಕೆಯಿಂದ ಬಂದ ಹಣವನ್ನು ಚುನಾವಣೆಗೆ ಬಳಸಿಕೊಂಡು ಅಕ್ರಮ ಮಾರ್ಗಗಳ ಮೂಲಕ ಅಧಿಕಾರಕ್ಕೆ ಬಂದು ಒಟ್ಟಾರೆ ವ್ಯವಸ್ಥೆಯನ್ನೇ ಹಾಳು ಮಾಡುವ ಪ್ರವೃತ್ತಿ ರಾಜ್ಯದಲ್ಲಿ ಆರಂಭವಾಗಿದೆ.ಸಾವಿರಾರು ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಕೂಗೆಬ್ಬಿಸಿ ಮತ್ತೆ ಗಣಿಗಾರಿಕೆಗೆ ಅನುಮತಿ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಅದಕ್ಕೆ ಅವಕಾಶ ಕೊಡಬಾರದು. ಈಗ ಆಗಿರುವ ಹಾನಿಯನ್ನು ಸರಿಪಡಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಲಿ ತನ್ನ ವರದಿಯಲ್ಲಿ ಹೇಳಿದೆ. ಅದರಂತೆ ಕ್ರಮಗಳನ್ನು ರಾಜ್ಯ ಸರ್ಕಾರ ಆರಂಭಿಸಬೇಕು.ಈ ನಿಟ್ಟಿನಲ್ಲಿ ಆಗಲಿರುವ ವೆಚ್ಚವನ್ನು ಗಣಿಗಾರಿಕೆ ನಡೆಸಿದ ವ್ಯಕ್ತಿಗಳಿಂದಲೇ ವಸೂಲು ಮಾಡುವ ದಿಟ್ಟತನವನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕು. ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಆಧರಿಸಿಯೇ ಈ ಪ್ರಕ್ರಿಯೆ ಆರಂಭವಾಗಬೇಕು.

ಪ್ರತಿಕ್ರಿಯಿಸಿ (+)