ಗುರುವಾರ , ಜೂನ್ 17, 2021
21 °C

ಗಣಿಗಾರಿಕೆ ಸ್ಥಗಿತಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಹೈದರಾಬಾದ್ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾಗಿರುವ ಸಂವಿಧಾನದ 371 ನೇ ಕಲಂಗೆ ತಿದ್ದುಪಡಿ ತರುವಂತೆ ಆಗ್ರಹಿಸಲು ಈ ಭಾಗದ ಶಾಸಕರು, ಸಂಸದರು, ಜನಪ್ರತಿನಿಧಿಗಳನ್ನು ಒಳಗೊಂಡ ಮುಖ್ಯಮಂತ್ರಿ ಸದಾನಂದಗೌಡ ನೇತೃತ್ವದಲ್ಲಿ ನಿಯೋಗ ಶೀಘ್ರದಲ್ಲಿಯೇ ದೆಹಲಿಗೆ ತೆರಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಂವಿಧಾನದ 371 ನೇ ತಿದ್ದುಪಡಿಯ ಅಗತ್ಯತೆಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಅಲ್ಲದೇ ಗೋಗಿಯಲ್ಲಿ ನಡೆಯುತ್ತಿರುವ ಯುರೇನಿಯಂ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗುವುದು ಎಂದರು.ಈಗಾಗಲೇ ಕೇಂದ್ರ ಪರಿಸರ ಇಲಾಖೆ ಯುರೇನಿಯಂ ಗಣಿಗಾರಿಕೆಗೆ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಭಾಗದ ಜನರ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು. ಕೊಟ್ಟಿರುವ ಅನುಮತಿಯನ್ನು ರದ್ದುಪಡಿಸಲು ಕೇಂದ್ರ ಪರಿಸರ ಇಲಾಖೆಗೆ ಸೂಚನೆ ನೀಡುವಂತೆ ಕೋರಲಾಗುವುದು ಎಂದು ಹೇಳಿದರು.ಕಡೇಚೂರು ಭಾಗದಲ್ಲಿ ಸುಮಾರು 3,300 ಎಕರೆ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗೆ ನೀಡಲು ರೈತರು ಮುಂದೆ ಬಂದಿದ್ದಾರೆ. ಆದರೆ ಬೆಲೆ ಹೆಚ್ಚಿಗೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಕೈಗಾರಿಕಾ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ರೈತರಿಗೆ ಹೆಚ್ಚಿನ ಬೆಲೆ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 200 ಕಿ.ಮೀ. ದೂರದಲ್ಲಿರುವ ಈ ಜಮೀನಿನಲ್ಲಿ ನೀರಿನ ಸೌಲಭ್ಯವಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಹೇಳಿ ಮಾಡಿಸಿದಂತಿದೆ. ಒಂದೇ ಕಡೆ ಇಷ್ಟೊಂದು ಭೂಮಿ ಸಿಗುವುದು ದುಸ್ತರ. ಆದರೆ ರೈತರೇ ಜಮೀನು ಕೊಡಲು ಮುಂದೆ ಬಂದಿದ್ದು, ಅವರ ಕೋರಿಕೆಯಂತೆ ಹೆಚ್ಚಿನ ಬೆಲೆ ಕೊಡಿಸಲಾಗುವುದು ಎಂದು ಹೇಳಿದರು.ಈಗಾಗಲೇ ಜಿಲ್ಲಾಧಿಕಾರಿಗಳು ಭೂಮಿಯ ಬೆಲೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದು ಅಂತಿಮವಲ್ಲ. ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಈ ಸಭೆಯಲ್ಲಿಯೇ ಹೆಚ್ಚಿನ ಬೆಲೆ ಒದಗಿಸುವಂತೆ ಮುಖ್ಯಮಂತ್ರಿ ಹಾಗೂ ಕೈಗಾರಿಕೆ ಸಚಿವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ, ಅದನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಹಣವನ್ನು ಬಿಡುಗಡೆ ಮಾಡಲಾಗಿದೆ. ತಕ್ಷಣ ಕೆಲಸ ಆರಂಭಿಸಲು ಸೂಚನೆ ನೀಡಲಾಗಿದೆ. ಪರಿಸ್ಥಿತಿ ಗಂಭೀರವಾಗಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಚಿವ ರಾಜುಗೌಡ ತಿಳಿಸಿದರು.ಜಿಲ್ಲೆಯ ಗಡಿ ಭಾಗದಲ್ಲಿ ಮರಳು ಗಣಿಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಟೆಂಡರ್ ಕರೆಯುವ ಮೊದಲೇ ತಿಳಿಸಿದ್ದರೆ, ಅಂತಹ ಭಾಗದಲ್ಲಿ ಟೆಂಡರ್ ಪ್ರಕ್ರಿಯೆಯನ್ನೇ ನಡೆಸುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಅಂತರ್ಜಲ ಕುಸಿಯುವ ಭೀತಿ ಇದ್ದರೆ, ಅಂತಹ ಸ್ಥಳಗಳಲ್ಲಿ ಮರಳು ಗಣಿಗಾರಿಕೆ ಗುತ್ತಿಗೆ ರದ್ದುಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ಈ ತಿಂಗಳ ಅಂತ್ಯದವರೆಗೆ ನಗರಸಭೆಗೆ ಪೌರಾಯುಕ್ತರು ಬರಲಿದ್ದು, ಉಪವಿಭಾಗಾಧಿಕಾರಿಗಳಾಗ ವಿಜಯ ಇನ್ನೆರಡು ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಗರದ ರಸ್ತೆ ಸುಧಾರಣೆ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.ಬಿಜೆಪಿ ಮುಖಂಡ ವೆಂಕಟರೆಡ್ಡಿ ಮುದ್ನಾಳ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವಿಂದ್ರನಾಥ ನಾದ್, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಖಂಡ್ರೆ, ಮಹೇಂದ್ರಗೌಡ, ಸಲೀಂಸಾಬ ವರ್ತಿ, ಶರಣಗೌಡ ಬಾಡಿಯಾಳ, ಮಲ್ಲಿಕಾರ್ಜುನ ಗುಳೇದ, ವೆಂಕಟರೆಡ್ಡಿ ಅಬ್ಬೆತುಮಕೂರ, ಮುಂತಾದವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.