ಗಣಿಗಾರಿಕೆ ಸ್ಥಗಿತ: ರೈಲ್ವೆ ಆದಾಯಕ್ಕೆ ಕತ್ತರಿ

7

ಗಣಿಗಾರಿಕೆ ಸ್ಥಗಿತ: ರೈಲ್ವೆ ಆದಾಯಕ್ಕೆ ಕತ್ತರಿ

Published:
Updated:

ಹುಬ್ಬಳ್ಳಿ:  ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ಸ್ಥಗಿತದಿಂದಾಗಿ ರೈಲ್ವೆ ಇಲಾಖೆಯ ಪ್ರಸಕ್ತ ವರ್ಷದ ವರಮಾನದಲ್ಲಿ 755.06 ಕೋಟಿ ರೂಪಾಯಿ ಕಡಿಮೆಯಾಗಿದೆ ಎಂದು  ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಪ್ರವೀಣ ಕುಮಾರ್ ಮಿಶ್ರಾ ಮಂಗಳವಾರ ಇಲ್ಲಿ ಹೇಳಿದರು.ಕಳೆದ ವರ್ಷ ರೂ 2424.43 ಕೋಟಿ ಇದ್ದ ವರಮಾನ ಈ ವರ್ಷ ರೂ 1669.37 ಕೋಟಿಗೆ ಕುಸಿದಿದೆ. ಇದಕ್ಕೆ ಪ್ರಮುಖ ಕಾರಣ ಅದಿರು ಸಾಗಣೆ ಪ್ರಮಾಣ ಶೇ 50ರಷ್ಟು ಕಡಿಮೆಯಾಗಿರುವುದು. ಈ ನಷ್ಟವನ್ನು ಸಿಮೆಂಟ್, ಮೆಕ್ಕೆಜೋಳ, ಸಕ್ಕರೆ, ಗ್ರಾನೈಟ್ ಹಾಗೂ ಇನ್ನಿತರೆ ಸರಕುಗಳನ್ನು ಹೆಚ್ಚಾಗಿ ಸಾಗಿಸುವ ಮೂಲಕ ತುಂಬಿಕೊಳ್ಳಲು ಇಲಾಖೆ ಮುಂದಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು..ಪ್ರಯಾಣಿಕರ ಸಂಖ್ಯೆ ಹೆಚ್ಚಳ: ನೈರುತ್ಯ ರೈಲ್ವೆ ವಲಯದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷ 3.24 ಕೋಟಿ  ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಿದ್ದರೆ ಪ್ರಸಕ್ತ ಸಾಲಿನಲ್ಲಿ ಈ ಸಂಖ್ಯೆ 3.39 ಕೋಟಿಗೆ ಏರಿದೆ ಎಂದರು.ರೈಲು ನಿಲ್ದಾಣ ಆಧುನೀಕರಣ: ರೂ.29.05 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣವನ್ನು ಆಧುನೀಕರಿಸಲಾಗುತ್ತಿದ್ದು, ಈಗಾಗಲೇ ರೂ. 7ಕೋಟಿ ವೆಚ್ಚದ ಕಾಮಗಾರಿ ಮುಗಿದಿದೆ. ಬೆಂಗಳೂರು ಹಾಗೂ ಮೈಸೂರು ವಿಭಾಗಗಳಿಗಿಂತ ಹುಬ್ಬಳ್ಳಿ ವಿಭಾಗದ ವರಮಾನ ಹೆಚ್ಚಿದೆ.

 

ಕಳೆದ 10 ದಿನಗಳಲ್ಲಿ ಹುಬ್ಬಳ್ಳಿ ವಿಭಾಗ 61.6 ಕೋಟಿ ರೂಪಾಯಿ ಆದಾಯ ಗಳಿಸಿದ್ದರೆ, ಬೆಂಗಳೂರು ವಿಭಾಗ 28 ಕೋಟಿ ಹಾಗೂ ಮೈಸೂರು ವಿಭಾಗ 6 ಕೋಟಿ ರೂಪಾಯಿ ವರಮಾನ ಗಳಿಸಿವೆ. ಸರಕು ಸಾಗಣೆಯನ್ನು ಹೆಚ್ಚಾಗಿ ಅವಲಂಬಿಸಿರುವುದೇ ಇದಕ್ಕೆ ಕಾರಣ ಎಂದು ಮಿಶ್ರಾ ವಿವರಿಸಿದರು.ಜೋಡಿ ಮಾರ್ಗ ಶೀಘ್ರ ಪೂರ್ಣ: ಹುಬ್ಬಳ್ಳಿ-ಧಾರವಾಡ ನಡುವಿನ ರೈಲ್ವೆ ಜೋಡಿ ಮಾರ್ಗದ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಅದಿರು ರಫ್ತು ವಹಿವಾಟು ಕಡಿಮೆಯಾದ ಹಿನ್ನೆಲೆಯಲ್ಲಿ ಐಡಿಬಿ ನೆರವಿನಡಿ ಹೊಸಪೇಟೆ-ವಾಸ್ಕೋ ನಡುವಿನ ಜೋಡಿ ರೈಲು ಮಾರ್ಗದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟರು.ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ 117 ಲೆವೆಲ್ ಕ್ರಾಸಿಂಗ್‌ಗಳಲ್ಲಿ ಸಬ್ ವೇ ನಿರ್ಮಾಣ, ಹುಬ್ಬಳ್ಳಿ-ದೆಹಲಿ ನಿಜಾಮುದ್ದೀನ್ ನಡುವೆ ಮೂರು ದಿನಕ್ಕೊಮ್ಮೆ ಇನ್ನೊಂದು ರೈಲು ಆರಂಭ, ಹುಬ್ಬಳ್ಳಿ-ಹೈದರಾಬಾದ್, ವಾಸ್ಕೋ-ಮೀರಜ್ ಹಾಗೂ ಯಶವಂತಪುರ- ಹುಬ್ಬಳ್ಳಿ-ಸೊಲ್ಲಾಪುರ ನಡುವೆ ಹೊಸ ರೈಲು ಓಡಾಟಕ್ಕೆ ಅವಕಾಶ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.ಆರು ಸಿಬ್ಬಂದಿ ವರ್ಗಾವಣೆಕಳೆದ ವರ್ಷ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು ಯಶವಂತನಗರ ರೈಲು ನಿಲ್ದಾಣದಲ್ಲಿ ನಕಲಿ ಪರ್ಮಿಟ್ ಪಡೆದು ಅದಿರು ಸಾಗಿಸುತ್ತಿದ್ದ ಆರೋಪದ ಮೇಲೆ ಅಲ್ಲಿನ ಜಿಲ್ಲಾಧಿಕಾರಿ ದಾಳಿ ನಡೆಸಿ ಅದಿರು ವಶಪಡಿಸಿಕೊಂಡ ಪ್ರಕರಣದ ತನಿಖೆ ನಡೆಯುತ್ತಿದ್ದು, ಇಲಾಖೆಯ ಯಾವುದೇ ಸಿಬ್ಬಂದಿಯ ಮೇಲೆ ದೂರು ದಾಖಲಾಗಿಲ್ಲ.

 

ಆದರೂ ಸದರಿ ನಿಲ್ದಾಣದ 6 ಮಂದಿ ಸಿಬ್ಬಂದಿಯನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿರುವುದಾಗಿ  ಮಿಶ್ರಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry