ಗಣಿಗಾರಿಕೆ: 22 ಗುತ್ತಿಗೆ ರದ್ದತಿಗೆ ಮುಂದಾದ ಸರ್ಕಾರ

7

ಗಣಿಗಾರಿಕೆ: 22 ಗುತ್ತಿಗೆ ರದ್ದತಿಗೆ ಮುಂದಾದ ಸರ್ಕಾರ

Published:
Updated:

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿಯ (ಸಿಇಸಿ) ಶಿಫಾರಸಿನ ಪ್ರಕಾರ ಬಳ್ಳಾರಿಯ 22 ಗಣಿ ಗುತ್ತಿಗೆಗಳನ್ನು ರದ್ದುಮಾಡಲು ಮುಂದಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಂಬಂಧಿಸಿದ ಗಣಿಗಳ ಮಾಲೀಕರಿಗೆ ಜನವರಿ 25ರಂದು ನೋಟಿಸ್ ಜಾರಿ ಮಾಡಿದೆ.ಬಳ್ಳಾರಿಯ 22 ಗಣಿಗಳಲ್ಲಿ ಗಂಭೀರ ಸ್ವರೂಪದ ಅಕ್ರಮ ನಡೆದಿರುವುದನ್ನು ಪತ್ತೆಹಚ್ಚಿದ್ದ ಸಿಇಸಿ, ಈ ಗಣಿ ಗುತ್ತಿಗೆಗಳನ್ನು ರದ್ದು ಮಾಡುವಂತೆ ಕಳೆದ ಸೆಪ್ಟೆಂಬರ್‌ನಲ್ಲಿ ಶಿಫಾರಸು ಮಾಡಿತ್ತು. ಈ ಸಂಬಂಧ ಇದೇ 6ರಿಂದ ಅಂತಿಮ ಹಂತದ ವಿಚಾರಣೆ ನಡೆಯಲಿದೆ. ವಿಚಾರಣೆಗೆ ಹಾಜರಾಗುವಂತೆ ಗಣಿ ಮಾಲೀಕರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶ ಎಚ್.ಆರ್.ಶ್ರೀನಿವಾಸ್ ನೋಟಿಸ್ ಜಾರಿ ಮಾಡಿದ್ದಾರೆ.ಬಿಜೆಪಿ ಶಾಸಕ ಆನಂದ ಸಿಂಗ್ ಒಡೆತನದ ಎಸ್‌ಬಿ ಮಿನರಲ್ಸ್‌ನ ಎರಡು ಗಣಿ ಗುತ್ತಿಗೆಗಳು, ಜೆ.ಎಂ.ವೃಷಭೇಂದ್ರಯ್ಯ ಗಣಿ ಕಂಪೆನಿ, ಎಸ್.ಎಲ್.ಜೈರಾಂ, ಶೇಖ್‌ಸಾಬ್, ವೀಯೆಂ ಮಿನರಲ್ಸ್, ಕೆ.ಎಂ.ಪಾರ್ವತಮ್ಮ, ಎಂಬಿಟಿ, ರಾಜಾಪುರ ಮೈನ್ಸ್, ಹಿಂದ್ ಟ್ರೇಡರ್ಸ್, ಎಲ್‌ಎಂಸಿ, ಡಿಎಂಎಸ್, ಎನ್.ರತ್ನಯ್ಯ, ಸ್ಪಾರ್ಕ್‌ಲೈನ್, ಆದರ್ಶ ಮಿನರಲ್ಸ್, ಆರ್.ಎಂ.ಪೌಲ್, ಶಿವ ವಿಲಾಸ್, ಕಾರ್ತಿಕೇಯ, ಬಿ.ಆರ್.ಯೋಗೇಂದ್ರನಾಥ್ ಸಿಂಗ್ ಮತ್ತು ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಗಳಿಗೆ ನೋಟಿಸ್ ನೀಡಲಾಗಿದೆ.ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತರ ಮೊದಲ ಮತ್ತು ಎರಡನೇ ವರದಿಯಲ್ಲಿರುವ ಆರೋಪಗಳು, ಸಿಇಸಿ ವರದಿಯಲ್ಲಿರುವ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಿದೆ. ಗಣಿ ಮತ್ತು ಖನಿಜ ಕಾಯ್ದೆಯ ಕಲಂ 4ಎ ಮತ್ತು ಖನಿಜ ನಿಯಂತ್ರಣ ನಿಯಮ-1960ರ ಅಡಿಯಲ್ಲಿ ಈ ನೋಟಿಸ್ ಜಾರಿ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry