ಬುಧವಾರ, ನವೆಂಬರ್ 20, 2019
25 °C

`ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ'

Published:
Updated:

ಧಾರವಾಡ: ನಗರದಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಗಣಿತ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂದು ಡಿಡಿಪಿಐ ಡಾ.ಬಿ.ಕೆ.ಎಸ್.ವರ್ಧನ್ ಸ್ಪಷ್ಟಪಡಿಸಿದ್ದಾರೆ.`ಪ್ರಶ್ನೆಪತ್ರಿಕೆಗಳನ್ನು ಅತ್ಯಂತ ಭದ್ರವಾದ ಕೊಠಡಿಯಲ್ಲಿ(ಸ್ಟ್ರಾಂಗ್‌ರೂಂ) ಇಡಲಾಗಿರುತ್ತದೆ. ಪರೀಕ್ಷೆಯ ಸಂದರ್ಭದಲ್ಲಿಯೂ ಪರೀಕ್ಷಾ ವೇಳೆಯ ಹೊತ್ತಿಗೆ ಪ್ರಶ್ನೆಪತ್ರಿಕೆಯ ಕಟ್ಟುಗಳನ್ನು ಬಿಚ್ಚಲಾಗುತ್ತದೆ. ಹಾಗಾಗಿ ಇಲಾಖೆ ನೀಡಿದ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿಲ್ಲ' ಎಂದು `ಪ್ರಜಾವಾಣಿ'ಗೆ ತಿಳಿಸಿದರು.`ಸೋಮವಾರ ಪ್ರಶ್ನೆಪತ್ರಿಕೆ ಸೋರಿಕೆಯಾದ ವದಂತಿ ಹಿನ್ನೆಲೆಯಲ್ಲಿ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಅವರಿಗೆ ತಿಳಿಸಿದ್ದೆ. ಯಾವುದೇ ಸೋರಿಕೆಯಾಗಿಲ್ಲ ಎಂದು ಅವರು ವರದಿ ನೀಡಿದ್ದಾರೆ' ಎಂದರು.ನಿಗದಿಯಂತೆ ಸೋಮವಾರ ಬೆಳಗ್ಗೆ 9.30ಕ್ಕೆ ಗಣಿತ ಪರೀಕ್ಷೆ ಪ್ರಾರಂಭವಾಗಿತ್ತು. ಇದಕ್ಕೂ 15 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತರಲಾಯಿತು. ಹೀಗೆ ಬಂದ ಪ್ರಶ್ನೆಪತ್ರಿಕೆಗಳನ್ನು ಬಿಚ್ಚಿದ ಕೆಲವು ಶಿಕ್ಷಕರು, ಪ್ರಶ್ನೆಗಳನ್ನು ಹೊರಗಡೆಯ ತಮ್ಮವರಿಗೆ ತಿಳಿಸಿದರು. ಹೀಗೆ ಪ್ರಶ್ನೆ ಪಡೆದವರು ಕೈಬರಹದಲ್ಲಿ ಉತ್ತರ ಸಿದ್ಧಪಡಿಸಿ, ಮರಳಿ ಪರೀಕ್ಷಾ ಕೇಂದ್ರದಲ್ಲಿಯ ಶಿಕ್ಷಕರಿಗೆ ನೀಡಿದ್ದಾರೆ' ಎಂದು ವಿದ್ಯಾರ್ಥಿಯ ಪೋಷಕರು ದೂರಿದ್ದಾರೆ.ಸೋಮವಾರ ಗಣಿತ ವಿಷಯದ (31 ಅಂಕಗಳ) ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಕೆಲವೇ ಕೆಲವು ವಿದ್ಯಾರ್ಥಿಗಳಿಗೆ ತಲುಪಿದೆ ಎಂಬ ವದಂತಿ ಹರಡಿತ್ತು. ಇಲ್ಲಿಯ ಕೆಲವು ಜೆರಾಕ್ಸ್ ಅಂಗಡಿಗಳಲ್ಲಿ ಮೂಲ ಪ್ರಶ್ನೆಪತ್ರಿಕೆಗಳನ್ನೇ ಹೋಲುವ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿವೆ ಎಂದು ಆರೋಪಿಸಿದ ಕೆಲವರು, ಅದರ ಪ್ರತಿಯನ್ನು ಪಡೆದುಕೊಂಡು ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಹೋಗಿದ್ದರು.

ಪ್ರತಿಕ್ರಿಯಿಸಿ (+)