ಶುಕ್ರವಾರ, ನವೆಂಬರ್ 22, 2019
26 °C

ಗಣಿಯಲ್ಲಿ ಮತ್ತೆ ಶಬ್ದ

Published:
Updated:

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೊಸ ಗಣಿಗಾರಿಕೆಗೆ ಪರವಾನಗಿ ನೀಡುವುದರ ಮೇಲಿದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ಷರತ್ತು ಬದ್ಧವಾಗಿ ಸಡಿಲಿಸಿರುವುದರಿಂದಾಗಿ ದೇಶೀ ಉಕ್ಕು ಉತ್ಪಾದಕರ ಮುಖದಲ್ಲಿ ಸಂತಸ ಲಾಸ್ಯವಾಡಲಾರಂಭಿಸಿದೆ. ಎ ವರ್ಗದ 27 ಮತ್ತು ಬಿ ವರ್ಗದ 63 ಗಣಿ ಗುತ್ತಿಗೆಗಳ ಮೇಲಿದ್ದ ಎರಡು ವರ್ಷಗಳ ಗಣಿಗಾರಿಕೆ ನಿಷೇಧದಿಂದಾಗಿ ಕಚ್ಚಾ ಉಕ್ಕು ಕೊರತೆ ತಲೆದೋರಿತ್ತು ಹಾಗೂ ರಫ್ತು ವಹಿವಾಟು ಕುಸಿದಿತ್ತು.ಗಣಿಗಾರಿಕೆಯಿಂದ ಪರಿಸರಕ್ಕೆ  ಆಗಿರುವ ಹಾನಿ ಕುರಿತು ಸುಪ್ರೀಂಕೋರ್ಟ್‌ನಿಂದ ನೇಮಕವಾದ ಉನ್ನತಾಧಿಕಾರ ಸಮಿತಿ (ಸಿಇಸಿ) ಅಧ್ಯಯನ ನಡೆಸಿ ಮಾಡಿದ ಶಿಫಾರಸಿಗೆ ಅನುಗುಣವಾಗಿ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಇದೇ ಸಂದರ್ಭದಲ್ಲಿ  ಪರಿಸರಕ್ಕೆ ತೀವ್ರ ಹಾನಿ ಮಾಡಿದ್ದ ಸಿ ವರ್ಗದ 49 ಗಣಿ ಗುತ್ತಿಗೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವುದು ಸ್ವಾಗತಾರ್ಹ ನಿಲುವಾಗಿದೆ.ಪರಿಸರ ಮತ್ತು ಬೊಕ್ಕಸಕ್ಕೆ  ಭಾರಿ ನಷ್ಟ ಉಂಟುಮಾಡಿರುವ ಅಕ್ರಮ ಗಣಿಗಾರಿಕೆ ಕಳಂಕ ಕರ್ನಾಟಕದಲ್ಲಿ ಹಗರಣದ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆಡಳಿತ ಮತ್ತು ವಿರೋಧ ಪಕ್ಷಗಳೆರಡಕ್ಕೂ ಕಳಂಕದ ಮಸಿ ಮೆತ್ತಿಕೊಂಡಿತು. ಈ ಅಕ್ರಮ ಗಣಿಗಾರಿಕೆಯಲ್ಲಿ ರಾಜ್ಯದ ಸಚಿವರು ಮತ್ತು ಸಂಸದರೂ ಭಾಗಿಗಳಾಗಿದ್ದಾರೆ ಎನ್ನುವುದು ನಾಚಿಕೆಗೇಡಿನ ವಿಚಾರ.ಯದ್ವಾತದ್ವಾ ಗಣಿಗಾರಿಕೆ ಮೂಲಕ ಪರಿಸರ ನಾಶ ಮಾಡಿರುವ ಕಂಪೆನಿಗಳ ವಿರುದ್ಧ ಕ್ರಮ ಮತ್ತು ಕಂಪೆನಿಗಳಿಂದಲೇ ಪರಿಹಾರಧನ ವಸೂಲು ಮಾಡುವಂತೆ ಕೋರ್ಟ್ ಹೇಳಿರುವುದು ನ್ಯಾಯಸಮ್ಮತವಾಗಿದೆ. ಸರ್ಕಾರ ಆ ಕಾರ್ಯಕ್ಕೆ ಮುಂದಾಗಬೇಕಾಗಿರುವುದು ಈಗ ಆಗಬೇಕಾದ ಕೆಲಸ.  ಎ ಮತ್ತು ಬಿ ವರ್ಗದ ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ  ಕಚ್ಚಾ ವಸ್ತು ರಫ್ತು ಹಾಗೂ ಪೂರೈಕೆ ಪ್ರಮಾಣ ಕ್ಷೀಣಿಸಿದೆ.ಗಣಿಗಾರಿಕೆ ಚಟುವಟಿಕೆಗಳು ಈಗ ಆರಂಭವಾದರೂ ಪೂರ್ಣಪ್ರಮಾಣದ ರಫ್ತುವಹಿವಾಟಿಗೆ ಇನ್ನಷ್ಟುದಿನ ಕಾಯಬೇಕಾಗುವುದು ಅನಿವಾರ್ಯವಾಗಬಹುದು. ಕಾರ್ಯಾರಂಭ ಮಾಡಬೇಕಾಗಿರುವ 115 ಗಣಿಗಳ ಪೈಕಿ 35 ರಿಂದ 40 ಗಣಿಗಳು ತತ್‌ಕ್ಷಣಕ್ಕೆ ಕಾರ್ಯಾರಂಭ ಮಾಡುವ ಸ್ಥಿತಿಯಲ್ಲಿಲ್ಲ. ನಿಷೇಧ ಕ್ರಮದಿಂದಾಗಿ ಕರ್ನಾಟಕದ ಈ ಸಾಲಿನ ಉಕ್ಕು ಉತ್ಪಾದನೆ ಗಣನೀಯವಾಗಿ ಕುಸಿಯುವ ಎಲ್ಲ ಸಾಧ್ಯತೆ ಇದೆ.ಕರ್ನಾಟಕ ಆಂಧ್ರ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿರುವ ಎ ವರ್ಗದ ಹಾಗೂ ಬಿ ವರ್ಗದ ಏಳು ಗಣಿಗುತ್ತಿಗೆಗಳ ಬಗ್ಗೆ ವಿವಾದವಿದೆ. ಉಭಯರಾಜ್ಯಗಳ ಗಡಿವಿವಾದ ಮುಗಿಯುವವರೆಗೂ ಈ ಗಣಿಗಳು ಸ್ಥಗಿತವಾಗಿರುತ್ತವೆ. ಇದರಿಂದಾಗಿ ಮುಂದಿನ ವರ್ಷಗಳಲ್ಲಿ ಉತ್ಪಾದನೆ ಮತ್ತಷ್ಟು ಕುಸಿಯುವ ಸಂಭವವಿದೆ. ಎ ಮತ್ತು ಬಿ ವರ್ಗದ ಗಣಿಗಾರಿಕೆಯಲ್ಲಿ ಸಣ್ಣಪುಟ್ಟ ಅಕ್ರಮಗಳು ನಡೆದಿದ್ದು, ದಂಡ ಮತ್ತಿತರ ಷರತ್ತಿನ ಮೇಲೆ ಗಣಿಗಾರಿಕೆ ಪುನರಾರಂಭಕ್ಕೆ ಒಪ್ಪಿಗೆ  ನೀಡಲಾಗಿದೆ.ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೆ ನಿಷೇಧದಂತಹ ಪರಮಾಸ್ತ್ರದ ಬಳಕೆ ಸಾಧ್ಯವಾಗುತ್ತಿರಲಿಲ್ಲ. ಈಗಲೂ ಸಿ ವರ್ಗದಡಿ ಅನರ್ಹಗೊಂಡಿರುವ ಕೆಲವು ಕಂಪೆನಿಗಳು ಎ ಮತ್ತು ಬಿ ವರ್ಗದಲ್ಲೂ ಸೇರಿಕೊಂಡಿದ್ದು ಪರವಾನಗಿ ಪಡೆದಿರುವುದು ಕಂಡುಬಂದಿದೆ. ಇಂತಹ ಲೋಪಗಳನ್ನು ಸರ್ಕಾರ ಪತ್ತೆಹಚ್ಚಿ ಕ್ರಮ ಜರುಗಿಸಬೇಕು. ಆಗ ಮಾತ್ರ ಮತ್ತದೇ ಪರಿಸ್ಥಿತಿ ಮರುಕಳಿಸುವುದು ತಪ್ಪುತ್ತದೆ.

ಪ್ರತಿಕ್ರಿಯಿಸಿ (+)