ಗಣಿ ಅಕ್ರಮ: ರೆಡ್ಡಿ ಪತ್ನಿಗೆ ಸಮನ್ಸ್

ಮಂಗಳವಾರ, ಜೂಲೈ 23, 2019
20 °C

ಗಣಿ ಅಕ್ರಮ: ರೆಡ್ಡಿ ಪತ್ನಿಗೆ ಸಮನ್ಸ್

Published:
Updated:

ಬೆಂಗಳೂರು: ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಇದೇ 10ರಂದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಪತ್ನಿ ಜಿ.ಲಕ್ಷ್ಮಿ ಅರುಣಾ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಸಮನ್ಸ್ ಜಾರಿಗೆ ಆದೇಶಿಸಿದೆ.ಸುಪ್ರೀಂಕೋರ್ಟ್ ಆದೇಶದಂತೆ ಎಎಂಸಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದ ಸಿಬಿಐ ಪೊಲೀಸರು, ತನಿಖೆ ನಡೆಸಿದ್ದರು. ರೆಡ್ಡಿ, ಲಕ್ಷ್ಮಿ ಅರುಣಾ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಮೇ 30ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಎರಡನೇ ಆರೋಪಿಯಾಗಿರುವ ಲಕ್ಷ್ಮಿ ವಿರುದ್ಧ ವಿಚಾರಣೆ ಆರಂಭಿಸಿದ ನ್ಯಾಯಾಧೀಶ ಬಿ.ಎಂ.ಅಂಗಡಿ ಅವರು, ಇದೇ 10ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿಗೆ ಆದೇಶಿಸಿದರು.ಬಂಧನ ವಿಸ್ತರಣೆ: ಇದೇ ವೇಳೆ ಜನಾರ್ದನ ರೆಡ್ಡಿ, ಅವರ ಬಂಟ ಮೆಹಫೂಜ್ ಅಲಿಖಾನ್, ಐಎಫ್‌ಎಸ್ ಅಧಿಕಾರಿ ಎಸ್.ಮುತ್ತಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಸ್.ಪಿ.ರಾಜು ಮತ್ತು ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 4ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಜನಾರ್ದನ ರೆಡ್ಡಿ ಮತ್ತು ಇತರೆ ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಲಾಯಿತು. ನಾಲ್ವರ ನ್ಯಾಯಾಂಗ ಬಂಧನದ ಅವಧಿಯನ್ನು ಆ. 4ರವರೆಗೆ ವಿಸ್ತರಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಮುಂದೂಡಿದರು.ಈ ನಡುವೆ ಪ್ರಕರಣದಲ್ಲಿ ಜಾಮೀನು ಕೋರಿ ರೆಡ್ಡಿ ಸೇರಿದಂತೆ ಐವರೂ ಸೋಮವಾರ ಮತ್ತೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. `ಎಎಂಸಿ ವಿರುದ್ಧದ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಸಿಬಿಐ ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಈಗ ಸಾಕ್ಷ್ಯ ನಾಶದಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿರುವುದರಿಂದ ಜಾಮೀನು ಮಂಜೂರು ಮಾಡಬೇಕು~ ಎಂದು ಆರೋಪಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry