ಗಣಿ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಆಗ್ರಹ

7

ಗಣಿ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಆಗ್ರಹ

Published:
Updated:
ಗಣಿ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಆಗ್ರಹ

ಬೆಂಗಳೂರು: ಬಳ್ಳಾರಿಯ `ಗಣಿ ಧಣಿ~ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರಿಂದ ಲಂಚ ಪಡೆದ ಆರೋಪ ಹೊತ್ತ 787 ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು, ಕೃಷಿಗೆ ಒತ್ತು...ಹೀಗೆ ಹಲವು ನಿರ್ಣಯಗಳನ್ನು ಶನಿವಾರ ಇಲ್ಲಿನ ಅರಮನೆಯ ದರ್ಬಾರ್ ಹಾಲ್‌ನಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿಯಲ್ಲಿ ತೆಗೆದುಕೊಳ್ಳಲಾಯಿತು.ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ದೋಷಾರೋಪಕ್ಕೆ ಒಳಗಾಗಿರುವ ಬಳ್ಳಾರಿಯ ಮಾಜಿ ಸಚಿವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಬಾರದು. ಒಂದು ವೇಳೆ ಸೇರಿಸಿಕೊಂಡರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.ವಸತಿ ಸಚಿವ ವಿ.ಸೋಮಣ್ಣ ಅವರ ಹೆಸರು ಕೂಡ ವರದಿಯಲ್ಲಿದೆ. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದಿದ್ದರೂ ಸೇರಿಸಿಕೊಳ್ಳಲಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ಕಾರ್ಯಕಾರಿಣಿ ತೆಗೆದುಕೊಂಡ ನಿರ್ಣಯದ ಕುರಿತು ಅವರು ಮಾಹಿತಿ ನೀಡಿದರು.ಆರು ವರ್ಷಗಳ ನಂತರ ಕಾರ್ಯಕಾರಿಣಿ ನಡೆದಿದ್ದು, ಅಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಶೀಘ್ರ ಗುಣಮುಖರಾಗಲಿ ಎಂಬ ಹಾರೈಕೆ ಸೇರಿದಂತೆ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಕೃಷಿ, ರಾಜಕೀಯ, ಸಾಮಾಜಿಕ ನ್ಯಾಯ, ಸಾಮಾಜಿಕ ಭದ್ರತಾ ಯೋಜನೆಗಳ ಕುರಿತೂ ಕಾರ್ಯಕಾರಿಣಿಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.ಲೋಕಾಯುಕ್ತ ವರದಿಯಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರೂ ಇದ್ದು, ಅವರು ಕೂಡ ಆ ಬಗ್ಗೆ ರಾಜ್ಯದ ಜನತೆಗೆ ವಿವರಣೆ ನೀಡಬೇಕು ಎಂದು ಪರಮೇಶ್ವರ್ ಒತ್ತಾಯಿಸಿದರು.ಆರು ವರ್ಷಗಳ ನಂತರ ಈ ಸಭೆ ನಡೆದಿರುವ ಕಾರಣಕ್ಕೆ ಈ ಅವಧಿಯಲ್ಲಿನ ಎಲ್ಲ ಬೆಳವಣಿಗೆಗಳ ಕುರಿತೂ ಚರ್ಚಿಸಲಾಯಿತು. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋಲುಂಡಿದ್ದರ ಕುರಿತೂ ಅವಲೋಕಿಸಲಾಯಿತು ಎಂದು ವಿವರಿಸಿದರು.ಲೋಕಾಯುಕ್ತ ವರದಿಯಲ್ಲಿ ಪತ್ರಕರ್ತರ ಹೆಸರುಗಳಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಲಿ ಎಂದು ಪರಮೇಶ್ವರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ, ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ರಾಜ್ಯಸಭೆ ಉಪ ಸಭಾಪತಿ ಕೆ. ರೆಹಮಾನ್ ಖಾನ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕಿ ಮೋಟಮ್ಮ, ಮುಖಂಡರಾದ ಜಾಫರ್ ಷರೀಫ್, ಆರ್.ವಿ.ದೇಶಪಾಂಡೆ, ಡಿ.ಕೆ. ಶಿವಕುಮಾರ್, ಬಿ.ಎಲ್.ಶಂಕರ್, ಎಂ.ವಿ. ರಾಜಶೇಖರನ್, ವಿ.ಎಸ್.ಉಗ್ರಪ್ಪ, ಸಲೀಂ ಅಹಮದ್ ಸೇರಿದಂತೆ ಇತರರು ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದರು.ಮಿಸ್ತ್ರಿ ಬಗ್ಗೆ ಮೆಚ್ಚುಗೆ : ರಾಜ್ಯ ಕಾಂಗ್ರೆಸ್ ಉಸ್ತುವಾರಿಯೂ ಆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರ ಬದ್ಧತೆ ಬಗ್ಗೆ ಕಾರ್ಯಕಾರಿಣಿಯಲ್ಲಿ ಎಲ್ಲ ಮುಖಂಡರು ಮುಕ್ತ ಕಂಠದಿಂದ ಶ್ಲಾಘಿಸಿದ ಘಟನೆ ನಡೆಯಿತು.ಎಐಸಿಸಿ ಪ್ರಧಾನ ಕಾರ್ಯದರ್ಶಿಯೊಬ್ಬರು ರಾಜ್ಯ ಸುತ್ತಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದು ಇದೇ ಮೊದಲು. ಸತತ ಮೂರು ದಿನಗಳಿಂದ ಎಲ್ಲ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ವಿಚಾರ ವಿನಿಮಯ ಮಾಡಿದ್ದೂ ಇದೇ ಮೊದಲು ಎಂದು ಎಲ್ಲ ಮುಖಂಡರು ಶ್ಲಾಘಿಸಿದರು.ಇದರಿಂದ ಮಿಸ್ತ್ರಿ ಪುಳಕಿತರಾದರು ಎನ್ನಲಾಗಿದೆ. `ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ವಿರಮಿಸುವುದಿಲ್ಲ. ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನ ಸಿಕ್ಕಿದೆ. ಇದೇ ರೀತಿ ಮುಂದೆಯೂ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡುವೆ~ ಎಂದು ಮಿಸ್ತ್ರಿ ಹೇಳಿದರು ಎನ್ನಲಾಗಿದೆ.

 

`ಮತದಾರರೊಂದಿಗೆ ಮುಖಾಮುಖಿ~

ಬೆಂಗಳೂರು: `ಕಾಂಗ್ರೆಸ್ ನಡಿಗೆ- ಜನರ ಬಳಿಗೆ~ ರೀತಿಯಲ್ಲೇ ಮತ್ತೊಂದು ಕಾರ್ಯಕ್ರಮ ಆಯೋಜಿಸಲು ರಾಜ್ಯ ಕಾಂಗ್ರೆಸ್ ಸಜ್ಜಾಗಿದೆ.ಅಕ್ಟೋಬರ್ 2ರಿಂದ ಪ್ರತಿ ಬೂತ್ ಮತ್ತು ವಾರ್ಡ್ ಮಟ್ಟದಲ್ಲೂ `ಮತದಾರರೊಂದಿಗೆ ಮುಖಾಮುಖಿ~ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.

 

ಒಗ್ಗಟ್ಟಿನ ಮಂತ್ರ

ಬೆಂಗಳೂರು:  ಶನಿವಾರ ನಡೆದ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ, ಭಾಷಣ ಮಾಡಿದ ಬಹುತೇಕ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.ಎಲ್ಲರೂ ಒಗ್ಗಟ್ಟಿನಿಂದ ಇದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಪಣ ತೊಟ್ಟರು ಎನ್ನಲಾಗಿದೆ.ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಕೂಡ ಪಕ್ಷ ಕಟ್ಟುವ ಕಡೆ ಗಮನ ಕೊಡಿ. ಕೇಂದ್ರದಿಂದ ಯಾವುದೇ ರೀತಿಯ ನೆರವು ಬೇಕಾದರೂ ಒಗ್ಗಟ್ಟಿನಿಂದ ಇದ್ದು ಕೊಡಿಸುತ್ತೇವೆ ಎನ್ನುವ ಭರವಸೆ ನೀಡಿದರು ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry