ಗಣಿ : ತ್ರೀ-ಡಿ ಲೇಸರ್ ಸಮೀಕ್ಷೆ ಇಂದು

ಬಳ್ಳಾರಿ: ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ)ಯ ಗಣಿ ಪ್ರದೇಶದಲ್ಲಿ ನಡೆದಿರುವ ಅಕ್ರಮದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ತಂಡವು ಶನಿವಾರ ಜಿಲ್ಲೆಯಲ್ಲಿನ ಎಎಂಸಿ ಗಣಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಜಿಲ್ಲೆಯ ಸಂಡೂರು ತಾಲ್ಲೂಕಿನ ರಾಮಗಡ ಅರಣ್ಯ ಪ್ರದೇಶದಲ್ಲಿರುವ ಎಎಂಸಿ ಗಣಿ ಪ್ರದೇಶಕ್ಕೆ ಬೆಳಿಗ್ಗೆ ಭೇಟಿ ನೀಡಿದ ಸಿಬಿಐನ ವರಿಷ್ಠಾಧಿಕಾರಿ ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದ ತಂಡ, ತನಿಖೆಯ ಅಂಗವಾಗಿ ಗಣಿಗಾರಿಕೆಯ ಪ್ರಮಾಣ ಹಾಗೂ ಗಣಿ- ಗಡಿಗಳ ಪತ್ತೆಗಾಗಿ ತ್ರೀ-ಡಿ ಲೇಸರ್ ಸಮೀಕ್ಷೆಗಾಗಿ ಕೆಲವೆಡೆ ಗುರುತು ಮಾಡಿತು. ಜಾರ್ಖಂಡ್ನ ಸಿಂಗರೇಣಿಯಲ್ಲಿರುವ ಕೋಲ್ ಇಂಡಿಯಾ ಲಿಮಿಟೆಡ್ ಅಧಿಕಾರಿಗಳೂ ಪರಿಶೀಲನೆಯಲ್ಲಿ ಭಾಗವಹಿಸಿದ್ದಾರೆ.
ಈ ತಂಡವು ಭಾನುವಾರ ಗಣಿ ಪ್ರದೇಶದಲ್ಲಿ ತ್ರೀ-ಡಿ ಲೇಸರ್ ಸಮೀಕ್ಷೆ ಕಾರ್ಯ ನಡೆಸಲಿದೆ. ಎಎಂಸಿ ಗಣಿ ಪ್ರದೇಶದಲ್ಲಿ ನಡೆಸಲಾಗಿರುವ ಗಣಿಗಾರಿಕೆ, ತೆಗೆಯಲಾಗಿರುವ ಅದಿರಿನ ಪ್ರಮಾಣ, ಗುಣಮಟ್ಟ ಮತ್ತು ಸಾಗಣೆ ಮಾಡಿರುವ ವಿವರ ಕುರಿತು ಅಗತ್ಯ ಮಾಹಿತಿ ಕಲೆ ಹಾಕಲಾಗುತ್ತಿದೆ.
ಐಬಿಎಂ ನಿಯಮಗಳ ಅನುಸಾರ ಗಣಿಗಾರಿಕೆ ನಡೆಸಲಾಗಿದೆಯೇ, ಗಡಿ ಒತ್ತುವರಿ ಮಾಡಲಾಗಿದೆಯೇ ಎಂಬ ಅಂಶಗಳನ್ನು ಜಿಪಿಆರ್ಎಸ್ ಸಮೀಕ್ಷೆ ಮೂಲಕ ಗುರುತಿಸಲಾಯಿತಲ್ಲದೆ, ಭಾನುವಾರ ತ್ರೀ-ಡಿ ಲೇಸರ್ ಸಮೀಕ್ಷೆ ನಡೆಸಲು ಕೆಲವು ಪಾಯಿಂಟ್ಗಳನ್ನು ಗುರುತಿಸಲಾಯಿತು. ಅತ್ಯಾಧುನಿಕ ಮಾದರಿಯ ತ್ರೀ-ಡಿ ಲೇಸರ್ ಸಮೀಕ್ಷೆ ಮೂಲಕ ಗಣಿಗಾರಿಕೆ ಕುರಿತ ಸಮಗ್ರ ಮಾಹಿತಿ ಕಲೆ ಹಾಕಬಹುದಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಗಳು ತಿಳಿಸಿವೆ.
ಶನಿವಾರ ನಡೆದ ಪರಿಶೀಲನೆ ವೇಳೆ ಅರಣ್ಯ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿ ಸಹ ಉಪಸ್ಥಿತರಿದ್ದು, ಸಿಬಿಐ ಸಿಬ್ಬಂದಿಗೆ ಮಾಹಿತಿ ನೀಡಿದರು. ಪೊಲೀಸ್ ಸಿಬ್ಬಂದಿ ಸೂಕ್ತ ಭದ್ರತೆ ಒದಗಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.