ಗಣಿ ದಂಧೆ ಕಡಿವಾಣಕ್ಕೆ ತಂತ್ರಾಂಶ

7

ಗಣಿ ದಂಧೆ ಕಡಿವಾಣಕ್ಕೆ ತಂತ್ರಾಂಶ

Published:
Updated:
ಗಣಿ ದಂಧೆ ಕಡಿವಾಣಕ್ಕೆ ತಂತ್ರಾಂಶ

ನವದೆಹಲಿ: ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಭಾರತೀಯ ಗಣಿ ಬ್ಯೂರೊ (ಐಬಿಎಂ), ಅದಿರು ವಹಿವಾಟಿಗೆ ಸಂಬಂಧಿಸಿದ ಲೆಕ್ಕಪತ್ರಗಳ ದಾಖಲಾತಿಯಲ್ಲಿ ಏಕರೂಪತೆ ತರಲು ಹೊಸದೊಂದು ಸಾಫ್ಟ್‌ವೇರ್ (ತಂತ್ರಾಂಶ) ಅಭಿವೃದ್ಧಿ ಪಡಿಸುವ ಪ್ರಸ್ತಾವ ಸಿದ್ಧಪಡಿಸಿದೆ.ಖನಿಜಗಳ ಹೊರತೆಗೆಯುವಿಕೆ, ಅದರ ಲೆಕ್ಕಪತ್ರ ಮತ್ತು ಸಾಗಣೆಯಲ್ಲಿನ ಕ್ಷಮತೆ ಹೆಚ್ಚಿಸಲು `ಅದಿರು ವಹಿವಾಟಿಗೆ ಸಂಬಂಧಿಸಿದ ಲೆಕ್ಕಪತ್ರಗಳ ದಾಖಲಾತಿ ಅಭಿವೃದ್ಧಿ ಮತ್ತು ಅನುಷ್ಠಾನ ಸಾಫ್ಟ್‌ವೇರ್~ ಎನ್ನುವ ಹೊಸ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುವುದು.

 

ಈ ಸಾಫ್ಟ್‌ವೇರ್, ಅದಿರು ಸಾಗಣೆ ಮತ್ತು ತಪಾಸಣೆಗೆ ಪ್ರಮುಖ ವಾಹಕವಾಗಿರುವ ರೈಲ್ವೆ, ಬಂದರು ಮತ್ತು ಸುಂಕ (ಕಸ್ಟಮ್ಸ) ಇಲಾಖೆಗಳನ್ನು ಒಂದಕ್ಕೊಂದು ಸಂಪರ್ಕಿಸಲಿದೆ ಎಂದು ಗಣಿಗಾರಿಕೆ ಸಚಿವಾಲಯದ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದನ್ನು ಅಭಿವೃದ್ಧಿಪಡಿಸುವ ಗುರಿ  ಇದೆ.ಹೊಸ ಸಾಫ್ಟ್‌ವೇರ್‌ನಿಂದ ರಾಜ್ಯ ಸರ್ಕಾರಗಳಿಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗುವ  ಜತೆಗೆ ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಅದಿರು ನಿಯಂತ್ರಣ ಪ್ರಾಧಿಕಾರವೂ ಆಗಿರುವ ಐಬಿಎಂ, ಈಗಾಗಲೇ ಗಣಿ ಮಾಲೀಕರ, ಏಜೆಂಟರ, ದಾಸ್ತಾನುದಾರರ ಮತ್ತು ರಫ್ತುದಾರರ ನೋಂದಣಿ ಆರಂಭಿಸಿ ಅವರಿಗೆ ಗುರುತಿನ ಸಂಖ್ಯೆ ನೀಡತೊಡಗಿದೆ.ಇದುವರೆಗೆ  5,198 ಅರ್ಜಿಗಳು ಬಂದಿದ್ದು, ಇದರಲ್ಲಿ 5048 ಕಂಪೆನಿಗಳು ನೋಂದಣಿಯಾಗಿವೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಎಚ್ಚರಿಕೆ ನೀಡುವ ಸಲುವಾಗಿ ಗಣಿ ಚಟುವಟಿಕೆಗಳ ಬಗ್ಗೆ ನಿಗಾ ಇರಿಸಲು ಪ್ರತ್ಯೇಕ ಸಮಿತಿಯೊಂದನ್ನು ರಚಿಸುವಂತೆ ಗಣಿಗಾರಿಕೆ ಅಧಿಕವಿರುವ ರಾಜ್ಯ ಸರ್ಕಾರಗಳಿಗೆ ಐಬಿಎಂ ಸೂಚಿಸಿದೆ.ಅಕ್ರಮ ಗಣಿಗಾರಿಕೆ ಹಗರಣದಿಂದಾಗಿ ಕಬ್ಬಿಣದ ಅದಿರು ಗಣಿಗಾರಿಕೆ ಕರ್ನಾಟಕ ನಿರ್ಬಂಧ ಹೇರಿರುವುದರಿಂದ ಗಣಿಗಾರಿಕೆ ಬೆಳವಣಿಗೆ ಇಳಿಮುಖವಾಗಿದೆ. 2010-11ನೇ ಸಾಲಿಗೆ ಹೋಲಿಸಿದರೆ 2011-12ರಲ್ಲಿ ಪ್ರಗತಿ ಪ್ರಮಾಣ ಶೇ 10.95ರಷ್ಟು ಕುಂಠಿತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry