ಗಣಿ ನಾಡಿನಲ್ಲಿ `ಯಾರು, ಎಲ್ಲಿ?'

7

ಗಣಿ ನಾಡಿನಲ್ಲಿ `ಯಾರು, ಎಲ್ಲಿ?'

Published:
Updated:
ಗಣಿ ನಾಡಿನಲ್ಲಿ `ಯಾರು, ಎಲ್ಲಿ?'

ಬಳ್ಳಾರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಒಂಬತ್ತು ಕ್ಷೇತ್ರಗಳ ಪೈಕಿ ಎಂಟರಲ್ಲಿ ಜಯಭೇರಿ ಬಾರಿಸಿ ಬೀಗಿದ್ದ ಬಿಜೆಪಿ, ನಂತರದ ರಾಜಕೀಯ ಬೆಳವಣಿಗೆಗಳಿಂದಾಗಿ ಸೊರಗಿ ಹೋಗಿದೆ.ಬಿಜೆಪಿಯಿಂದಲೇ ಅಧಿಕಾರದ ಸವಿ ಅನುಭವಿಸಿದ ಬಿ.ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು, 'ಬಳ್ಳಾರಿ ಕಾಂಗ್ರೆಸ್‌ನ ಭದ್ರಕೋಟೆ' ಎಂಬುದನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾದರೂ ಈಗ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿ, ಬಿಜೆಪಿಗೆ ಸೆಡ್ಡು ಹೊಡೆದು ನಿಂತಿದ್ದಾರೆ.ಆದರೆ, ಚುನಾವಣೆ ಸಮೀಪಿಸುತ್ತಿದ್ದರೂ ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷದಿಂದ ಯಾರು ಸ್ಪರ್ಧಿಸಬಹುದು ಎಂಬುದು ಸ್ಪಷ್ಟವಾಗಿಲ್ಲ.

ಹಾಲಿ ಶಾಸಕರಾದ ಬಿ.ಶ್ರೀರಾಮುಲು, ಗಾಲಿ ಸೋಮಶೇಖರರೆಡ್ಡಿ, ಟಿ.ಎಚ್.ಸುರೇಶ್ ಬಾಬು, ಸಂಸದರಾದ ಜೆ.ಶಾಂತಾ, ಸಣ್ಣಫಕೀರಪ್ಪ ಅವರ ಗುಂಪು ಬಿಎಸ್‌ಆರ್ ಕಾಂಗ್ರೆಸ್ ಸಂಘಟನೆಗೆ  ಶ್ರಮಿಸುತ್ತಿದೆ. ಅವರೊಂದಿಗೇ ಗುರುತಿಸಿಕೊಂಡಿದ್ದ ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ, `ಅತ್ತ ಬಿಜೆಪಿ ಪರವೂ ಮಾತನಾಡದೆ, ಇತ್ತ ಬಿಎಸ್‌ಆರ್ ಕಾಂಗ್ರೆಸ್‌ನತ್ತ ಒಲವನ್ನೂ ವ್ಯಕ್ತಪಡಿಸದೆ' ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಷ್ಟಾಗಿ ಪ್ರಭಾವಿಯಾಗಿರದ ಗಾಲಿ ಕರುಣಾಕರ ರೆಡ್ಡಿ, ಸೋದರನ ಬಂಧನದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅಜ್ಞಾತವಾಸದಲ್ಲಿದ್ದಾರೆ.ವಿಜಯನಗರ (ಹೊಸಪೇಟೆ) ಕ್ಷೇತ್ರ ಪ್ರತಿನಿಧಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ರಾಜಕೀಯ ನಡೆ ನಿಗೂಢವಾಗಿದ್ದು ಕುತೂಹಲ ಕೆರಳಿಸಿದೆ. ಸಿರುಗುಪ್ಪ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ ಕ್ಷೇತ್ರಗಳ ಹಾಲಿ ಶಾಸಕರು ಬಿಜೆಪಿಯಲ್ಲೇ ಮುಂದುವರಿಯುತ್ತಾರೋ ಅಥವಾ ಪಕ್ಷಾಂತರ ಮಾಡುತ್ತಾರೋ ಎಂಬ ಕುತೂಹಲ ಜಿಲ್ಲೆಯಲ್ಲಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರ: ಮೂರೂವರೆ ವರ್ಷ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ನಡೆದ ಎರಡು ಚುನಾವಣೆಗಳ್ಲ್ಲಲೂ ಜಯ ಗಳಿಸಿದ ಬಿ.ಶ್ರೀರಾಮುಲು ಈಗಾಗಲೇ ಮತಯಾಚನೆ ಆರಂಭಿಸಿದ್ದಾರೆ.ಎರಡೂ ಚುನಾವಣೆಯಲ್ಲಿ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ರಾಮಪ್ರಸಾದ್ ಎರಡು ಬಾರಿಯೂ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. 2011ರ ನವೆಂಬರ್‌ನಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಮಣಿಸಲು ಇಡೀ ಸರ್ಕಾರವೇ ಕ್ಷೇತ್ರದಲ್ಲಿ ಬೀಡುಬಿಟ್ಟರೂ ಎರಡನೇ ಸ್ಥಾನ ಗಳಿಸಲೂ ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ರಾಮಪ್ರಸಾದ್ ಮತ್ತೆ ಆಕಾಂಕ್ಷಿಯಾಗಿದ್ದಾರೆ. ಆದರೆ ಅವರಿಗೆ ಟಿಕೆಟ್ ದೊರೆಯುವುದೇ ಎಂಬುದು  ಕುತೂಹಲವಾಗಿದೆ.ಇವರೊಂದಿಗೆ ಕ್ಷೇತ್ರದ ಟಿಕೆಟ್ ಕೋರಿ ನಗರಸಭೆ ಮಾಜಿ ಅಧ್ಯಕ್ಷ ಬಿ. ಕುಮಾರಸ್ವಾಮಿ, ಕೆ. ಗೂಳಪ್ಪ, ವಿ.ಕೆ. ಬಸಪ್ಪ, ವಿ. ವೆಂಕಟೇಶ್ವರುಲು, ವಿ. ಕೃಷ್ಣಪ್ಪ, ಸೀತಾರಾಂ, ಅಸುಂಡಿ ಹೊನ್ನೂರಪ್ಪ, ಗೋಪಾಲಕೃಷ್ಣ, ಯರಗುಡಿ ಗೋಪಾಲ್ ಅರ್ಜಿ ಸಲ್ಲಿಸಿದ್ದಾರೆ.ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ ಪಿ. ಗಾದಿಲಿಂಗಪ್ಪ ಅವರಿಗೇ ಮತ್ತೆ ಬಿಜೆಪಿ ಟಿಕೆಟ್ ದೊರೆಯುವ ಸಾಧ್ಯತೆಗಳಿವೆ.ಜೆಡಿಎಸ್‌ನಿಂದ ಮೀನಳ್ಳಿ ತಾಯಣ್ಣ ಸ್ಪರ್ಧಿಸುವುದೂ ಬಹುತೇಕ ಖಚಿತವಾಗಿದ್ದು, ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಅವರು ಮತಯಾಚನೆ ಆರಂಭಿಸಿರುವುದು ವಿಶೇಷ.

ಬಳ್ಳಾರಿ ನಗರ ಕ್ಷೇತ್ರ: ಈ ಕ್ಷೇತ್ರದಲ್ಲಿ ಗಾಲಿ ಸೋಮಶೇಖರ ರೆಡ್ಡಿ ವಿರುದ್ಧ ಸ್ಪರ್ಧಿಸಲು ಟಿಕೆಟ್ ಕೋರಿ ಕಾಂಗ್ರೆಸ್‌ನ ಪ್ರಮುಖರಾದ ಅಲ್ಲಂ ವೀರಭದ್ರಪ್ಪ, ಎಂ.ದಿವಾಕರ ಬಾಬು, ಕೆ.ಸಿ. ಕೊಂಡಯ್ಯ ಮತ್ತು ರಾಜ್ಯಸಭೆ ಸದಸ್ಯ ಅನಿಲ್ ಲಾಡ್ ಅರ್ಜಿ ಸಲ್ಲಿಸಿದ್ದಾರೆ. ಅನಿಲ್ ಲಾಡ್ ಈಗಾಗಲೇ ಮತದಾರರ ಮನವೊಲಿಕೆ ಕಾರ್ಯ ಆರಂಭಿಸಿರುವುದು ಪಕ್ಷದ ಇತರ ಆಕಾಂಕ್ಷಿಗಳಿಗೆ ಇರುಸುಮುರುಸು ಉಂಟುಮಾಡಿದೆ.ವಿಜಯನಗರ ಕ್ಷೇತ್ರ: ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ಈ ಕ್ಷೇತ್ರದಲ್ಲಿ ಸಚಿವ ಆನಂದ್‌ಸಿಂಗ್, ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಪಕ್ಷದಲ್ಲಿನ ಗೊಂದಲಗಳಿಂದಾಗಿ ಅವರು ಬಿಜೆಪಿಯಲ್ಲೇ ಮುಂದುವರಿಯುವರೇ ಎಂಬ ಶಂಕೆಯೂ ಮೂಡಿದೆ.ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಲ್ಲಿ ಟಿಕೆಟ್ ಸಿಗದವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಕಳೆದ ಚುನಾವಣೆಯಲ್ಲೂ ಇದೇ ರೀತಿಯಾಗಿ ಅಧಿಕೃತ ಅಭ್ಯರ್ಥಿ ಸೋಲುಂಡಿದ್ದರು. ಕಳೆದ ಬಾರಿ ಸೋತಿದ್ದ ಕಾಂಗ್ರೆಸ್‌ನ ಎಚ್.ಆರ್. ಗವಿಯಪ್ಪ, ಸ್ವತಂತ್ರವಾಗಿ ಸ್ಪರ್ಧಿಸಿ ಸೋತಿದ್ದ ದೀಪಕ್‌ಕುಮಾರ್ ಸಿಂಗ್ ಈ ಬಾರಿಯೂ ಟಿಕೆಟ್ ಕೋರಿದ್ದಾರೆ.

ಗಣಿ ಸಂಪತ್ತನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಅನೇಕ ಶ್ರೀಮಂತ ಅಭ್ಯರ್ಥಿಗಳೂ ರಾಜಕೀಯ ಪ್ರವೇಶಕ್ಕೆ ಹಾತೊರೆಯುತ್ತಿದ್ದು, ಅಂಥವರಿಗೆ ಪ್ರಮುಖ ಪಕ್ಷಗಳು ಮಣೆ ಹಾಕುವ ಸಾಧ್ಯತೆಗಳೂ ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry