ಶನಿವಾರ, ಜೂನ್ 19, 2021
27 °C

ಗಣಿ ನಾಡಿನಲ್ಲೀಗ ಸಾಂಪ್ರದಾಯಿಕ ಕ್ರಿಕೆಟ್‌ ಕಲರವ

ಸಿದ್ದಯ್ಯ ಹಿರೇಮಠ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ದೇಶದ ಯುವಜನರೆಲ್ಲ ದಿಢೀರನೇ ಮಾರು ಹೋಗುವುದು ಕ್ರಿಕೆಟ್‌ ಆಟಕ್ಕೇ. ಅದರಲ್ಲೂ ಬಡತನದ ಹಿನ್ನೆಲೆಯ ಚಿಣ್ಣರು, ಯುವಕರು ಕೈಯಲ್ಲೊಂದು ಬ್ಯಾಟು, ಟೆನ್ನಿಸ್ ಬಾಲು, ಮೂರು ಸ್ಟಂಪ್‌ಗಳೊಂದಿಗೆ ಗಲ್ಲಿಗಳಲ್ಲೋ, ಶಾಲೆಯ ಚಿಕ್ಕಪುಟ್ಟ ಆಟದ ಮೈದಾನದಲ್ಲೋ ಕ್ರಿಕೆಟ್‌ ಆಡುವ ದೃಶ್ಯ ನಿತ್ಯ ಎಲ್ಲೆಡೆ ಕಂಡುಬರುತ್ತದೆ.ಸಾಂಪ್ರದಾಯಿಕವಾಗಿ ಕ್ರಿಕೆಟ್‌ ಆಡುವುದಕ್ಕೆ ತುಸು ಖರ್ಚು ಜಾಸ್ತಿ. ಚರ್ಮದ ಹೊದಿಕೆ ಇರುವ ಗಟ್ಟಿಯಾದ ಚೆಂಡು (ಲೆದರ್ ಬಾಲ್‌), ಅದಕ್ಕೆ ತಕ್ಕುದಾದ ಬ್ಯಾಟ್‌, ಸ್ಟಂಪ್ಸ್, ಪೆಟ್ಟು ತಗುಲದಂತೆ ರಕ್ಷಣೆಗಾಗಿ ಹೆಲ್ಮೆಟ್‌, ಗಾರ್ಡ್‌, ಪ್ಯಾಡ್ಸ್‌, ಗ್ಲೌಸ್‌, ಕಾಲಲ್ಲಿ ಶೂ, ಸಮವಸ್ತ್ರ, ಸುಸಜ್ಜಿತ ಮೈದಾನ, ಮ್ಯಾಟ್‌, ಹೀಗೆ ಹತ್ತು ಹಲವು ಪರಿಕರಗಳಿಗೆ ಖರ್ಚೂ ಅಧಿಕ.ಬಡತದ ಹಿನ್ನೆಲೆಯ ಅದೆಷ್ಟೋ ಪ್ರತಿಭೆಗಳು ಇವನ್ನೆಲ್ಲ ಹೊಂದಿಸಲಾಗದೆ ಕಮರಿ ಹೋಗಿರುವ ಉದಾಹರಣೆಗಳೂ ಅಧಿಕ.

ಅತ್ಯಂತ ಹಿಂದುಳಿದ ಹೈದರಾಬಾದ್‌– ಕರ್ನಾಟಕ ಭಾಗದ ಬಳ್ಳಾರಿಯಲ್ಲಿ ಕ್ರಿಕೆಟ್‌ ಪ್ರತಿಭೆಗಳಿಗೆ ಕೊರತೆಯಿಲ್ಲ. ಕೊರತೆಯಿರುವುದು ಪ್ರೋತ್ಸಾಹ ಮತ್ತು ಅಗತ್ಯ ಸೌಲಭ್ಯಕ್ಕೆ.ಈ ಕೊರತೆ ನೀಗಿಸಲೆಂದೇ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ರಾಜ್ಯದ ವಿವಿಧ ವಿಭಾಗಗಳಲ್ಲಿ ಮೂರು ಹಂತಗಳ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ವರ್ಷವಿಡೀ ಆಯೋಜಿಸುತ್ತಿದ್ದು, ಬಳ್ಳಾರಿಯಲ್ಲೂ 2ನೇ ಡಿವಿಜನ್‌ ಪಂದ್ಯಗಳಿಗೆ ವೇದಿಕೆ ಒದಗಿಸಿದೆ.ತುಮಕೂರು ವಲಯಕ್ಕೆ ಸೇರುವ ಬಳ್ಳಾರಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ನಡೆಯುವ ಲೀಗ್‌ ಪಂದ್ಯಗಳಲ್ಲಿ ಭಾಗವಹಿಸುವ ತಂಡಗಳ ಆಟಗಾರರ ಪ್ರದರ್ಶನ ಮಟ್ಟವನ್ನು ಆಧರಿಸಿ ರಾಜ್ಯ ತಂಡವನ್ನು ಪ್ರತಿನಿಧಿಸಲೂ ಅವಕಾಶ ನೀಡಲಾಗುತ್ತಿದೆ.

14,  16, 19 ಮತ್ತು 25 ವರ್ಷದೊಳಗಿನ ತಂಡಗಳ ಆಯ್ಕೆ ಪ್ರಕ್ರಿಯೆಗೆ ಮೂರೂ ಡಿವಿಜನ್‌ಗಳ ಲೀಗ್‌ ಪಂದ್ಯಗಳ ಪ್ರದರ್ಶನವನ್ನು ಮಾನದಂಡ ಆಗಿಸಿಕೊಂಡು ಅವಕಾಶ  ಕಲ್ಪಿಸಲಾಗುತ್ತದೆ.ಮುಖ್ಯವಾಗಿ ಕ್ರಿಕೆಟ್‌ ಕ್ಲಬ್‌ಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಈ ಕ್ಲಬ್‌ಗಳೂ ಆಟಗಾರರ ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತ ಪ್ರೋತ್ಸಾಹ ನೀಡುತ್ತ, ಸೌಲಭ್ಯವನ್ನೂ ಕಲ್ಪಿಸಿ ಪ್ರತಿಭೆಗಳಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿವೆ. ಚಿಕ್ಕಂದಿನಲ್ಲೇ ಕ್ರಿಕೆಟ್ ಕುರಿತ ಆಸಕ್ತಿ ಹೊಂದಿರುವ ಮಕ್ಕಳನ್ನು ಗುರುತಿಸಿ, ಸಾಧ್ಯವಾದಷ್ಟು ಸಹಾಯ– ಸಹಕಾರ ನೀಡುತ್ತ ಶಿಕ್ಷಣದೊಂದಿಗೇ ಕ್ರೀಡೆಗೂ ಸಹಕಾರಿಯಾಗುವಂತೆ ನೋಡಿಕೊಳ್ಳುತ್ತಿವೆ ಎಂದು ಕೆಎಸ್‌ಸಿಎ ಬಳ್ಳಾರಿ ಸಂಚಾಲಕ ಸುನೀಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.ಸಂಸ್ಥೆ ಕ್ರಿಕೆಟ್ ಅಭಿವೃದ್ಧಿಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಬಳ್ಳಾರಿಯೂ ಸೇರಿದಂತೆ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಮಾಹಿತಿ ಹಾಗೂ ಸೌಲಭ್ಯದ ಕೊರತೆಯಿಂದ ಅಂತಹ ಅನೇಕ ಪ್ರತಿಭೆಗಳು ಎಲೆ ಮರೆ ಕಾಯಿಯಂತಾಗಿ ಕಮರಿ ಹೋಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಟೆನಿಸ್‌ ಬಾಲ್‌ ಕ್ರಿಕೆಟ್‌ನ ಜನಪ್ರಿಯತೆಯೂ ಕಡಿಮೆಯಾಗುತ್ತಿದ್ದು, ಗಮನಾರ್ಹವಾದ ಪಂದ್ಯಾವಳಿಗಳೇ ನಡೆಯದೆ ಪ್ರತಿಭೆಗಳಿಗೆ ಅವ­ಕಾಶ ಇಲ್ಲದಂತಾಗಿದೆ. ಆದರೆ, ಸಾಂಪ್ರದಾಯಿಕ ಕ್ರಿಕೆಟ್‌ಗೆ ವೇದಿಕೆಯಿದ್ದು, ಯುವಕರು ಕ್ಲಬ್‌­ಗಳನ್ನು ಸೇರಿಕೊಂಡು ಪ್ರದರ್ಶನ ನೀಡಬಹುದಾಗಿದೆ ಎಂದು ಅವರು ಹೇಳಿದರು.ಅಂಕಣದ ಕೊರತೆ: ನಗರದ ಕಂಟೋನ್‌ಮೆಂಟ್ ಪ್ರದೇಶದಲ್ಲಿರುವ ವೀರಶೈವ ಮಹಾವಿದ್ಯಾಲ­ಯದ ಆಟದ ಮೈದಾನದಲ್ಲಿ ಸದ್ಯ ಲೀಗ್‌ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ವಾಸ್ತವ­ದಲ್ಲಿ ಬಳ್ಳಾರಿಗರಿಗೆ ಸೂಕ್ತವಾದ ಕ್ರಿಕೆಟ್‌ ಮೈದಾನ ಹಾಗೂ ಟರ್ಫ್‌ ಅಂಕಣದ ಕೊರ­ತೆಯೂ ಇದೆ.ಈ ಕುರಿತು ಮಹಾನಗರ ಪಾಲಿ­ಕೆಗೆ ಕೆಎಸ್‌ಸಿಎ ವತಿಯಂದ ಮನವಿ ಸಲ್ಲಿಸಿ, ಐದ­ರಿಂದ, ಆರು ಎಕರೆ ಜಾಗ ನೀಡುವಂತೆ ಕೋರಲಾ­ಗಿದೆ. ಜಿಲ್ಲಾಡಳಿತ ಈ ಕುರಿತು ಮುತುವರ್ಜಿ ವಹಿಸುವ ಮೂಲಕ ಸುಸಜ್ಜಿತ, ಶಾಶ್ವತ ಕ್ರಿಕೆಟ್‌ ಮೈದಾನ ಹೊಂದಲು ಅನುವು ಮಾಡಿಕೊಡ­ಬೇಕಿದೆ ಎಂದು ಅವರು ವಿವರಿಸಿದರು.ನಲ್ಲಚೆರುವು ಪ್ರದೇಶದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌ಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಅಥ್ಲೆಟಿಕ್‌್ಸ್‌ಗೂ ಸೂಕ್ತ ಉತ್ತೇಜನ ದೊರೆಯುವ ಮಾದರಿಯಲ್ಲಿ ಕ್ರೀಡಾಂಗಣದ ನಿರ್ವಹಣೆ ಇಲ್ಲ.ಕ್ರೀಡಾ ಇಲಾಖೆ ಹಾಗೂ ಜಿಲ್ಲಾಡಳಿತ ಕ್ರೀಡೆಗೆ ಸೂಕ್ತ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಿರ್ವಹಣೆಯ ಹೊಣೆ ಹೊರಬೇಕು. ಅಲ್ಲದೆ, ನಲ್ಲಚೆರುವು ಪ್ರದೇಶದಲ್ಲಿ ಅಥವಾ ಕೋಟೆ ಪ್ರದೇಶದಲ್ಲಿ ಕ್ರಿಕೆಟ್‌ ಮೈದಾನಕ್ಕೆ ಅಗತ್ಯ ಜಾಗ ಒದಗಿಸಿದರೆ ಕೆಎಸ್‌ಸಿಎ ವತಿಯಿಂದಲೇ ಅಗತ್ಯ ಹಣಕಾಸಿನ ವ್ಯವಸ್ಥೆ ಕಲ್ಪಿಸಿ ಟರ್ಫ್‌ ಸೌಲಭ್ಯವುಳ್ಳ ಮೈದಾನದ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.ಬಳ್ಳಾರಿಯಲ್ಲಿ ಒಟ್ಟು ಆರು ಕ್ಲಬ್‌ಗಳಿದ್ದು, ಹೊಸಪೇಟೆ, ಕುಡತಿನಿ, ತೋರಣಗಲ್‌ ಹಾಗೂ ಮುನಿರಾಬಾದ್‌ನ ತಲಾ ಒಂದು ಕ್ಲಬ್‌ 1,2 ಮತ್ತು 3ನೇ ಡಿವಿಜನ್‌ ಹಂತದ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿವೆ. 14, 16, 19 ಮತ್ತು 25 ವರ್ಷದೊಳಗಿನ ತಂಡದ ಆಯ್ಕೆಗಾಗಿ ನಗರದಲ್ಲಿ ಬೇಸಿಗೆ ತರಬೇತಿ ಶಿಬಿರವನ್ನೂ ಆಯೋಜಿಸಲಾಗುತ್ತದೆ.ಆಸಕ್ತರು ದೀಪಕ್‌ ಕಾಕಡೆ (ಮೊಬೈಲ್‌ ದೂರವಾಣಿ ಸಂಖ್ಯೆ 94480– 72539) ಹಾಗೂ ಸುನಿಲ್‌ಕುಮಾರ್‌ (98861– 71222) ಅವರನ್ನು ಸಂಪರ್ಕಿಸಿ ಏಪ್ರಿಲ್‌ ಮಧ್ಯ ಭಾಗದಲ್ಲಿ ಆರಂಭವಾಗುವ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಶುಲ್ಕ ಭರಿಸಲಾಗದ ಬಡ, ಪ್ರತಿಭಾವಂತರಿಗೆ ಸಾಧ್ಯವಾದಷ್ಟು ಉಚಿತ ಅವಕಾಶ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.